ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಅನ್ಯ ರಾಷ್ಟ್ರಗಳೊಂದಿಗೆ ಭಾರತ ಹೊಂದಿರುವ ದ್ವಿಪಕ್ಷೀಯ ರಾಜತಾಂತ್ರಿಕ ಹಾಗೂ ವಾಣಿಜ್ಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುವಂತೆ ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಮೂಲ ನಿವಾಸಿಗಳಿಗೆ ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ ಸಚಿವ ಎಂ.ಜೆ. ಅಕ್ಬರ್ ಮನವಿ ಮಾಡಿದ್ದಾರೆ.
ಭಾರತೀಯ ಮೂಲನಿವಾಸಿಗಳ ಜಾಗತಿಕ ಸಂಘಟನೆ (ಜಿಓಪಿಐಓ) ನಗರದಲ್ಲಿ ಗುರುವಾರ ಆಯೋಜಿಸಿದ್ದ ಜಾಗತಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನ್ಯ ದೇಶಗಳ ಜೊತೆಗಿನ ಸಂಬಂಧಗಳ ವೃದ್ಧಿಗೆ ಭಾರತ ಸರ್ಕಾರದ ಪ್ರಯತ್ನಗಳ ಜೊತೆಗೆ ಆಯಾ ದೇಶಗಳಲ್ಲಿ ನೆಲೆಸಿರುವ ಭಾರತೀಯ ಮೂಲದ ನಿವಾಸಿಗಳು ಕೈಜೋಡಿಸಬೇಕು ಎಂದು ಕರೆ ನೀಡಿದರು.
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾತನಾಡಿ, ದೇಶದ ಆರ್ಥಿಕತೆಗೆ ಇಲ್ಲಿಂದ ವಲಸೆ ಹೋಗಿ ವಿದೇಶಗಳಲ್ಲಿ ನೆಲಸಿರುವ ಭಾರತೀಯ ಮೂಲನಿವಾಸಿಗಳ ಕೊಡುಗೆ ತುಂಬಾ ಇದೆ. ದೇಶದ ಒಟ್ಟು ಜಿಡಿಪಿಯ ಶೇ.3ರಷ್ಟು ಪಾಲು ಅನಿವಾಸಿ ಭಾರತೀಯರಿಂದ ಬರುತ್ತದೆ. ಅನಿವಾಸಿ ಭಾರತೀಯರು ದೇಶದ ಶಕ್ತಿಯುತ ಆಸ್ತಿ ಎಂದರು.
ವಿಜ್ಞಾನ-ತಂತ್ರಜ್ಞಾನ, ರಾಜತಾಂತ್ರಿಕ, ವಾಣಿಜ್ಯ ಕ್ಷೇತ್ರದ ಜಾಗತಿಕ ಖ್ಯಾತಿಯ ಸಂಸ್ಥೆಗಳನ್ನು ಇಂದು ಭಾರತೀಯ ಮೂಲನಿವಾಸಿಗಳು ಮುನ್ನಡೆಸುತ್ತಿದ್ದಾರೆ. ಆದ್ದರಿಂದ ಅನ್ಯ ದೇಶಗಳಲ್ಲಿ ನೆಲಸಿರುವ ಭಾರತೀಯ ಮೂಲನಿವಾಸಿಗಳು ಮಾತೃದೇಶದ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ತಮ್ಮ ಪಾತ್ರ ನಿರ್ವಹಿಸುವ ಅವಕಾಶಗಳನ್ನು ಮರುವ್ಯಾಖ್ಯಾನಿಸುವ ಅಗತ್ಯವಿದೆ.
ದೇಶದ ನೀತಿ ನಿರೂಪಣೆಗಳ ಮಟ್ಟದಲ್ಲೂ ಅನಿವಾಸಿ ಭಾರತೀಯರು ತಮ್ಮ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು. ಸಮಾವೇಶದ ಅಧ್ಯಕ್ಷತೆಯನ್ನು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ವಹಿಸಿದ್ದರು. ಮಹಾರಾಷ್ಟ್ರ ವಿಧಾನಸಭೆಯ ಮುಖ್ಯಸಚೇತಕ ರಾಜ ಕೆ. ಪುರೋಹಿತ, ಜಿಓಪಿಐಓ ಚೇರಮೆನ್ ಡಾ. ಥಾಮಸ್ ಅಬ್ರಾಹಂ, ಅಧ್ಯಕ್ಷ ನೀರಜ್ ಪಿ. ಬಕ್ಷಿ, ಜಾಗತಿಕ ರಾಯಭಾರಿ ಸನ್ನಿ ಕುಲತ್ಕಾಲ, ಮಧ್ಯಪ್ರಾಚ್ಯ ಸಂಯೋಜಕ ಐಸಾಕ್ ಜಾನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಡೆಗಣನೆಗೆ ಅಸಮಾಧಾನ
ಇದೇ ಜ.7ರಿಂದ ನಡೆಯಲಿರುವ ಪ್ರವಾಸಿ ಭಾರತೀಯ ದಿವಸ್ (ಪಿಬಿಡಿ) ನಲ್ಲಿ ತಮ್ಮನ್ನು ಕಡೆಗಣಿಸಿದ್ದಕ್ಕೆ ಭಾರತೀಯ ಮೂಲನಿವಾಸಿ ಗಳ ಜಾಗತಿಕ ಸಂಘಟನೆ (ಜಿಓಪಿ ಐಓ) ಅಸಮಾಧಾನ ವ್ಯಕ್ತಪಡಿಸಿತು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಅವರ ಮುಂದೆ ಈ ವಿಷಯ ಪ್ರಸ್ತಾಪಿಸಿದ ಜಿಓಪಿಐಓ ಅಧ್ಯಕ್ಷ ನೀರಜ್ ಪಿ. ಬಕ್ಷಿ, 2 ದಶಕಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಸಂಘಟನೆ ನಮ್ಮದು.
ಜಿಓಪಿಐಓ ಪ್ರಪಂಚದ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲೂ ಅಸ್ತಿತ್ವ ಹೊಂದಿದೆ. ಆದರೆ, ಭಾರತವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಮಹತ್ವದ ಕಾರ್ಯಕ್ರಮದಲ್ಲಿ ಜಿಓಪಿಐಓ ಸಂಘಟನೆಯನ್ನು ಕಡೆಗಣಿಸಿರುವುದಕ್ಕೆ ನೋವಾಗಿದೆ. ಮುಂದೆ ಈ ರೀತಿಯ ಅನ್ಯಾಯ ಆಗಬಾರದು ಎಂದರು.