ಚಿಕ್ಕಬಳ್ಳಾಪುರ: ಇಂದಿನ ಆಧುನಿಕ ಸಮಾಜದಲ್ಲಿಯು ಕೂಡ ಮಹಿಳೆಯರ ಮೇಲಿನ ದೌರ್ಜನ್ಯ, ದಬ್ಟಾಳಿಕೆಗಳು ನಡೆಯುತ್ತಲೇ ಇದ್ದು, ಮಹಿಳೆಯರಿಗೆ ಸಮಾಜದಲ್ಲಿ ಉಸಿರುಗಟ್ಟಿದ ವಾತಾವರಣ ಇದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಸ್.ಹೆಚ್.ಕೋರಡ್ಡಿ ಕಳವಳ ವ್ಯಕ್ತಪಡಿಸಿದರು. ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಕ್ತಿ ಇಲ್ಲ: ದೇಶದಲ್ಲಿಂದು ಬಲಾಡ್ಯರ ಪರವಾಗಿ ಹೆಚ್ಚು ಕಾನೂನುಗಳ ರಚನೆ ಆಗುತ್ತಿರುವುದರಿಂದ ಜನ ಸಾಮಾನ್ಯರ ಮೇಲೆ ಹಾಗೂ ಮಹಿಳೆಯರ ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆ, ದೌರ್ಜನ್ಯಕ್ಕೆ ಮುಕ್ತಿ ಕಂಡಿಲ್ಲ ಎಂದರು. ಇಂದಿನ ಮಕ್ಕಳು ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕು, ಕಾನೂನು ಅರಿವು ಪಡೆದುಕೊಂಡರೆ ರಕ್ಷಣೆಗೆ ಅನುಕೂಲವಾಗುತ್ತದೆ ಎಂಬುದನ್ನು ಅರಿಯಬೇಕು. ವಿದ್ಯಾರ್ಥಿಯರು ತಮ್ಮ ಮೇಲೆ ಆಗುವ ಯಾವುದೇ ತರದ ದೌರ್ಜನ್ಯಗಳ ಬಗ್ಗೆ ಪೋಷಕರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬೇಕೆಂದರು.
ಮಹಿಳೆಯರ ಮೇಲಿನ ಶೋಷಣೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇದರ ಪೆಡಂಭೂತ ಇಡೀ ವಿಶ್ವಕ್ಕೆ ವ್ಯಾಪ್ತಿಸಿಕೊಂಡಿದೆ. ಸಿರಿಯಾ, ಅಫಘಾನಿಸ್ತಾನ್ ಮತ್ತಿತರ ರಾಷ್ಟ್ರಗಳಲ್ಲಿ ಮಹಿಳೆಯರ ಮೇಲೆ ಸಾಕಷ್ಟು ಹಿಂಸಾಚಾರ ನಡೆಯುತ್ತಿದೆ ಎಂದರು. ಮಹಿಳೆಯರನ್ನು ಸಮಾನವಾಗಿ ಕಾಣುವ ಮನಸ್ಥಿತಿ ಪುರುಷರಲ್ಲಿ ಬರಬೇಕಿದೆ. ಸುಭದ್ರವಾಗಿ ಸಮಾಜ ನಿರ್ಮಾಣ ಆಗಬೇಕಾದರೆ ಮಹಿಳೆಯರ, ಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆ ನಿಲ್ಲಬೇಕೆಂದರು.
ಸಾಕ್ಷಿ ನುಡಿಯಿರಿ: ನ್ಯಾಯಾಲಯಗಳಲ್ಲಿ ಬಹಳಷ್ಟು ಪ್ರಕರಣಗಳು ಸೂಕ್ತ ಸಾಕ್ಷ್ಯಧಾರಗಳ ಕೊರತೆಯಿಂದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುತ್ತಿಲ್ಲ. ಆದ್ದರಿಂದ ಮಹಿಳೆಯರು, ಹೆಣ್ಣು ಮಕ್ಕಳು ನ್ಯಾಯಾಲಯಗಳಲ್ಲಿ ಯಾವುದೇ ಅಂಜಿಕೆ, ಸಂಕೋಚ ಇಲ್ಲದೇ ಸಾಕ್ಷಿ ನುಡಿಯಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ನಾಗರಾಜಯ್ಯ, ಶತಮಾನಗಳಿಂದಲೂ ಮಹಿಳೆಯರ ಮೇಲೆ ಶೋಷಣೆ, ದಬ್ಟಾಳಿಕೆ ನಡೆಯುತ್ತಲೇ ಬಂದಿದೆ. ಇಂದಿನ ನಾಗರಿಕ ಸಮಾಜದಲ್ಲೂ ಕೂಡ ದೌರ್ಜನ್ಯಗಳು ಕಡಿಮೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಧೈರ್ಯವಾಗಿ ಎದುರಿಸಿ: ಮಹಿಳೆಯರು ಸಂವಿಧಾನ ಬದ್ಧವಾಗಿರುವ ತಮ್ಮ ಹಕ್ಕುಗಳ ಬಗ್ಗೆ ಅರಿವು ಪಡೆದುಕೊಂಡು ಸಂಘಟಿತರಾಗಬೇಕು, ತಮ್ಮ ಮೇಲೆ ನಡೆಯುವ ದೌರ್ಜನ್ಯ, ಶೋಷಣೆಯನ್ನು ದಿಟ್ಟವಾಗಿ ಎದುರಿಸಿ ಕಾನೂನು ನೆರವು ಮೂಲಕ ಆಪಾದಿತರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕೆಂದರು.
ಸಂಘಟಿತರಾಗಿ ಖಂಡಿಸಿ: ಸಂವಿಧಾನ ನಮಗೆ ಒದಗಿಸಿರುವ ಹಕ್ಕುಗಳ ಅರಿವು ಇಲ್ಲದಿರುವುದರಿಂದ ಮಹಿಳೆಯರು ಶೋಷಣೆಗೆ ಒಳಾಗುತ್ತಿದ್ದಾರೆ. ಮಹಿಳೆಯರು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು. ಆ ಮೂಲಕ ಸಮಾಜದಲ್ಲಿ ತಮ್ಮ ಮೇಲೆ ನಡೆಯುವ ದೌರ್ಜನ್ಯಗಳನ್ನು ಸಂಘಟಿತವಾಗಿ ಖಂಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್.ದೇವರಾಜ್, ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಸುರೇಶ್ ಬಾಬು, ಖಜಾಂಚಿ ಜಿ.ಎಸ್.ಹರಿಕೃಷ್ಣ, ವಕೀಲರಾದ ಕೆ.ಸಿ.ಪ್ರಕಾಶ್, ಆರ್.ಜಿ.ಗುಂಡೇಗೌಡ, ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ನರಸಿಂಹಮೂರ್ತಿ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುಭದ್ರ ಸಮಾಜ ನಿರ್ಮಾಣ ಆಗಬೇಕಾದರೆ ಇಂದಿನ ವಿದ್ಯಾರ್ಥಿ, ಯುವ ಸಮುದಾಯದಲ್ಲಿ ಕಾನೂನು ಅರಿವು ಮೂಡಿಸುವುದು ಅಗತ್ಯ. ಇದರಿಂದ ತಮ್ಮ ಮೇಲೆ ನಡೆಯುವ ವಿವಿಧ ರೀತಿಯ ಶೋಷಣೆ, ದಬ್ಟಾಳಿಕೆಯನ್ನು ದೈರ್ಯವಾಗಿ ಎದುರಿಸಲು ಸಾಧ್ಯವಾಗುತ್ತದೆ. ಕಾನೂನು ಅರಿವು ಇದ್ದರೆ ತಮ್ಮನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಇತರರ ರಕ್ಷಣೆಗೂ ಮುಂದಾಗಬಹುದು.
-ಎಸ್.ಹೆಚ್.ಕೋರಡ್ಡಿ, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು