Advertisement

ಸಹಕಾರ ಪಟ್ಟಣ ಬ್ಯಾಂಕ್‌ಗಳ ಮೇಲೆ ಗದಾಪ್ರಹಾರ

06:17 PM Jul 23, 2022 | Team Udayavani |

ಕೂಡಲಸಂಗಮ: ರಾಜ್ಯ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಸಹಕಾರ ಪಟ್ಟಣ ಬ್ಯಾಂಕ್‌ಗಳು ಬೆಳೆಯಬಾರದು ಎಂದು ಗದಪ್ರಹಾರ ಮಾಡುತ್ತಿವೆ. ಇದರಿಂದ ಸಹಕಾರಿ ಬ್ಯಾಂಕ್‌ಗಳು ಬಹಳಷ್ಟು ಕಷ್ಟ, ತೊಂದರೆ ಅನುಭವಿಸುತ್ತಿವೆ ಎಂದು ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಹೇಳಿದರು.

Advertisement

ಕೂಡಲಸಂಗಮ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್‌ಗಳ ಮಹಾಮಂಡಳದಿಂದ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕ್‌ಗಳ ಆಡಳಿತ ಮಂಡಳಿ ಸದಸ್ಯರಿಗೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಸಹಕಾರ ಬ್ಯಾಂಕ್‌ ಗಳ ಬೆಳವಣಿಗೆಯಲ್ಲಿ ಬಹಳಷ್ಟು ಜನರ ಶ್ರಮ ಇರುವುದು. ಸರ್ಕಾರ ಬ್ಯಾಂಕ್‌ಗಳ ಬೆಳವಣಿಗೆಗೆ ಸಹಕರಿಸಬೇಕು. ಇಂತಹ ವಿಚಾರ ಸಂಕಿರಣಗಳ ಮೂಲಕ ಬ್ಯಾಂಕ್‌ಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್‌ಗಳ ಮಹಾಮಂಡಳದ ನಿರ್ದೇಶಕಿ ಮಲ್ಲಮ್ಮ ಯಾಳವಾರ ಮಾತನಾಡಿ, ದೇಶದ ಬಡತನ ನಿರ್ಮೂಲನೆಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ನಗರ, ಗ್ರಾಮೀಣ ಪ್ರದೇಶದ ಜನರಿಗೆ ಸಹಕಾರಿ ಕ್ಷೇತ್ರದಿಂದ ಸೌಲಭ್ಯಗಳು ದೊರತಿವೆಯೇ ಹೊರತು ರಾಷ್ಟ್ರೀಕೃತ ಬ್ಯಾಂಕಿನಿಂದಲ್ಲ ಎಂದರು.

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್‌ಗಳ ಮಹಾಮಂಡಳದ ನಿರ್ದೇಶಕ ರಾಜಕುಮಾರ ಬಾದವಾಡಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಯಕತ್ವದ ಗುಣ ಬೆಳೆಸುವುದು ಸಹಕಾರಿ ಬ್ಯಾಂಕಿನ ಗುರಿ. ಸರ್ಕಾರ ಆರ್‌ಬಿಐ ಮೂಲಕ ಸಹಕಾರಿ ಬ್ಯಾಂಕ್‌ಗಳನ್ನು ಕುಗ್ಗಿಸುವ ಕಾರ್ಯ ಮಾಡುತ್ತಿದೆ. ಬ್ಯಾಂಕಿನ ಸಿಬ್ಬಂದಿ ಪ್ರಾಮಾಣಿಕತೆಯಿಂದ ಜನರ ದುಡ್ಡನ್ನು ಸಮರ್ಥವಾಗಿ ಕಾಯುವ ಕಾರ್ಯ ಮಾಡಬೇಕು ಎಂದರು.

ಮಹಾಮಂಡಳದ ನಿರ್ದೇಶಕ ಟಿ.ಆರ್‌. ನಿರಂಜನ, ಕೃಷ್ಣಮೂರ್ತಿ ಭಂಡಾರಿ, ಶರಣಪ್ಪ ವಾರದ, ಮಾಜಿ ನಿರ್ದೇಶಕ ಶಶಿಕಾಂತ ಪಾಟೀಲ ಇದ್ದರು. ಸಮಾರಂಭದ ನಂತರ ಆರ್‌ಬಿಐನ ನಿವೃತ್ತ ಎಜಿಎಂ ಎಚ್‌.ಎಸ್‌. ಮಹಾದೇವಸ್ವಾಮಿ, ಪಟ್ಟಣ ಸಹಕಾರ ಬ್ಯಾಂಕ್‌ಗಳಲ್ಲಿ ಆಡಳಿತ ಮಂಡಳಿ ನಿರ್ದೇಶಕರ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪಾತ್ರ, ಸಹಕಾರ ಸಂಘಗಳ ಅಪರ ನಿಬಂಧಕ ಎಚ್‌.ಎಸ್‌.ನಾಗರಾಜಯ್ಯ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳು ಹಾಗೂ ಪಟ್ಟಣ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ವಸೂಲಾತಿ ನಿರ್ವಹಣೆ ವಿಷಯ ಕುರಿತು ಉಪನ್ಯಾಸ ನೀಡಿದರು. ವಿಚಾರ ಸಂಕಿರಣಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ 300ಕ್ಕೂ ಅಧಿಕ ಸಹಕಾರಿ ಬ್ಯಾಂಕ್‌ಗಳ ಆಡಳಿತ ಮಂಡಳಿ ಸದಸ್ಯರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next