ಬೆಂಗಳೂರು: ಸರಿಯಾದ ಸ್ಥಳಕ್ಕೆ ಕೊರಿಯರ್ ತಂದು ಕೊಡದ ಕೊರಿಯರ್ ಬಾಯ್‌ಗೆ ಚಾಕು ವಿನಿಂದ ಇರಿದಿರುವ ಘಟನೆ ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆಡುಗೋಡಿ ನಿವಾಸಿ ಮೊಹಮ್ಮದ್ ರಫಿ(32) ಚಾಕು ಇರಿತಕ್ಕೊಳಗಾದವ. ಕೃತ್ಯ ಎಸಗಿದ ಆನೇಪಾಳ್ಯ ನಿವಾಸಿ ಅರ್ಬಾಜ್(29) ಎಂಬಾತನ್ನು ಬಂಧಿಸಲಾಗಿದೆ. ಆ.30ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು.
ಗಾಯಾಳು ಮೊಹಮ್ಮದ್ ರಫಿ ಡಿಟಿಡಿಸಿ ಕೊರಿಯರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆರೋಪಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ವಸ್ತುವೊಂದನ್ನು ಆನ್‌ಲೈನಲ್ಲಿ ಬುಕ್ ಮಾಡಿದ್ದ. ಹೀಗಾಗಿ ಆ ಕೊರಿಯರ್ ಕೊಡಲು ಆ.30 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ರಫಿ ಆನೇಪಾಳ್ಯ ಮುಖ್ಯರಸ್ತೆಗೆ ಹೋಗಿದ್ದು, ಆರೋಪಿ ಅರ್ಬಾಜ್‌ಗೆ ಕರೆ ಮಾಡಿ ಮುಖ್ಯರಸ್ತೆಯಲ್ಲಿ ಇದ್ದೇನೆ ಬಂದು ಕೊರಿಯಲ್ ತೆಗೆದುಕೊಂಡು ಹೋಗುವಂತೆ ಹೇಳಿದ್ದನೆ. ಆದರೆ, ಅರ್ಬಾಜ್, ಮುಖ್ಯರಸ್ತೆಯಿಂದ ಒಳ ರಸ್ತೆಗೆ ಬಂದು ಕೊರಿಯರ್ ಕೊಡುವಂತೆ ಹೇಳಿದ್ದಾನೆ. ಆದರೆ, ರಫಿ ಒಳ ರಸ್ತೆಗೆ ಬರುವುದಿಲ್ಲ. ಬೇಕಾದರೆ, ಮುಖ್ಯ ರಸ್ತೆಗೆ ಬಂದು ತೆಗೆದುಕೊಂಡು ಹೋಗುವಂತೆ ತಾಕೀತು ಮಾಡಿದ್ದಾನೆ. ಬಳಿಕ ಅರ್ಬಾಜ್ ತನ್ನ ತಾಯಿಯನ್ನು ಮುಖ್ಯ ರಸ್ತೆಗೆ ಕಳುಹಿಸಿದ್ದಾನೆ. ಆಗ ರಫಿ, ಒಟಿಪಿ ಬೇಕೆಂದು ಹೇಳಿ ತಾಯಿಯನ್ನು ವಾಪಸ್ ಕಳುಹಿಸಿದ್ದಾನೆ. ಅದರಿಂದ ಕೋಪಗೊಂಡ ಆರೋಪಿ, ಮನೆಯಲ್ಲಿದ್ದ ಚಾಕುವನ್ನು ತಂದು ರಫಿಯ ಕುತ್ತಿಗೆ ಹಾಗೂ ಹೊಟ್ಟೆ ಭಾಗಕ್ಕೆ ಇರಿದು ಪರಾರಿಯಾಗಿದ್ದ. ಇತ್ತ ರಕ್ತಸ್ರಾವದಿಂದ ಕೆಳಗೆ ಬಿದ್ದಿದ್ದ ರಫಿಯನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆತನ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಭಾನುವಾರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.