Advertisement

ಕಲಬುರ್ಗಿ ಕೊಲೆ ಕುರಿತು ಸಮಗ್ರ ತನಿಖೆಯಾಗಲಿ

12:10 AM Apr 28, 2019 | Lakshmi GovindaRaj |

ಬೆಂಗಳೂರು: ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಕೊಲೆ ಪ್ರಕರಣದ ಹಿಂದಿರುವ ಸಂಚುಕೋರರು ಮತ್ತು ಸಂಘಟನೆಗಳ ಕುರಿತಂತೆ ಸಮಗ್ರ ತನಿಖೆ ನಡೆಯಬೇಕು ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರುಳಸಿದ್ದಪ್ಪ ಒತ್ತಾಯಿಸಿದರು.

Advertisement

ಜಯನಗರದ ಶ್ರೀ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ ಡಾ.ಎಂ.ಎಸ್‌.ಆಶಾದೇವಿ ಅವರಿಗೆ “ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು, ಸಮಗ್ರ ತನಿಖೆ ಮೂಲಕ ಕಲಬುರ್ಗಿ ಅವರ ಕೊಲೆ ಹಿಂದಿರುವವರು ಯಾರು ಎಂಬುದು ಗೊತ್ತಾಗಬೇಕಿದೆ ಎಂದು ಹೇಳಿದರು.

ಕಲಬುರ್ಗಿ ಅವರ ಸಾಹಿತ್ಯ ಸ್ವರೂಪವನ್ನು ಕೊಂಡಾಡಿದ ಮರುಳಸಿದ್ದಪ್ಪ, ಶರಣ ಸಾಹಿತ್ಯದ ಅನನ್ಯತೆ ಮತ್ತು ಮೂಲ ಸ್ವರೂಪವನ್ನು ಜಗತ್ತಿಗೆ ಅನಾವರಣಗೊಳಿಸಿದವರಲ್ಲಿ ಎಂ.ಎಂ.ಕಲಬುರ್ಗಿ ಅವರು ಪ್ರಮುಖರಾಗಿದ್ದರು. ಶರಣ ಧರ್ಮವನ್ನು ಅವರು ಪ್ರತಿಪಾದಿಸಿದ್ದರು. ಶರಣ ಧರ್ಮಕ್ಕಾಗಿ ಅವರು ಹುತಾತ್ಮರಾದರು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಮಾತನಾಡಿ, ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ಅನುಭವಿಸಲು ಸಾಧ್ಯವಿಲ್ಲ ಎಂಬುದನ್ನು ಪ್ರೊ.ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್‌ ಹತ್ಯೆಗಳು ತೋರಿಸುತ್ತಿವೆ ಎಂದು ದೂರಿದರು.

ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಬಸವಣ್ಣನ ಅನುಯಾಯಿಗಳಲ್ಲೂ ಮೂಲಭೂತವಾದಿಗಳಿದ್ದಾರೆ. ಹದಿವಾರು ವರ್ಷಗಳ ಹಿಂದೆ ನಮ್ಮ ಮಠದಲ್ಲಿ ಎಂ.ಎಂ.ಕಲಬುರ್ಗಿ ಅವರ ನೇತೃತ್ವದಲ್ಲಿ ಶರಣ ಧರ್ಮ ಸ್ಥಾಪನೆ ಬಗ್ಗೆ ಚರ್ಚೆ ನಡೆಯುತ್ತಿತ್ತು ಎಂದರು.

Advertisement

ಪ್ರೊ.ಎಂ.ಎಂ.ಕಲಬುರ್ಗಿಯವರ ಪತ್ನಿ ಉಮಾದೇವಿ, ಪ್ರತಿಷ್ಠಾನದ ಅಧ್ಯಕ್ಷ ಎಂ.ಮಹಾದೇವಯ್ಯ, ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next