ಬೆಂಗಳೂರು: ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಗರದ ಖಾಸಗಿ ಬ್ಯಾಂಕ್ ಮಹಿಳಾ ಉದ್ಯೋಗಿಯೊಬ್ಬರ ಜತೆ ಏರ್‌ಏಷಿಯಾ ಸಂಸ್ಥೆಯ ಮೂವರು ಸಿಬ್ಬಂದಿ ಅಸಭ್ಯವಾಗಿ ವರ್ತಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತು ಸಂತ್ರಸ್ಥ ಯುವತಿ ಏರ್‌ಏಷಿಯಾ ಸಿಬ್ಬಂದಿಯಾದ ಕೈಸರ್, ಸನ್ಮಿತ್ ಹಾಗೂ ಜತಿನ್ ಎಂಬುವವರ ಮೇಲೆ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣ ಕೆಂಪೇಗೌಡ ವಿಮಾನ ನಿಲ್ದಾಣ ಠಾಣೆಗೆ ವರ್ಗಾವಣೆಗೊಂಡಿದ್ದು, ಅಲ್ಲಿನ ಪೊಲೀಸರು ಯುವತಿ ನೀಡಿದ ದೂರಿನ ಅನ್ವಯ ತನಿಖೆ ಮುಂದುವರಿಸಿದ್ದಾರೆ.
ನಗರದ ಖಾಸಗಿ ಬ್ಯಾಂಕ್ ಉದ್ಯೋಗಿ ಆಗಿರುವ ದೂರದಾರೆ ಯುವತಿ ಸದಾಶಿವನಗರದಲ್ಲಿ ನೆಲೆಸಿದ್ದು, ಇತ್ತೀಚೆಗೆ ಕೆಲಸದ ನಿಮಿತ್ತ ರಾಂಚಿಗೆ ತೆರಳಿದ್ದು ನವೆಂಬರ್3ರಂದು ಏರ್‌ಏಷಿಯಾ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಮಾರ್ಗಮಧ್ಯೆ ಆಕೆ ಶೌಚಗಹೃಕ್ಕೆ ತೆರಳಿದಾಗ, ಸ್ವತ್ಛತೆಯಿಲ್ಲದಿರುವುದನ್ನು ಕಂಡು ಸಿಬ್ಬಂದಿಯೊಬ್ಬರಿಗೆ ನೀರುಹಾಕಿ ಸ್ವತ್ಛಗೊಳಿಸುವಂತೆ ತಿಳಿಸಿದ್ದಾರೆ.
ಈ ವಿಚಾರಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಸಿಬ್ಬಂದಿಯೊಬ್ಬ “ನಮ್ಮ ಕೆಲಸ ನಮಗೆ ಗೊತ್ತು ನೀವು ಹೋಗಿ ಕುಳಿತುಕೊಳ್ಳಿ’ ಎಂದಿದ್ದಾನೆ. ಇದೇ ವಿಚಾರವಾಗಿ ಮೂವರು ಸಿಬ್ಬಂದಿ ಹಾಗೂ ಯುವತಿ ನಡುವೆ ಮಾತಿಗೆ ಮಾತು ಬೆಳೆದಿದೆ. ಕಡೆಗೆ ಯುವತಿ ತನ್ನ ಪಾಡಿಗೆ ತಾನು ಕುಳಿತುಕೊಂಡಿದ್ದಾರೆ. ಆದರೆ, ಹೈದ್ರಾಬಾದ್‌ನಲ್ಲಿ ವಿಮಾನ ಲ್ಯಾಂಡ್ ಆದಾಗ ಮೂವರು ಸಿಬ್ಬಂದಿ ಯುವತಿಯ ಪೋಟೋ ತೆಗೆಯಲು ಮುಂದಾದಾಗ ಕ್ಷೇಪಿಸಿದೆ.
ಬಳಿಕ ರಾತ್ರಿ 1 ಗಂಟೆ ಸುಮಾರಿಗೆ ಕೆಐಎಲ್ ವಿಮಾನ ನಿಲ್ದಾಣಕ್ಕೆ ಬಂದಾಗ ಸಹ ಪ್ರಯಾಣಿಕರು ಇಳಿಯುತ್ತಿದ್ದಂತೆ ಮೂವರು ಸಿಬ್ಬಂದಿ ನನ್ನ ಕೈ ಹಿಡಿದು ಎಳೆದಾಡಿದರು. ಅಸಭ್ಯವಾದ ಸನ್ನೆಗಳ ಮೂಲಕ ವರ್ತಿಸಿದರು,’ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.