Advertisement

ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ

06:00 AM Oct 24, 2018 | Team Udayavani |

ಶಿವಮೊಗ್ಗ: ಕಳೆದ ವಿಧಾನಸಭಾ ಚುನಾವಣೆ ವೇಳೆ ಪರಸ್ಪರ ಎದುರಾಳಿಗಳಾಗಿದ್ದ ಕಾಂಗ್ರೆಸ್‌-ಜೆಡಿಎಸ್‌ ಈಗ ಒಂದಾಗಿರುವುದನ್ನು ನೋಡಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದಲೇ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದರು. 

Advertisement

ನಗರದಲ್ಲಿ ಮಂಗಳವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ನೊಂದಿಗೆ ಪ್ರಾದೇಶಿಕ ಪಕ್ಷಗಳ ಮೈತ್ರಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಒಂದು ಮೈಲಿಗಲ್ಲು. ಮುಂದಿನ ದಿನ ಗಳಲ್ಲಿ ಈ ಮೈತ್ರಿ ಉಳಿದ ಪ್ರಾದೇಶಿಕ ಪಕ್ಷಗಳಿಗೆ ಸ್ಫೂರ್ತಿಯಾಗಲಿದೆ. ರಾಷ್ಟ್ರದ ಹಿತಕ್ಕಾಗಿ ಜಾತ್ಯತೀತ ಶಕ್ತಿಗಳು ಒಗ್ಗಟಾಗುವುದು ಅನಿವಾರ್ಯವಾಗಿರುವುದರಿಂದ ಕಾರ್ಯಕರ್ತರ ಮನವೊಲಿಸಲಾಗುತ್ತಿದೆ. ನಮ್ಮಲ್ಲಿ ಈಗ ಯಾವುದೇ ಗೊಂದಲ, ಭೇದ, ಭಿನ್ನಾಭಿಪ್ರಾಯಗಳಿಲ್ಲ. ಎರಡೂ ಪಕ್ಷದವರು ಜನರ ಮುಂದೆ ಒಗ್ಗಟಾಗಿ ಹೋಗಲಿದ್ದೇವೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಅಭಿಪ್ರಾಯದ ಮೇರೆಗೆ ಶಿವಮೊಗ್ಗ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸಲಾಗಿದೆ. ಇದು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಭವಿಷ್ಯ ನುಡಿದರು.

ರಾಹುಲ್‌ ನೇತೃತ್ವದಲ್ಲೇ ಚುನಾವಣೆ: ದೇಶದಲ್ಲಿ ಮೋದಿ ಮತ್ತು ಬಿಜೆಪಿ ಆಡಳಿತದಿಂದ ಮತ್ತು ಆರ್ಥಿಕ ಕುಸಿತದ ಬಗ್ಗೆ
ಬೇಸರಗೊಂಡ ಪ್ರಾದೇಶಿಕ ಪಕ್ಷಗಳು ಬಹಳಷ್ಟಿವೆ. ಈ ಎಲ್ಲ ಪಕ್ಷಗಳನ್ನು ಒಗ್ಗೂಡಿಸಿ ಒಟ್ಟಿಗೆ ಕೆಲಸ ಮಾಡಲು ಯತ್ನಿಸಲಾಗುವುದು. ಮುಂಬರುವ ಲೋಕಸಭೆ ಚುನಾವಣೆಯನ್ನು ಎಐಸಿಸಿ ವರಿಷ್ಠ ರಾಹುಲ್‌ ಗಾಂಧಿ  ನೇತೃತ್ವದಲ್ಲೇ ಎದುರಿಸಲಾಗುವುದು. ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷವಾಗಿದ್ದು, ಬಿಜೆಪಿ ಹೊರತುಪಡಿಸಿದರೆ ಅಧಿಕಾರಕ್ಕೇರುವ ಅವಕಾಶ ಇರುವುದು ಅದಕ್ಕೆ ಮಾತ್ರ. ಹೀಗಾಗಿ, ಕಾಂಗ್ರೆಸ್‌
ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲೇ ಚುನಾವಣೆ
ಎದುರಿಸಬೇಕಾಗುತ್ತದೆ ಎಂದರು. 

ಬಿಜೆಪಿಗೆ ನೈತಿಕತೆ ಇಲ್ಲ: ಬಂಗಾರಪ್ಪ ಅವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ. 2004ರಲ್ಲಿ ಬಿಜೆಪಿ ಸೇರಿ ಪಕ್ಷಕ್ಕೆ ಅತಿ ಹೆಚ್ಚು ಸ್ಥಾನಗಳನ್ನು ತಂದುಕೊಟ್ಟ  ಬಂಗಾರಪ್ಪ ಅವರನ್ನು ಹೇಗೆ ನಡೆಸಿಕೊಂಡರು, ಅವರು ಒಂದೇ ವರ್ಷದಲ್ಲಿ ಪಕ್ಷ ಏಕೆ ಬಿಟ್ಟರು ಎಂಬುದನ್ನು ಬಿಜೆಪಿ ಹೇಳಲಿ. ವೀರಶೈವ ಮುಖಂಡ ರಾಜಶೇಖರಮೂರ್ತಿ ಅವರನ್ನು ಬಿಜೆಪಿಗೆ ಬರಮಾಡಿಕೊಂಡು ಅವರನ್ನು ಹೇಗೆ
ನಡೆಸಿಕೊಂಡರು. ರಾಮಕೃಷ್ಣ ಹೆಗಡೆ ಅವರೊಂದಿಗೆ ಮೈತ್ರಿ ಮಾಡಿಕೊಂಡು ಅವರನ್ನು ಹೇಗೆ ನಡೆಸಿಕೊಂಡರು ಎಂಬುದಕ್ಕೆ ಉತ್ತರ ಕೊಡಲಿ. ಆಮೇಲೆ ಬೇರೆಯವರನ್ನು ಟೀಕಿಸಲಿ ಎಂದು ದೇವೇಗೌಡ ತಾಕೀತು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next