ಬೆಂಗಳೂರು: ಖಾಸಗಿ ಬ್ಯಾಂಕ್ ವ್ಯವಸ್ಥಾಪಕರೊಬ್ಬರು ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಸಂತ್ರಸ್ತ ಮಹಿಳೆ ಶಂಕರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಂಕಪುರದಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯ ವ್ಯವಸ್ಥಾಪಕ ಹನುಮಂತಪ್ಪ ವಿರುದ್ಧ ಮಹಿಳೆ ದೂರು ನೀಡಿದ್ದು, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಲೈಂಗಿಕ ಕಿರುಕುಳ ಹಾಗೂ ಸೆಕ್ಷನ್ 509ರ ಅಡಿಯಲ್ಲಿ ಮಹಿಳೆಯರ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಎಫ್ಐಆರ್ ದಾಖಲಾಗಿದೆ.
ಆದರೆ, ಸಂತ್ರಸ್ತೆ ಮಾಡಿರುವ ಆರೋಪಕ್ಕೆ ಸೂಕ್ತ ಸಾಕ್ಷಾಧಾರಗಳು ಲಭ್ಯವಾಗಿಲ್ಲ. ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವಾಗ ಮ್ಯಾನೇಜರ್ ಹನುಮಂತಪ್ಪ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು.
ಅವರು ಒಬ್ಬರೇ ಇದ್ದಾಗ ಜತೆಯಲ್ಲಿರುವಂತೆ ಒತ್ತಾಯಿಸುತ್ತಿದ್ದರು. ಪತಿ ಮನೆಯಲ್ಲಿ ಇಲ್ಲದಾಗ ಕರೆ ಮಾಡು, ಲಾಡ್ಜ್ಗೆ ಹೋಗೋಣ ಎಂಬ ಕೆಟ್ಟ ಸಂದೇಶಗಳನ್ನು ಕಳುಹಿಸುತ್ತಿದ್ದರು. ಜತೆಗೆ ಅವರ ಛೇಂಬರ್‌ಗೆ ಕರೆದು ಅಶ್ಲೀಲ ಪದ ಬಳಸಿ ಸಂಭಾಷಣೆ ನಡೆಸುತ್ತಿದ್ದರು.
ಮದುವೆಯಾಗಿ ಇಷ್ಟು ವರ್ಷವಾದರು ಮಕ್ಕಳಾಗಿಲ್ಲ. ಹಾಗಾಗಿ ನನ್ನ ಜತೆ ಸಹಕರಿಸು ಎಂದು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಸಂತ್ರಸ್ತೆ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.