ಸುಮಾರು 55 ವರ್ಷಗಳಿಗೂ ಹಿಂದೆ ಒಂದು ಬಾರಿ ಮಂಗಳೂರಿನಿಂದ ಧರ್ಮಸ್ಥಳಕ್ಕೆ ನನ್ನ ತಂದೆ ಕೀರ್ತಿಶೇಷ ಪೂಜ್ಯ ಡಿ. ರತ್ನವರ್ಮ ಹೆಗ್ಗಡೆ ಅವರ ಜತೆಗೆ ನಾನು ಕಾರಿನಲ್ಲಿ ಬರುತ್ತಿದ್ದೆ. ಬಂಟ್ವಾಳ ಪೇಟೆಯನ್ನು ದಾಟುವಾಗ ಪೂಜ್ಯರು ಚಾಲಕನೊಡನೆ ಹೇಳಿದ ಮಾತುಗಳಿವು. ಏರ್ಯ ಲಕ್ಷ್ಮೀನಾರಾಯಣ ಆಳ್ವರಂತಹ ಒಬ್ಬ ಸಜ್ಜನ, ಸಮಾಜ ಸೇವಕ ವ್ಯಕ್ತಿಯನ್ನು ಚುನಾವಣೆಯಲ್ಲಿ ಸೋಲಿಸಿದ್ದಾರಂತೆ. (ಬಹುಶಃ ತಾ.ಪಂ. ಚುನಾವಣೆ ಇರಬೇಕು). ಅವರಂತಹ ವ್ಯಕ್ತಿಗೆ ಇಂತಹ ಸೋಲು ಬರಬಾರದಿತ್ತು ಎಂದದ್ದನ್ನು ಮರೆಯಲಾಗಲಿಲ್ಲ.
Advertisement
ನನಗೆ ಆಳ್ವರ ಪರಿಚಯ ಇರಲಿಲ್ಲ. ಅವರನ್ನು ನೋಡಿದ್ದೂ ಇಲ್ಲ. ಆದರೆ ಮುಂದೆ ಆಳ್ವರು ಪ್ರತಿವರ್ಷ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಬಂದಾಗ, ನಮ್ಮಿಬ್ಬರ ವ್ಯಕ್ತಿತ್ವಗಳೇ ಆಕರ್ಷಿಸಿಕೊಂಡಿರಬೇಕು. ನೋಡಿದ ತತ್‌ಕ್ಷಣ ಮುಖದ ನಗುವೇ ನಮ್ಮನ್ನು ಬರ ಸೆಳೆಯುತ್ತಿತ್ತು. ಯಾರಿಗೂ, ಅಂದರೆ ಭೇಟಿಗೆ ಬಂದ ಇತರರಿಗೆ ಹಾಗೂ ಭಕ್ತರಿಗೆ ನಮ್ಮಿಂದ ತೊಂದರೆ ಆಗಬಾರದೆಂದು, ನಿಧಾನವಾಗಿ ಕುಳಿತು, ನಿಮ್ಮ ಒತ್ತಡದ ಕಾರ್ಯಗಳನ್ನು ಮುಗಿಸಿಕೊಳ್ಳಿ. ಆ ಬಳಿಕ ಮಾತನಾಡುತ್ತೇನೆ ಎಂದು ಹೇಳಿ, ನನ್ನ ಭೇಟಿಯ ಚಟುವಟಿಕೆಗಳನ್ನು ಆಳ್ವರು ಗಮನಿಸುತ್ತಿದ್ದರು. ನನಗೂ ಆ ಸಂದರ್ಭವೇ ಬೇಕಾಗುತ್ತಿತ್ತು. ಏಕೆಂದರೆ ಇತರರಲ್ಲಿ ವ್ಯಾವಹಾರಿಕ ಮಾತು ಅಥವಾ ಅವರ ಸಮಸ್ಯೆಗಳಿಗೆ ಮತ್ತು ಬೇಡಿಕೆಗಳಿಗೆ ಸ್ಪಂದಿಸುವ ಸಂದರ್ಭಗಳಿದ್ದರೆ, ಆರಾಮವಾಗಿ ಕುಳಿತು ಮಾತನಾಡಬೇಕೆನ್ನುವ ಇಚ್ಛೆ ಇರುತ್ತಿತ್ತು.
Related Articles
Advertisement
ಸ್ವಾತಂತ್ರÂ ಪೂರ್ವದ ತುಳುನಾಡಿನ ಜನಜೀವನವನ್ನು ಕಂಡವರು ಆಳ್ವರು. ಅಂತೆಯೇ ಸ್ವಾತಂತ್ರೊéàತ್ತರ ತುಳುನಾಡಿನಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪರಿವರ್ತನೆಗಳಿಂದಾಗಿ ಈ ಮೇಲಿನ ಸಂಪ್ರದಾಯ, ಆಚಾರ-ವಿಚಾರಗಳ ಮತ್ತು ಶ್ರದ್ಧೆಯ ಬಗ್ಗೆ ವ್ಯತ್ಯಾಸಗಳನ್ನು ಗುರುತಿಸುತ್ತಿದ್ದರು. ಕೆಲವು ಬಾರಿ ನೋವಿನಿಂದ ಸಂಕಟ ಪಡುತ್ತಿದ್ದರು. ಬುನಾದಿ ಅಥವಾ ಪಂಚಾಂಗ ಗಟ್ಟಿಯಾಗಿರಬೇಕು. ಅದರ ಮೇಲಿನ ರಚನೆಗಳು ಕಾಲಕಾಲಕ್ಕೆ ಬದಲಾವಣೆ ಆಗಬಹುದು ಮತ್ತು ಬದಲಾಗುವುದು ಸಹಜ ಎನ್ನುವ ಧೋರಣೆಯನ್ನು ಹೊಂದಿದ್ದರು. ಹಾಗಾಗಿ ನಮ್ಮ ಧಾರ್ಮಿಕ ಆಚರಣೆಗಳ ಜವಾಬ್ದಾರಿ ಇರುವ ಆಡಳಿತದಾರರು, ಧರ್ಮದರ್ಶಿಗಳು, ಬೀಡು ಮತ್ತು ಗುತ್ತಿನ ಗುರಿಕಾರರು ಇವರ ಕುರಿತು ಅಭಿಪ್ರಾಯಗಳನ್ನು ಕೊಡುತ್ತಿದ್ದರು. ಅಷ್ಟೇ ಎಚ್ಚರಿಕೆಯಿಂದ ಈ ಧಾರ್ಮಿಕ ಆಚರಣೆಗಳಿಗೆ ಬೇಕಾಗುವ ವಿವಿಧ ಆಚಾರ-ವಿಚಾರಗಳ ಸೇವೆ ಮಾಡುವವರು ಅಥವಾ ಕಾರ್ಯಕರ್ತರ ಬಗ್ಗೆಯೂ ಮಾತನಾಡುತ್ತಿದ್ದರು.
ಪರವ, ಪಂಬದ, ನಲಿಕೆ ಮುಂತಾದ ಶ್ರಮ ಜೀವಿಗಳು ತಮ್ಮ ಆಚರಣೆಯ ವಿಧಿ-ವಿಧಾನಗಳನ್ನು ಮಾಡುವಾಗ ಪಡುವ ಒತ್ತಡಗಳು, ಭಯದಿಂದ ಆಗುವ ಒತ್ತಡಗಳು ಮತ್ತು ಸತ್ಯದರಕ್ಷಣೆಗಾಗಿ ಅವರು ಮಾಡಬೇಕಾದ ಕರ್ತವ್ಯಗಳ ಬಗ್ಗೆಯೂ ಚಿಂತೆ ಮಾಡುತ್ತಿದ್ದರು. ಈ ಕುರಿತು ಅನೇಕ ಸಭೆಗಳನ್ನು, ಸಣ್ಣಪುಟ್ಟ ವಿಚಾರಗೋಷ್ಠಿಗಳನ್ನು ಅವರು ನಡೆಸುತ್ತಿದ್ದರು.ಸ್ವಾತಂತ್ರÂ ಪೂರ್ವದಲ್ಲಿ ಸಾಮಾಜಿಕ ಅಸಮಾನತೆ ಕುರಿತು ಸಾಕಷ್ಟು ಹೋರಾಟ ಮಾಡಿದರು. ಮಹಾತ್ಮ ಗಾಂಧೀಜಿ ಅವರ ಆದರ್ಶಗಳ ಹಿನ್ನೆಲೆಯಲ್ಲಿ ಖಾದಿ ಬಟ್ಟೆ ಧರಿಸುತ್ತಿದ್ದರು ಮತ್ತು ಗಾಂಧಿ ತಣ್ತೀದ ಸರಳ ಜೀವನ ನಡೆಸುತ್ತಿದ್ದರು. ಅವರ ದೀರ್ಘಾಯುಷ್ಯದ ಗುಟ್ಟೇ ಇದು ಆಗಿರಬೇಕು.
ನೀಳವಾದ ಶರೀರ, ತಲೆ ಎತ್ತಿ ನಡೆಯುವ ಆತ್ಮಸ್ಥೈರ್ಯ, ಎಲ್ಲರೊಂದಿಗೆ ಬೆರೆತು ಒಂದಾಗುವ ಮನಸ್ಸು, ಸಾಹಿತ್ಯಾಸಕ್ತಿಯಿಂದಾಗಿ ಸದಾ ಕೈಯಲ್ಲಿ ಒಂದು ಪುಸ್ತಕ, ಅತ್ಯಂತ ಸರಳ ಜೀವನ- ಈ ಕಾರಣದಿಂದಾಗಿ ಪರಿಗ್ರಹಗಳನ್ನು ದೂರಮಾಡಿ ಅಪರಿಗ್ರಹ ತಣ್ತೀದ ಮೇಲೆ ಬದುಕಿದವರು ಆಳ್ವರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಬಂದ ಮೇಲೆ ಅವರು ನಮ್ಮ ಕ್ಷೇತ್ರದ ಚಟುವಟಿಕೆಗಳನ್ನು ಬಹುವಾಗಿ ಮೆಚ್ಚಿಕೊಂಡವರು. ಅವರಿಗೆ ಪ್ರಿಯವಾಗಿದ್ದ, ಆತ್ಮೀಯವಾಗಿದ್ದ ಗ್ರಾಮದ ಮತ್ತು ಸಮಾಜದ ಅತ್ಯಂತ ಕನಿಷ್ಠ ವ್ಯಕ್ತಿಗಳ ಬಗ್ಗೆ ಯೋಜಿತ ಕಾರ್ಯಕ್ರಮಗಳು ಅವರಿಗೆ ಪ್ರಿಯವಾಗಿದ್ದವು. ಸ್ವಾಭಾವಿಕವಾಗಿಯೇ ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರದಲ್ಲಿ ನೀಡುವ ಮಾರ್ಗದರ್ಶನ, ತರಬೇತಿ ಅವರಿಗೆ ಪ್ರಿಯವಾದ ವಿಷಯವಾಗಿತ್ತು.
ನಮ್ಮ ಕಾರ್ಯಕ್ರಮಗಳನ್ನು ರೂಪಿಸಿದ ಮೇಲೆ ಅವರೊಂದಿಗೆ ಚರ್ಚಿಸಿದಾಗ, ಅವರು ಅದನ್ನು ಆಳವಾಗಿ ಅರ್ಥೈಸಿಕೊಂಡು ಕೆಲವು ಸಲಹೆ ನೀಡುತ್ತಿದ್ದರು.ಅವರಿಗೆ ಪ್ರಾಚೀನ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿ ಬಗ್ಗೆ ಇದ್ದ ಗೌರವದಿಂದಾಗಿ ನಮ್ಮ ಧರ್ಮೋತ್ಥಾನ ಟ್ರಸ್ಟ್‌ನ ಸಲಹಾ ಮಂಡಳಿ ಸದಸ್ಯರಾಗಿಯೂ ಸೇವೆ ಮಾಡಿದ್ದಾರೆ. ಟ್ರಸ್ಟ್ ವತಿಯಿಂದ ಮಾಡಿದ ಪುರಾತನ ದೇವಾಲಯಗಳ ಜೀರ್ಣೋದ್ಧಾರ ಅವರಿಗೆ ಪ್ರಿಯವಾದ ವಿಷಯವಾಗಿತ್ತು. ದೇವಾಲಯಗಳು, ಮಠ-ಮಂದಿರಗಳ ಧಾರ್ಮಿಕ ಕಾರ್ಯಗಳಲ್ಲಿ ಆಳ್ವರ ಉಪಸ್ಥಿತಿ ಅನಿವಾರ್ಯವಾಗಿತ್ತು. ಧಾರ್ಮಿಕ, ಸಾಮಾಜಿಕ, ಸಾಹಿತ್ಯ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳನ್ನು ಆಹ್ವಾನಿಸಬೇಕು ಎಂದು ಮತ್ತು ಎಲ್ಲೆಲ್ಲೂ ಚರ್ಚೆಗಳು ಬಂದಾಗ ಅನಿವಾರ್ಯವಾಗಿ ಮೊದಲ ಆಯ್ಕೆ ಆಳ್ವರ ಹೆಸರು.
ಅವರು ಇಳಿವಯಸ್ಸಿನಲ್ಲಿಯೂ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಈಗೀಗ ನನಗೆ ಸ್ವಲ್ಪ ಆಯಾಸವಾಗುತ್ತಿದೆ ಎಂದು ಹೇಳುತ್ತಿದ್ದರು. ತನ್ನ 92ನೇ ವಯಸ್ಸಿನ ವರೆಗೂ ಯಾವುದೇ ಆಹ್ವಾನವನ್ನು ಅವರು ತಿರಸ್ಕರಿಸಿದವರಲ್ಲ. ಆಳ್ವರ ಸಾಹಿತ್ಯ ಪ್ರೇಮ ಸರ್ವವಿದಿತ. ಕವಿಗಳು, ಸಾಹಿತಿಗಳು ಮತ್ತು ಕಲಾವಿದರ ಆತ್ಮೀಯ ಸಂಪರ್ಕ ಅವರಿಗಿತ್ತು. ಅವರು ಧರ್ಮಸ್ಥಳಕ್ಕೆ ಬಂದು ನಮ್ಮೊಂದಿಗೆ ಕುಳಿತು ಸಾಹಿತ್ಯ ವಿಮರ್ಶೆ, ವಿಶ್ಲೇಷಣೆ ಮಾಡುತ್ತಿದ್ದಾಗ ನನ್ನ ಸಹೋದರ ಸುರೇಂದ್ರ, ಅಜ್ಜನಿಗೆ ಕೀಟಲೆ ಕೊಡುವ ಮೊಮ್ಮಗನಂತೆ ಕೀಟಲೆ ಮಾಡುತ್ತಿದ್ದ. ಅಷ್ಟಾವಧಾನದಲ್ಲಿ ಬೇರೆ ಬೇರೆ ರೀತಿಯಲ್ಲಿ ಪ್ರಶ್ನೆ ಕೇಳುವವರಿದ್ದರೂ ಮಧ್ಯೆ ಮಧ್ಯೆ ಅಪ್ರಸ್ತುತ ಪ್ರಸಂಗಿ ಎಂಬ ಒಬ್ಬ ವ್ಯಕ್ತಿ ಇರುತ್ತಾನೆ. ಅಂತೆಯೇ ಸುರೇಂದ್ರ ಅವರಿಗೆ ಸಾಕಷ್ಟು ಕೀಟಲೆ ಮಾಡುತ್ತಿದ್ದ. ಮಧ್ಯೆ ಅವರಿಗೆ ಹಿಂಸೆ ಮಾಡಬೇಡ ಎಂದು ನಾನು ಹೇಳುತ್ತಿದ್ದೆ. ಕವಿಯ ಮಾತನ್ನು ಕೇಳುವ ಕಿವಿ ಇಲ್ಲದಿದ್ದರೆ ಅವರ ಕವಿತ್ವ, ಸಾಹಿತ್ಯ ನಷ್ಟವಾಗುತ್ತದೆ. ಆಳ್ವರೇ, ನೀವು ಕವಿ ನಾನು ಕಿವಿ ಎಂದು ಸುರೇಂದ್ರ ಹೇಳುತ್ತಿದ್ದ. ನಮ್ಮ ಮಗಳು ಶ್ರದ್ಧಾಳ ಮದುವೆ ಸಂದರ್ಭ ಹೇಮಾವತಿ ತನ್ನ ಸಾಹಿತ್ಯ ರಚನಾ ಸಾಮರ್ಥ್ಯದಿಂದ ಕೆಲವು ಶೋಭಾನೆ ಹಾಡುಗಳನ್ನು ರಚಿಸಿ ಸ್ಥಳೀಯ ಸಂಗೀತಗಾರರಿಂದ ಹಾಡಿಸಿದರು. ಆ ಸಂದರ್ಭದಲ್ಲಿ ನಾನು ಆಳ್ವರ ಜತೆಗೆ ಕುಳಿತಿದ್ದೆ. ಮಧ್ಯೆ ಆಳ್ವರು ನನ್ನ ಎಡಕೈಯನ್ನು ಹಿಡಿದು ಖಾವಂದರೆ, ಆ ಪದ್ಯೊನು ಉಂತಾವರೆ ಪನ್ಲ ಎಂದು ಹೇಳಿದರು. ನಾನು ಆಶ್ಚರ್ಯಚಕಿತನಾಗಿ ನೋಡಿದಾಗ ಆಳ್ವರ ಕಣ್ಣುಗಳಲ್ಲಿ ಧಾರಾಕಾರವಾಗಿ ಕಣ್ಣೀರು ಹರಿಯುತ್ತಿತ್ತು. ಇಂತಹ ಶೋಭಾನೆ ಹಾಡನ್ನು ಕೇಳಿದ ಮೇಲೆ ಮಗಳನ್ನು ಮನೆಯಿಂದ ಹೇಗೆ ಕಳುಹಿಸಿ ಕೊಡುತ್ತೀರಿ? ನನಗೂ ಒಬ್ಬಳೇ ಮಗಳು. ನನ್ನಿಂದ ಇದನ್ನು ಸಹಿಸಲಾಗುವುದಿಲ್ಲ ಎಂದು ಅವರು ಭಾವುಕರಾದರು. ಇಂತಹ ಸಹೃದಯ, ಸಜ್ಜನ ಆಳ್ವರನ್ನು ಒಮ್ಮಿಂದೊಮ್ಮೆಲೆ ಕಳೆದುಕೊಂಡಾಗ ದುಃಖವೂ ಆಯಿತು. ಆ ಮೇಲೆ ತತ್‌ಕ್ಷಣ ಚೇತರಿಸಿಕೊಂಡೆ. ಏಕೆಂದರೆ ಸರ್ವಧರ್ಮೀಯರನ್ನೂ ಪ್ರೀತಿಸಿ, ಹಿಂದೂಧರ್ಮ ಮತ್ತು ಸಂಸ್ಕೃತಿಯ ಪ್ರತೀಕವಾಗಿದ್ದ ಅವರಎಂತಹ ಶ್ರೇಷ್ಠ ಬದುಕನ್ನು ನಡೆಸಿದ್ದಾರೆ ಅಂದರೆ ಅವರ ಮರಣಕ್ಕೆ ದುಃಖ ಪಡುವ ಬದಲು ಅವರ ಆದರ್ಶಗಳನ್ನು ಸದಾ ನಮ್ಮೊಂದಿಗಿಟ್ಟುಕೊಂಡು ಜಾಗೃತರಾಗಿರುವುದೇ ಅವರಿಗೆ ಕೊಡುವ ಸೂಕ್ತ ಗೌರವ ಎಂದು ಆಶಿಸುತ್ತಾ, ಅವರ ಆತ್ಮಕ್ಕೆ ಚಿರಶಾಂತಿ ನೀಡುವಂತೆ ಶ್ರೀಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ. – ಡಾ| ಡಿ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಧರ್ಮಾಧಿಕಾರಿ **
“ಏರಿಯಾವನ್ನೆಲ್ಲ ಆಳಿದವರು’
ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರ ಅದೇತಾನೇ ಪ್ರಾರಂಭವಾಗಿತ್ತು. ಕೇಂದ್ರದ ಪ್ರಥಮ ನಿರ್ದೇಶಕರಾಗಿ ವಿದ್ವತ್ಕವಿ ಎಸ್.ವಿ. ಪರಮೇಶ್ವರ ಭಟ್ಟರು ನಿಯುಕ್ತರಾಗಿದ್ದರು. 1968ರ ಜೂನ್ ಅಥವಾ ಜುಲೈ ಮಂಗಳೂರು ಗಣಪತಿ ಹೈಸ್ಕೂಲು ಸಭಾ ಮಂದಿರದಲ್ಲಿ ಎಸ್ವಿಪಿ ಅವರ ಸ್ವಾಗತ- ಅಭಿನಂದನ ಕಾರ್ಯಕ್ರಮ. ಅದರ ಸಂಯೋಜನೆ ಏರ್ಯ ಲಕ್ಷ್ಮೀನಾರಾಯಣ ಆಳ್ವರದು, ಸಭಾಧ್ಯಕ್ಷತೆ ಡಾ| ಶಿವರಾಮ ಕಾರಂತರದು. ಅವರು ಭಾಷಣ ಮಾಡುತ್ತ ಹೇಳಿದರು “ಈ ಏರಿಯಾ’ವನ್ನೆಲ್ಲ ಆಳುತ್ತಿರುವ ಆಳ್ವರು ನನ್ನನ್ನು ಕರೆದಿದ್ದಾರೆ. ಮೈಸೂರಿನ ಈ ನಾಣ್ಯ (ಪ್ರೊ| ಎಸ್ವಿಪಿ) ನಮ್ಮ ಕರಾವಳಿಯಲ್ಲಿ ಹೇಗೆ ಚಲಾವಣೆಯಾಗುತ್ತದೆ ಎಂಬುದನ್ನು ನೋಡುವ ಕುತೂಹಲ ನನಗೂ ಇದೆ’! ಕಾರಂತರು ಹೇಳಿದ ನಾಣ್ಯ ಕರಾವಳಿಯಲ್ಲಿ ಚೆನ್ನಾಗಿ ಚಲಾವಣೆಯಾಯಿತು. ಹಾಗೆಯೇ ಆಳ್ವರ ಕುರಿತು ಹೇಳಿದ “ಏರಿಯಾ’ ಭೌಗೋಳಿಕವಲ್ಲ- ಮಾನಸಿಕ. ಬಹುವಿಧದ ಅಭಿರುಚಿ- ಆಸಕ್ತಿ, ಮನೋಧರ್ಮಗಳ ಜನರನ್ನೆಲ್ಲ ಆಳ್ವರು ತಮ್ಮ ಕಾಂತ ವ್ಯಕ್ತಿತ್ವದಿಂದ ಗೆದ್ದಿದ್ದರು. ಅದನ್ನೇ ಕಾರಂತರು “ಕಾರಂತ ಸಮ್ಮಿತ’ವಾಗಿ ಕಾರಂತ ಶೈಲಿಯಲ್ಲಿ ವರ್ಣಿಸಿದ್ದರು. ಹೌದು- “ಏರ್ಯ ಲಕ್ಷ್ಮೀನಾರಾಯಣ ಆಳ್ವ’ ಎಂಬ ದೀರ್ಘ ನಾಮೋಲ್ಲೇಖ ಬೇಕಾಗಿಲ್ಲ- “ಆಳ್ವ’ ಎಂದರೆ ಸಾಕು. ಅದು ಎಲ್ಲರ ಮನದಗಲವನ್ನು ಹಬ್ಬಿಕೊಳ್ಳುತ್ತದೆ. ಅದಕ್ಕೆ ಮುಖ್ಯ ಕಾರಣ ಸ್ಫಟಿಕ ಶಲಾಕೆಯಂತಹ ಅವರ ಪಾರದರ್ಶಕ ವ್ಯಕ್ತಿತ್ವ. ಹಾಗೆಯೇ ಬಹುವಿಧಾಸಕ್ತಿ, ಆಸಕ್ತಿ ಮಾತ್ರವಲ್ಲ ಅನೇಕ ಕ್ಷೇತ್ರಗಳಲ್ಲಿ ಪ್ರಕಟವಾದ ಅವರ ಅಪರಿಮಿತಿ ಶಕ್ತಿ. ಧರ್ಮ, ಸಮಾಜ, ಸಾಹಿತ್ಯ ಈ ಮೂರೂ ಅವರಿಗೆ ಅತ್ಯಂತ ಪ್ರಿಯ; ಮೂರರಲ್ಲೂ ಅವರಿಗೆ ನಿರಾಯಾಸ ಪ್ರವೇಶ. ಸಾಹಿತ್ಯದಲ್ಲಿ ಅದರ ವಿವಿಧ ಪ್ರಕಾರಗಳೊಂದಿಗೆ ಜಾನಪದದಲ್ಲಿ, ಆರಾಧನ ಕಲೆ ಮತ್ತು ಅದರ ಪದ್ಧತಿ ಪರಂಪರೆಯಲ್ಲಿ ಅವರದು ತಲಸ್ಪರ್ಶಿಯಾದ ಪರಿಜ್ಞಾನ. ಕನ್ನಡದಲ್ಲೂ ತುಳುವಿನಲ್ಲೂ ಅವರದು ಮಿತವಾದರೂ ಮೌಲಿಕವಾದ ಕೃತಿ ರಚನೆ. ಅವರು ಹೈಸ್ಕೂಲಿನ ಹೊಸ್ತಿಲನ್ನು ದಾಟಿದವರಲ್ಲ. ಆದರೆ ಜಗತ್ತಿನ ಅತ್ಯುತ್ಕೃಷ್ಟ ಸಾಹಿತ್ಯಗಳನ್ನೆಲ್ಲ ಆಂಗ್ಲ ಅನುವಾದಗಳಲ್ಲಿ ಓದಿ ಅರಗಿಸಿಕೊಂಡವರು. ಜಾನಪದ ಕೇತ್ರದಲ್ಲಿ ಅವರ ಕ್ಷಮತೆ, ತನ್ಮಯತೆ ಎಷ್ಟಿತ್ತೆಂದರೆ, 1969ರ ಜನವರಿ ಅಂತ್ಯದಲ್ಲಿ ಮಂಗಳೂರಿನಲ್ಲಿ ದ್ವಿತೀಯ ಅಖೀಲ ಕರ್ನಾಟಕ ಜಾನಪದ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಾಗ, ಸ್ವತಃ ಜಾನಪದ ಪ್ರೇಮಿಯಾಗಿದ್ದ ಆಗಿನ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಎಚ್. ಎಲ್. ನಾಗೇಗೌಡರು “ಆಳ್ವರೇ ನಿಮ್ಮ ಆಳ ಈಗ ಗೊತ್ತಾಯಿತು’ ಎಂದು ಉದ್ಗರಿಸಿದ್ದರು! ಆಳ್ವರು ಅಖೀಲ ಕರ್ನಾಟಕ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾಗಿದ್ದವರು. ದಕ್ಷಿಣ ಕನ್ನಡ ಜಿಲ್ಲಾ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾಗಿಯೂ ಇದ್ದವರು. 15ರ ಹರೆಯದಲ್ಲೇ ಹರಿಜನರ ಸಂಘಟನೆಗಾಗಿ ಶ್ರಮ ವಹಿಸಿದವರು. ಅವರು ಕ್ರಿಶ್ಚಿಯನ್ ಬಂಧುಗಳಿಗೂ ಮುಸ್ಲಿಂ ಸೋದರರಿಗೂ ಸ್ವೀಕಾರ್ಯರೂ ಪ್ರಿಯರೂ ಆಗಿದ್ದರು. ಪೇಜಾವರ ಶ್ರೀಪಾದರಿಗೂ ಅವರು ಸಮೀಪ; ಧರ್ಮಸ್ಥಳದ ಹೆಗ್ಗಡೆಯವರಿಗೂ ಆತ್ಮೀಯ- ನಿಜವಾದ ಅರ್ಥದಲ್ಲಿ ಅವರು “ವಸುಧೈವ ಕುಟುಂಬಕ’. ಅವರು “ಇವ ನಮ್ಮವ, ಇವ ನಮ್ಮವ, ಇವ ನಮ್ಮವ’ ಎಂಬಂತೆ ಎಲ್ಲರಿಗೂ ಬೇಕಾದವರು. ಆಳ್ವರು ನಿಜವಾದ ಗಾಂಧೀವಾದಿ. ಆದರೆ ಅವರಿಗೆ ಗಾಂಧೀ ಮಂತ್ರ ಆಲೀ ಬಾಬನಂತೆ ಚಿನ್ನದ ಗುಹೆಯ ಬಾಗಿಲನ್ನು ತೆರೆಯಿಸುವ “ಸೀಸೇಮ್’ ಮಂತ್ರವಾಗಿರಲಿಲ್ಲ. ಅವರು ಮೊಳಹಳ್ಳಿ ಶಿವರಾಯರಿಂದ ಪ್ರೇರಿತರಾದ ಸಹಕಾರಿಯಾಗಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿಯೂ ಇದ್ದವರು. ಆದರೆ ತಮ್ಮ ವ್ಯವಹಾರದಲ್ಲಿ “ಹಲಸಿನ ಮೇಣ’ ತಪ್ಪಿಯೂ ತಮ್ಮ ಕೈಗೆ ಅಂಟದಂತೆ ನೋಡಿಕೊಂಡವರು. ಅವರಿಗೆ ಅನೇಕ ಸಮ್ಮಾನ- ಸತ್ಕಾರ, ಪುರಸ್ಕಾರ ಪ್ರಶಸ್ತಿಗಳು ಬಂದುವು, ಸಂದುವು. ಆದರೆ ಅವುಗಳ ಭಾರದಲ್ಲಿ ಅವರ ಕೊರಳು ಕುಸಿಯಲಿಲ್ಲ. ತಮಗೆ ಏನೂ ಬಂದಿಲ್ಲ ಏನೂ ಸಂದಿಲ್ಲ ಎಂಬಂತೆ, ದೂರದಲ್ಲಿ- ತುಂಬಾ ಎತ್ತರದಲ್ಲಿ ನಿಂತವರು. ಈ ನಮ್ಮ ಆಳ್ವರು ಮೊನ್ನೆ ಶನಿವಾರದ ವರೆಗೂ ನಮ್ಮೊಂದಿಗೇ ಇದ್ದವರು ! ಇದು ಇನ್ನಿಲ್ಲದ ಏರಿಯಾದ ಆ ಅಣ್ಣನಿಗಾಗಿ ತಮ್ಮನೊಬ್ಬನ ಕಂಬನಿ! – ಎಂ. ರಾಮಚಂದ್ರ