Advertisement

ಭಾಷೆಯಿಂದ ಬದುಕಿನ ಸ್ಪಷ್ಟ ಚಿತ್ರಣ ವ್ಯಕ್ತ: ನಾ|ಡಿಸೋಜ

05:32 PM Nov 26, 2018 | |

ಶಿಕಾರಿಪುರ: ಭಾಷೆಗೆ ಸಂವಹನಾ ಶಕ್ತಿಯಿದ್ದು, ಭಾಷೆ ಬದುಕಿನ ಸ್ಪಷ್ಟವಾದ ಚಿತ್ರಣವನ್ನು ನೀಡುತ್ತದೆ. ಆದ್ದರಿಂದ ಬಾಷೆ ಬಳಸಿ ಬರೆದ ಪುಸ್ತಕವನ್ನು ಪ್ರತಿಯೊಬ್ಬರೂ ಪೂಜಿಸುವ ಆರಾಧಿಸುವ ಪದ್ಧತಿ ಅನಾದಿ ಕಾಲದಿಂದ ಚಾಲ್ತಿಯಲ್ಲಿದೆ ಎಂದು ಖ್ಯಾತ ಸಾಹಿತಿ ನಾ. ಡಿಸೋಜ ಅಭಿಪ್ರಾಯಪಟ್ಟರು. ಭಾನುವಾರ ಪಟ್ಟಣದ ಸಾಂಸ್ಕೃತಿಕ ಭವನದ ಸುರಗಿ ವೇದಿಕೆಯಲ್ಲಿ ಜನಸ್ಪಂದನಾ ಟ್ರಸ್ಟ್‌, ಸುವ್ವಿ
ಪಬ್ಲಿಕೇಷನ್‌ ವತಿಯಿಂದ ನಡೆದ ಶಿಕಾರಿಪುರ ಸಾಹಿತ್ಯೋತ್ಸವ -2018 ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸಾಹಿತ್ಯಕ್ಕೆ ವಿಶೇಷವಾದ ಶಕ್ತಿಯಿದೆ. ಸಂಗೀತ, ಚಿತ್ರಕಲೆ, ನೃತ್ಯ, ಶಿಲ್ಪಕಲೆ ಪ್ರದರ್ಶನಕ್ಕೆ ಅಸಾಧ್ಯವಾದ ಜನಾಕರ್ಷಣೆ ಸಾಹಿತ್ಯಕ್ಕೆ ಇದೆ. ಇಂತಹ ಸಮ್ಮೇಳನದಲ್ಲಿ ಸಾಹಿತ್ಯದ ಬಗ್ಗೆ ಚರ್ಚೆ ಅವಲೋಕನಗಳಿಗೆ ವೇದಿಕೆ ದೊರೆಯಲಿದೆ. ಶಿಕಾರಿಪುರದ ಸಾಹಿತ್ಯೋತ್ಸವದ ಮೂಲಕ ಹೊಸ ಮನ್ವಂತರ ಆರಂಭವಾಗುವ ಶುಭ ಸೂಚನೆಗಳಿದೆ ಎಂದು ಪ್ರಶಂಸಿಸಿದ ಅವರು, ಎಲ್ಲಾ ಭಾಷೆಗಳಿಗೆ ಸಂವಹನಾ ಶಕ್ತಿಯಿದ್ದು ಬಾಷೆಯನ್ನು ಬಳಸಿ ಶಬ್ದದ ಮೂಲಕ ರಚಿಸಲಾದ ಪುಸ್ತಕದಿಂದ ಪ್ರತಿಯೊಬ್ಬರಿಗೂ ಹೊಸ ವಿಚಾರ ಆಲೋಚನೆಗಳಿಗೆ ಪ್ರೇರಣೆ ದೊರೆಯಲಿದೆ ಎಂದು ತಿಳಿಸಿದರು. 

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ತಂತ್ರಜ್ಞಾನದಿಂದ ಮಾಹಿತಿ ಮಾತ್ರ ಸಾಧ್ಯ. ಸಾಹಿತ್ಯದಿಂದ ಜ್ಞಾನ ವೃದ್ಧಿಸಲಿದೆ. ದೇಶ ಸುತ್ತಬೇಕು. ಕೋಶ ಓದಬೇಕು. ಇದರಿಂದ ಸಾಕಷ್ಟು ಅನುಭವ ದೊರೆಯಲಿದೆ ಎಂದು ತಿಳಿಸಿದರು.
 
ಕಾಲೇಜು ಅವಧಿಯಲ್ಲಿಯೇ ಕನ್ನಡ ಸಾಹಿತ್ಯ ಲೋಕದ ಹಲವು ದಿಗ್ಗಜರ ಕೃತಿ ಅಧ್ಯಯನದ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕಾಗಿದೆ. ಪದವಿಯಲ್ಲಿನ ಅಂಕದ ಬಗ್ಗೆ ಹೆಚ್ಚಿನ ಗಮನ ನೀಡದೆ ಜೀವನದಲ್ಲಿ ಹೆಚ್ಚು ಅಂಕ ಗಳಿಕೆಗೆ ಸಾಹಿತ್ಯ ಅಧ್ಯಯನ ಅನಿವಾರ್ಯ. ಇದರಿಂದ ವ್ಯಕ್ತಿ ಪರಿಪೂರ್ಣವಾಗಲು ಸಾಧ್ಯ ಎಂದರು. 

ಪ್ರಾಸ್ತಾವಿಕವಾಗಿ ಸಾಹಿತ್ಯೋತ್ಸವ ಸಮಿತಿ ಸಂಚಾಲಕ ಜಿ. ಸುಧಾಕರ್‌ ಹಿರೇಕಸವಿ ಮಾತನಾಡಿ, ತಾಲೂಕು ಐತಿಹಾಸಿಕ, ಸಾಂಸ್ಕೃತಿಕ, ಸಾಹಿತ್ಯಕ ಶ್ರೀಮಂತಿಕೆಯನ್ನು ಹೊಂದಿದ್ದು ದೇಶದ ಸಾಂಸ್ಕೃತಿಕ ಚರಿತ್ರೆಗೆ ಬಹು ದೊಡ್ಡ ಕೊಡುಗೆಯನ್ನು ಸಲ್ಲಿಸಿದೆ ಎಂದು ತಿಳಿಸಿದರು. 

 ಖ್ಯಾತ ಕತೆಗಾರ್ತಿ ಜಯಶ್ರೀ ಕಾಸರವಳ್ಳಿ, ಕವಯತ್ರಿ ಅನಿತಾ ಪಿ. ಪೂಜಾರಿ ತಾಕೋಡೆ ಅವರಿಗೆ ಅಲ್ಲಮ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಟ್ರಸ್ಟ್‌ ಅಧ್ಯಕ್ಷ ಬಿ.ಎನ್‌. ಸುನೀಲ್‌ಕುಮಾರ್‌ ವಹಿಸಿದ್ದರು. ಪುರಸಭಾ ಸದಸ್ಯ ವಸಂತ ಗೌಡ, ಬಿಇಒ ಸಿದ್ದಪ್ಪ, ಭೂಗರ್ಭ ವಿಜ್ಞಾನಿ ಡಾ| ಎಂ.ಷಣ್ಮುಖಪ್ಪ, ಸತೀಶ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next