ಬೀಜಿಂಗ್: ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನ ಮತ್ತೂಂದು ಮಹತ್ತರ ಹೆಜ್ಜೆಯನ್ನಿಟ್ಟಿದ್ದು ತನ್ನ ಟಿಯಾಂ ಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ಮಂಗಳವಾರ ಮೂವರು ಗಗನಯಾತ್ರಿಗಳ ಜತೆಗೆ ಓರ್ವ ನಾಗರಿಕನನ್ನೂ ಕಕ್ಷೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
ಬಾಹ್ಯಾಕಾಶ ನಿಲ್ದಾಣದ ಸಿಬಂದಿ ಬದಲಾವಣೆ ಕಾರ್ಯಾಚರಣೆ ಭಾಗವಾಗಿರುವ ಈ ಯೋಜನೆ ಯಲ್ಲಿ ಇದೇ ಮೊದಲಬಾರಿಗೆ ಸಾಮಾನ್ಯ ನಾಗರಿಕ ನನ್ನು ಸೇರ್ಪಡೆಗೊಳಿಸಲಾಗಿದೆ. ಇದಕ್ಕೂ ಮುನ್ನ ಸೇನಾಧಿಕಾರಿಗಳಿಗೆ ಈ ಅವಕಾಶ ಒದಗಿಸಲಾಗಿತ್ತು.
ಲಾಂಗ್‌ಮಾರ್ಚ್-2ಎಫ್ ಹೆಸರಿನ ರಾಕೆಟ್, ಮೂವರು ಗಗನಯಾತ್ರಿಗಳು ಹಾಗೂ ಓರ್ವ ನಾಗರಿಕನಿದ್ದ “ಶೆಂಝೌ-16′ ಎನ್ನುವ ಬಾಹ್ಯಾಕಾಶ ನೌಕೆಯನ್ನು ಹೊತ್ತು ಸಾಗಿದೆ. ಜಿಯುಕ್ವಾನ್ ಉಪಗ್ರಹ ಉಡಾವಣೆ ಕೇಂದ್ರದಿಂದ ಉಡಾವಣೆಗೊಂಡ 16 ನಿಮಿಷದ ಬಳಿಕ ಶೆಂಝೌ ರಾಕೆಟ್‌ನಿಂದ ಬೇರ್ಪಟ್ಟು ಯಶಸ್ವಿಯಾಗಿ ಕಕ್ಷೆ ಸೇರಿದೆ ಎಂದು ಚೀನಾ ಮ್ಯಾನಡ್ ಸ್ಪೇಸ್ ಏಜೆನ್ಸಿ (ಸಿಎಂಎಸ್‌ಎ) ತಿಳಿಸಿದೆ.