ಅಜೇಯ್‌ರಾವ್ ಅಭಿನಯದ “ತಾಯಿಗೆ ತಕ್ಕ ಮಗ’ ಚಿತ್ರಕ್ಕೆ “ಎ’ ಪ್ರಮಾಣ ಪತ್ರ ನೀಡಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಕಮ್ ನಿರ್ಮಾಪಕ ಶಶಾಂಕ್ ಅವರು ಸೆನ್ಸಾರ್ ಮಂಡಳಿ ಗರಂ ಆಗಿದ್ದಾರೆ. ಚಿತ್ರದಲ್ಲಿ “ಎ’ ಪ್ರಮಾಣ ಕೊಡುವಂತಹ ದೃಶ್ಯಗಳಾಗಲಿ, ಸಂಭಾಷಣೆಯಾಗಲಿ ಇಲ್ಲ. ಆದರೂ, ಸೆನ್ಸಾರ್ ಮಂಡಳಿ “ಎ’ ಪ್ರಮಾಣ ಪತ್ರ ನೀಡಿದೆ. ನಾನು ನಿಜಕ್ಕೂ “ತಾಯಿಗೆ ತಕ್ಕ ಮಗ’ ಚಿತ್ರಕ್ಕೆ “ಎ’ ಪ್ರಮಾಣ ಪತ್ರ ಸಿಗುತ್ತೆ ಎಂದು ನಿರೀಕ್ಷಿಸಿರಲಿಲ್ಲ.
ಚಿತ್ರ ವೀಕ್ಷಿಸಿದವರು “ಎ’ ಪ್ರಮಾಣ ಪತ್ರ ನೀಡಿದ್ದಾರೆ. ಅವರ ಅವರ ದೃಷ್ಟಿಕೋನಕ್ಕೆ ಸರಿ ಎನಿಸಿರಬಹುದು. ಆದರೆ, ಅದೆಲ್ಲದ್ದಕ್ಕೂ ಅ.29 ರ ಸೋಮವಾರ ಒಂದು ಸ್ಪಷ್ಟತೆ ಸಿಗಲಿದೆ’ ಎಂದಿದ್ದಾರೆ. ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಶಶಾಂಕ್, “ಯಾಕೆ ಚಿತ್ರಕ್ಕೆ “ಎ’ ಪ್ರಮಾಣ ಪತ್ರ ನೀಡಲಾಗಿದೆ ಎಂಬುದು ಗೊತ್ತಿಲ್ಲ. ಸದ್ಯಕ್ಕೆ ನನಗೇನೂ ಗೊತ್ತಾಗುತ್ತಿಲ್ಲ. ಆ ಬಗ್ಗೆ ಯೋಚನೆ ಮಾಡುತ್ತಿದ್ದೇನೆ.
ನವೆಂಬರ್ 16 ರಂದು ಚಿತ್ರ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಯಾವ ಕಾರಣಕ್ಕೂ ಬಿಡುಗಡೆ ದಿನಾಂಕ ಬದಲಾವಣೆ ಮಾಡುವುದಿಲ್ಲ. ಇಲ್ಲಿ ನಾನೇ ನಿರ್ಮಾಪಕನೂ ಆಗಿರುವುದರಿಂದ ಇನ್ನಷ್ಟು ಒತ್ತಡವಿದೆ. ಚಿತ್ರಮಂದಿರಗಳು ಈಗಾಗಲೇ ಪಕ್ಕಾ ಆಗಿವೆ. ಚಿತ್ರ ನೋಡಿದ ಸೆನ್ಸಾರ್ ಮಂಡಳಿ ಸಾಕಷ್ಟು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಅಲ್ಲಿ ಸೂಕ್ಷ್ಮ ಅಂಶಗಳೂ ಇವೆ. ಆದರೆ, ಅದು ಅವರ ದೃಷ್ಟಿಕೋನದಲ್ಲಿ ಸರಿ ಎನಿಸಿಲ್ಲ.
ಏನು ಮಾಡೋಕ್ಕಾಗುತ್ತೆ. ಹಣ ಹಾಕಿ ಸಿನಿಮಾ ಮಾಡಿದ್ದೇವೆ. ಸದ್ಯಕ್ಕೆ ಆ ಕುರಿತು ಚರ್ಚಿಸುತ್ತಿದ್ದೇನೆ. ಸೋಮವಾರ ನನ್ನ ನಿರ್ಧಾರ ಹೇಳುತ್ತೇನೆ. ಹತ್ತು ವರ್ಷಗಳ ಹಿಂದೆ ಬಿಡುಗಡೆಯಾದ ನನ್ನ ನಿರ್ದೇಶನದ “ಮೊಗ್ಗಿನ ಮನಸು’ ಚಿತ್ರಕ್ಕೂ “ಎ’ ಪ್ರಮಾಣ ಪತ್ರ ಕೊಡಲಾಗಿತ್ತು. ಆಗ ಕೂಡ ಬಿಡುಗಡೆ ದಿನಾಂಕ ಆನೌನ್ಸ್ ಮಾಡಲಾಗಿತ್ತು. ಆದರೆ, ನಿರ್ಮಾಪಕ ಕೃಷ್ಣಪ್ಪ ಅವರು ರಿವೈಸಿಂಗ್ ಕಮಿಟಿಗೆ ಹೋದರು. ಅಲ್ಲಿ ಹೋರಾಟ ನಡೆಸಿದಾಗ, ಚಿತ್ರಕ್ಕೆ “ಯು/ಎ’ ಪ್ರಮಾಣ ಪತ್ರ ಸಿಕ್ಕಿತು.
ಆಮೇಲೆ ಸಿನಿಮಾ ನೋಡಿದಮೇಲೆ ಅಲ್ಲೇನಿತ್ತು ಎಂಬುದು ಗೊತ್ತಾಯ್ತು. ಇನ್ನು, “ಜರಾಸಂಧ’ ಚಿತ್ರ ಮಾಡಿದಾಗಲೇ ನನಗೆ ಚಿತ್ರಕ್ಕೆ “ಎ’ ಪ್ರಮಾಣ ಪತ್ರ ಸಿಗುತ್ತೆ ಎಂಬುದು ಗೊತ್ತಿತ್ತು. ಯಾಕೆಂದರೆ, ಚಿತ್ರದ ಕಂಟೆಂಟ್ ಹಾಗೆ ಇತ್ತು. ಆಲ್ಲಿ ಅಂಡರ್‌ವರ್ಲ್ಡ್ ವಿಷಯವಿತ್ತು. “ಎ’ ಕೊಟ್ಟಿದ್ದಕ್ಕೆ ತಕರಾರು ಇರಲಿಲ್ಲ. ಆದರೆ, “ತಾಯಿಗೆ ತಕ್ಕ ಮಗ’ ಚಿತ್ರಕ್ಕೇಕೆ “ಎ’ ಕೊಡಲಾಗಿದೆ ಎಂಬುದೇ ಪ್ರಶ್ನೆ’ ಎಂದು ಬೇಸರಿಸಿಕೊಳ್ಳುತ್ತಾರೆ ಶಶಾಂಕ್.