Advertisement

ನಿಯಮ ಉಲ್ಲಂಘಿಸಿದರೆ ತಿಳಿ ಹೇಳುವ ಸಿಸಿ ಕ್ಯಾಮೆರಾ

05:53 AM Jul 02, 2020 | Lakshmi GovindaRaj |

ಬೆಂಗಳೂರು: ಸಾರ್ವಜನಿಕರೇ ಎಚ್ಚರ! ಕೋವಿಡ್‌ 19 ಅಟ್ಟಹಾಸದ ನಡುವೆಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಘಿಸುತ್ತ ಅಡ್ಡಾದಿಡ್ಡಿ ಓಡಾಡುತ್ತಿದ್ದಿರಾ? ಹಾಗಾದರೆ, ಇನ್ಮುಂದೆ ರಸ್ತೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ನಿಮ್ಮ ತಪ್ಪನ್ನು ಗುರುತಿಸಿ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡುತ್ತದೆ.

Advertisement

ಅನಂತರವೂ ಎಚ್ಚೆತ್ತುಕೊಳ್ಳದಿದ್ದರೆ ಸಮೀಪದಲ್ಲಿರುವ ಪೊಲೀಸರೇ ನಿಮಗೆ ಖಡಕ್‌ ವಾರ್ನಿಂಗ್‌ ಕೊಡಲಿದ್ದಾರೆ. ಈಶಾನ್ಯ ವಿಭಾಗದ  ಪೊಲೀಸರು ಖಾಸಗಿ ಸಂಸ್ಥೆಯೊಂದರ ಸಹಯೋಗದಲ್ಲಿ ಇಂತಹ ನೂತನ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ನಗರದ ದೀವಿಯಾ ಸಾಫ್ಟ್ವೇರ್‌ ಸಂಸ್ಥೆ ಸಾಮಾಜಿಕ ಅಂತರವನ್ನು ದಾಖಲಿಸುವ ತಂತ್ರಾಂಶ ಹೊಂದಿರುವ ಸಿಸಿಟಿವಿ ಕ್ಯಾಮೆರಾ  ಸಿದ್ಧಪಡಿಸಿದ್ದು, ಅದನ್ನು ಈಶಾನ್ಯ ವಿಭಾಗದ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆಯೊಂದರಲ್ಲಿ ಅಳವಡಿಸಿದೆ.

ಕರ್ಫ್ಯೂ ಉಲ್ಲೇಖ: ನಗರದಲ್ಲಿ ಇದೀಗ ರಾತ್ರಿ ಕರ್ಫ್ಯೂ ಜಾರಿಗೆ ಬಂದಿದ್ದು, ರಾತ್ರಿ 7 ಗಂಟೆ  ನಂತರ ಸಾರ್ವಜನಿಕರು ಓಡಾಡುತ್ತಿದ್ದರೆ, ಐದಕ್ಕಿಂತ ಅಧಿಕ ಮಂದಿ ನಿಂತಿದ್ದರೆ, ಅದನ್ನೂ ಈ ಕ್ಯಾಮೆರಾ ಗುರುತಿಸಿ ಧ್ವನಿವರ್ಧಕದ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸುತ್ತದೆ. ಜತೆಗೆ ನಗರದಲ್ಲಿ ಈ ಸಮಯದಿಂದ ಕರ್ಫ್ಯೂ  ಜಾರಿಯಲ್ಲಿದ್ದು, ಕೂಡಲೇ ಮನೆಗೆ ತೆರಳುವಂತೆ ಆದೇಶಿಸುತ್ತದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಕರಣ ಇಲ್ಲ, ಜಾಗೃತಿ ಮಾತ್ರ: ಸಿಸಿಟಿವಿ ಕ್ಯಾಮೆರಾ  ದಿಂದ ಸಾಕಷ್ಟು ಅನಕೂಲವಾಗಿದ್ದು, ಅದರ  ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಅದರಿಂದ ಪೊಲೀಸರ ಕೆಲಸದೊತ್ತಡ ಸ್ವಲ್ಪ ಕಡಿಮೆಯಾಗುತ್ತದೆ. ಆದರೆ, ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಜಾಗೃತಿ ನೀಡುವ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ  ಎಂದು ಈಶಾನ್ಯ ವಿಭಾಗದ ಪೊಲೀಸರು ಮಾಹಿತಿ ನೀಡಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ದೀವಿಯಾ ಸಂಸ್ಥೆಯ ಸಹ ಸಂಸ್ಥಾಪಕ ಅಪೂರ್ವ ಅನ್ಕದ್‌, ಪೊಲೀಸ್‌ ಇಲಾಖೆಗೆ ಈ ಆಧುನಿಕ ತಂತ್ರಾಂಶ ಹೊಂದಿರುವ ಕ್ಯಾಮೆರಾವನ್ನು  ಉಚಿತವಾಗಿ ನೀಡಲಾಗಿ ದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನೆ ಮುಖ್ಯವಾಗಿ ಅಧ್ಯಯನ ನಡೆಸಿ ಕ್ಯಾಮೆರಾ ಸಿದ್ಧಪಡಿಸಲಾಗಿದೆ. ಕ್ಯಾಮೆರಾ ನಿರ್ವಹಣೆಯನ್ನು ಪೊಲೀಸ್‌ ಇಲಾಖೆಗೆ ನೀಡಲಾಗಿದೆ. ಹಿರಿಯ ಪೊಲೀಸ್‌  ಅಧಿಕಾರಿಗಳ ಒಪ್ಪಿಗೆ ಮೇರೆಗೆ ಇತರೆಡೆ ಹಾಕಬಹುದು ಎಂದು ಹೇಳಿದರು.

Advertisement

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎಚ್ಚರಿಕೆ: ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ತಂತ್ರಾಂಶ ಹೊಂದಿರುವ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಕ್ಯಾಮೆರಾ ಸುಮಾರು 150-200 ಮೀಟರ್‌ ದೂರದಲ್ಲಿ  ಸಂಚರಿಸುವ ಪ್ರತಿಯೊಬ್ಬ ಸಾರ್ವಜನಿಕರನ್ನು ಗುರುತಿಸುತ್ತದೆ. ಅಲ್ಲದೆ, ಅವರ ಸಾಮಾಜಿಕ ಅಂತರದ ಮಾಹಿತಿ ಪಡೆದುಕೊಂಡು, ಅಂತರ ಕಾಯ್ದುಕೊಂಡಿರುವ ವ್ಯಕ್ತಿಗಳನ್ನು ಹಸಿರು ಬಣ್ಣದಿಂದ ಗುರುತಿಸಿದರೆ, ಅಂತರ  ಕಾಯ್ದುಕೊಳ್ಳದಿದ್ದರೆ ಕೆಂಪು ಬಣ್ಣದಿಂದ ಗುರುತಿಸುತ್ತದೆ. ಜತೆಗೆ ಉಲ್ಲಂಘನೆ ಮಾಡುವವರ ಸಂಖ್ಯೆಯನ್ನು ದಾಖಲಿಸುತ್ತದೆ. ಅನಂತರ ಧ್ವನಿವರ್ಧಕ ಮೂಲಕ ಕನ್ನಡದಲ್ಲೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಕೆ  ನೀಡುತ್ತದೆ.

ಜಾಗೃತಿ ಮೂಡಿಸುವ ಕ್ಯಾಮೆರಾದಿಂದ ಪೊಲೀಸ್‌ ಇಲಾಖೆಗಿಂತ ಸಮಾಜ ಮತ್ತು ಸಾರ್ವಜನಿಕರಿಗೆ ಉಪಯೋಗವಾಗಲಿದೆ. ಇದೇ ಮೊದಲ ಬಾರಿಗೆ ಈ ರೀತಿಯ ತಂತ್ರಾಂಶದ ಕ್ಯಾಮೆರಾ ಬಳಸಿಕೊಳ್ಳಲಾಗುತ್ತಿದೆ. ಮುಖ್ಯವಾಗಿ ಸಾಮಾಜಿಕ  ಅಂತರದ ಬಗ್ಗೆ ಗಮನಹರಿಸುತ್ತದೆ.
-ಡಾ ಭೀಮಾಶಂಕರ್‌ ಗುಳೇದ್‌, ಈಶಾನ್ಯ ವಿಭಾಗದ ಡಿಸಿಪಿ

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next