Advertisement

ಮಿಂಚಿಪದವು ಪಾಳು ಬಾವಿಗೆ ಎಂಡೋ ಸುರಿದ ಪ್ರಕರಣ- ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ಭೇಟಿ

12:23 AM Dec 29, 2023 | Team Udayavani |

ಈಶ್ವರಮಂಗಲ: ಕೇರಳದ ಪ್ಲಾಂಟೇಶನ್‌ ಕಾರ್ಪೊರೇಶನ್‌ನ ಗೋದಾಮುಗಳಲ್ಲಿ ಉಳಿದಿದ್ದ ವಿಷಕಾರಕ ಕೀಟನಾಶಕ ಎಂಡೋಸಲ್ಫಾನ್‌ ಅನ್ನು ಅಕ್ರಮ ಮತ್ತು ಅವೈಜ್ಞಾನಿಕವಾಗಿ ಪಾಳುಬಾವಿಗೆ ಸುರಿಯಲಾಗಿದೆ ಎನ್ನಲಾದ ಕೇರಳ – ಕರ್ನಾಟಕ ಗಡಿ ಪ್ರದೇಶವಾದ ಮಿಂಚಿಪದವಿಗೆ ಕರ್ನಾಟಕ ಹಾಗೂ ಕೇರಳ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಹಸುರು ನ್ಯಾಯಮಂಡಳಿಯ ದಕ್ಷಿಣ ಪೀಠವು ಕರ್ನಾಟಕ ಹಾಗೂ ಕೇರಳ ಸರಕಾರ, ಕರ್ನಾಟಕ ಹಾಗೂ ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಇತರರಿಗೆ ನೋಟಿಸ್‌ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಮರುಜೀವ ಬಂದಿದೆ.

ಮೊದಲಿಗೆ ಈಶ್ವರ ಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅಧಿಕಾರಿಗಳು ತಾಲೂಕು ಆರೋಗ್ಯ ಅಧಿಕಾರಿ ಡಾ| ದೀಪಕ್‌ ರೈ ಅವರಿಂದ ಮಾಹಿತಿ ಸಂಗ್ರಹಿಸಿದರು. ಅನಂತರ ಮಿಂಚಿಪದವಿಗೆ ಭೇಟಿ ನೀಡಿ ಕೇರಳ ಪ್ಲಾಂಟೇಶನ್‌ ಕಾರ್ಪೊರೇಶನ್‌ ಕಚೇರಿ ಯಿಂದ ಮಾಹಿತಿ ಪಡೆದರು. ಗೋದಾಮಿನಲ್ಲಿರುವ ಎಂಡೋ ಸಲ್ಪಾನ್‌ ಡಬ್ಬಗಳಿಂದ ಮಾದರಿ ಸಂಗ್ರಹ, ಪಕ್ಕದ ಬಾವಿಯಿಂದ ನೀರಿನ ಸ್ಯಾಂಪಲ್‌ ಪಡೆದುಕೊಂಡರು.

ಮಣ್ಣು ಸಂಗ್ರಹ
ಎಂಡೋಸಲ್ಫಾನ್‌ ಹೂಳಲಾಗಿದೆ ಎನ್ನುವ ಬಾವಿಯ ಪರಿಶೀಲನೆ ನಡೆಸಿ, ಮೇಲ್ಪದರದ ಒಂದು ಅಡಿ ಆಳದಿಂದ ಮಣ್ಣನ್ನು, ಸಮೀಪದಲ್ಲಿರುವ ಕೆರೆಗಳ ನೀರನ್ನು ಸಂಗ್ರಹಿಸಿಕೊಂಡರು. ಎಂಡೋ ವಿರೋಧಿ ಹೋರಾಟ ಗಾರರು, ಗ್ರಾಮದ ಪ್ರಮುಖರು ತಮ್ಮಲ್ಲಿರುವ ಮಾಹಿತಿಯನ್ನು ಅಧಿಕಾರಿಗಳ ಗಮನಕ್ಕೆ ತಂದರು.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಬೆಂಗಳೂರು ಪ್ರಾದೇಶಿಕ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಬಾಬು, ಪ್ರಯೋಗಾಲಯ ಸಹಾಯಕ ನಿಖೀಲ್‌, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಡಾ| ರವಿ ಡಿ.ಆರ್‌., ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಅಧೀಕ್ಷಕ ಆದರ್ಶ ಟಿ. ವಿ. ತಂಡದಲ್ಲಿದ್ದರು.
ನೆಟ್ಟಣಿಗೆ ಮುಟ್ನೂರು ಗ್ರಾ.ಪಂ. ಸದಸ್ಯ ಶ್ರೀರಾಮ್‌ ಪಕ್ಕಳ, ಮಾಜಿ ಅಧ್ಯಕ್ಷ ಕುಮಾರ್‌ನಾಥ ರೈ, ಮಾಜಿ ಸದಸ್ಯ ಅಬ್ದುಲ್‌ ಖಾದರ್‌, ಅಶ್ರಫ್‌, ರಾಮಚಂದ್ರ ಉಪಸ್ಥಿತರಿದ್ದರು.

Advertisement

ಸಿಬಂದಿ – ಗ್ರಾಮಸ್ಥರ ವಾಗ್ವಾದ
ಎಂಡೋಸಲ್ಫಾನ್‌ ಹೂತಿರುವ ಬಾವಿಯ ಮೇಲ್ಮೆ„ಯ ಮಣ್ಣನ್ನು ಸಂಗ್ರಹಿಸುತ್ತಿದ್ದಾಗ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, ಪರೀಕ್ಷೆಗೆ ಮೇಲ್ಮೆ„ ಮಣ್ಣನ್ನು ತೆಗೆಯದೆ ಸುಮಾರು 60 ಅಡಿ ಆಳದಿಂದ ತೆಗೆಯಬೇಕು ಎಂದು ಆಗ್ರಹಿಸಿದರು. ಅದಕ್ಕೆ ಬೆಲೆಕೊಡದ ಅಧಿಕಾರಿಗಳು ಮೇಲ್ಮೆ„ ಮಣ್ಣನ್ನು ಸಂಗ್ರಹಿಸಿ ಪ್ಲಾಸ್ಟಿಕ್‌ ಡಬ್ಬಕ್ಕೆ ಹಾಕಿದರು.

ನ್ಯಾಯ ಮಂಡಳಿಯ ಆದೇಶದಂತೆ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಸಮಸ್ಯೆ ಗೊಳಗಾದ ಹಾಗೂ ಗೇರು ತೋಟದ ಸ್ಥಳದಿಂದ ಮಣ್ಣಿನ ಮಾದರಿ, ನೀರಿನ ಮಾದರಿ ಸಂಗ್ರಹಿಸಿದ್ದೇವೆ. ಸ್ಥಳೀಯ ಆರೋಗ್ಯ ಕೇಂದ್ರಗಳ ಅಧಿಕಾರಿ ಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ.
– ಜೆ. ಚಂದ್ರಬಾಬು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಪ್ರಾದೇಶಿಕ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next