ಶಿವಮೊಗ್ಗ: ಮಲೆನಾಡು ಭಾಗವನ್ನು ಬಹುವಾಗಿ ಕಾಡುವ ಮಂಗನ ಕಾಯಿಲೆ ಬೇಸಿಗೆ ಆರಂಭವಾಗುತ್ತಿದ್ದಂತೆ ಮತ್ತೆ ಕಾಣಿಸಿಕೊಂಡಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಈ ವರ್ಷದ ಮೊದಲ ಕೆಎಫ್‌ಡಿ ಪ್ರಕರಣ ವರದಿಯಾಗಿದೆ.
ತೀರ್ಥಹಳ್ಳಿ ತಾಲೂಕಿನ ಗುತ್ತಿಯಡೆಹಳ್ಳಿ ಬಳಿಯ ಹಳ್ಳಿಬೈಲು ಗ್ರಾಮದ 54 ವರ್ಷದ ವ್ಯಕ್ತಿಯೊಬ್ಬರಿಗೆ ಕೆಎಫ್‌ಡಿ ಪಾಸಿಟಿವ್ ದೃಢಪಟ್ಟಿದೆ. ನಾಲ್ಕೈದು ದಿನದಿಂದ ಅವರು ಜ್ವರದಿಂದ ಬಳಲುತ್ತಿದ್ದರು. ಪರೀಕ್ಷೆ ಮಾಡಿದಾಗ ಕೆಎಫ್‌ಡಿ ಇರುವುದು ಪತ್ತೆಯಾಗಿದೆ.
ಜ್ವರದ ಲಕ್ಷಣ ಇಲ್ಲದಿದ್ದರೂ ಎರಡು ದಿನ ಅವರನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲೆಯೇ ಉಳಿಸಿ ನಿಗಾ ವಹಿಸಲಾಗುತ್ತಿದೆ. ಅವರ ಮನೆಯ ಉಳಿದ ಸದಸ್ಯರಿಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಆ ಊರಿನ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಡಿಎಚ್‌ಒ ಡಾ| ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.