ಬೆಂಗಳೂರು: ಬೆಂಗಳೂರಿನ ಕೆಲವು ಶಾಲೆಗಳಲ್ಲಿ ಮಕ್ಕಳ ಶಾಲಾ ಬ್ಯಾಗ್ ಪರಿಶೀಲಿಸಿದಾಗ ಕಾಂಡೋಮ್, ಗರ್ಭಪಾತ ಗುಳಿಗೆ, ಮದ್ಯ ಮಿಶ್ರಿತ ನೀರು ಇತ್ಯಾದಿಗಳು ಸಿಕ್ಕಿರುವ ಪ್ರಕರಣಕ್ಕೆ ಸಂಬಂಧಿಸಿ ಸರಕಾರವು ಈಗಲಾದರೂ ಎಚ್ಚೆತ್ತು ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ನೀಡಲು ಮುಂದಾಗುವುದು ಸರಿಯಾದ ಕ್ರಮ ಎಂದು ಕೆಲ ಶಿಕ್ಷಣ ತಜ್ಞರು ಹಾಗೂ ವೈದ್ಯಕೀಯ ತಜ್ಞರು ಒಕ್ಕೊರಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ತಜ್ಞರಾದ ವಿ.ಪಿ. ಪ್ರೊ| ನಿರಂಜನಾರಾಧ್ಯ, ವೈದ್ಯಕೀಯ ತಜ್ಞರಾದ ಡಾ| ಶ್ರೀನಿವಾಸ ಕಕ್ಕಿಲ್ಲಾಯ, ಡಾ| ಜಿ.ರಾಮಕೃಷ್ಣ, ಸಾಹಿತಿಗಳಾದ ಡಾ| ಕೆ. ಮರುಳಸಿದ್ದಪ್ಪ, ಪ್ರೊ| ಎಸ್.ಜಿ. ಸಿದ್ದರಾಮಯ್ಯ, ಪ್ರೊ| ಕಾಳೇಗೌಡ ನಾಗವಾರ, ಡಾ| ವಸುಂಧರಾ ಭೂಪತಿ, ಡಾ| ವಿಜಯ, ಸುರೇಂದ್ರ ರಾವ್ ಅವರು ಪತ್ರಿಕಾ ಹೇಳಿಕೆ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸರಕಾರವು ಈಗಲಾದರೂ ಎಚ್ಚೆತ್ತು ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ನೀಡಲು ಕ್ರಮ ವಹಿಸಬೇಕು. ಈಗಾಗಲೇ ಹಲವು ದೇಶಗಳಲ್ಲಿ ಇದು ಜಾರಿಯಲ್ಲಿದ್ದು, ಅಂತಾರಾಷ್ಟ್ರೀಯ ಸಂಸ್ಥೆಗಳಾದ ಯುನಿಸೆಫ್ ಮತ್ತು ಯುನೆಸ್ಕೊ ಸಂಸ್ಥೆಗಳು ಇದಕ್ಕೆ ಸೂಕ್ತ ಪಠ್ಯಕ್ರಮ ಹಾಗೂ ಮಾಡೆಲ್ ಗಳನ್ನು ತಯಾರಿಸಿವೆ. ಅವನ್ನೇ ಇಲ್ಲೂ ಬಳಸಲು ಸಾಧ್ಯವಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಲೈಂಗಿಕ ಶಿಕ್ಷಣ ನೀಡಬೇಕು
ಬಹಳ ವರ್ಷಗಳಿಂದಲೂ ಹಲವು ಪ್ರಗತಿಪರರು, ಶಿಕ್ಷಣ ತಜ್ಞರು ಮತ್ತು ವೈದ್ಯಕೀಯ ಕ್ಷೇತ್ರದ ಗಣ್ಯರು ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದಾರೆ. ಮಕ್ಕಳು ಹದಿಹರಯದಲ್ಲಿ ತಮ್ಮ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗಳನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಂಡರೆ ಯಾವುದೇ ಗೊಂದಲ, ಆತಂಕಗಳಿಗೆ ಈಡಾಗದೆ ಅವನ್ನು ನಿಭಾಯಿಸಲು ಶಕ್ತರಾಗುತ್ತಾರೆ. ಆದರೆ, ನಮ್ಮ ಸರಕಾರಗಳು ಲೈಂಗಿಕ ಶಿಕ್ಷಣವನ್ನು ಅವೈಜ್ಞಾನಿಕ ಹಾಗೂ ಮಡಿವಂತಿಕೆಯ ದೃಷ್ಟಿಯಿಂದ ನೋಡುವ ಮೂಲಕ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ವಿರೋಧಿಸಿದ ಕಾರಣ ಇಂದು ಮಕ್ಕಳು ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬ ಗೊಂದಲಕ್ಕೆ ಸಿಲುಕುತ್ತಿರುವುದು ಮತ್ತು ಪ್ರಯೋಗಗಳಿಗೆ ಮುಂದಾಗು ವಂತಾಗಿದೆ.
Related Articles
ಕೋವಿಡ್ ಕಾಲದಲ್ಲಿ ಒಂದೆರಡು ವರ್ಷ ಶಾಲೆಗಳನ್ನು ಮುಚ್ಚಿದ್ದರಿಂದ ಮಕ್ಕಳ ಮಾನಸಿಕ, ದೈಹಿಕ, ಬೌದ್ಧಿಕ ಆರೋಗ್ಯ ಹಾಗೂ ಬೆಳವಣಿಗೆಗಳ ಮೇಲೆ ಗಂಭೀರ ಪರಿಣಾಮಗಳಾಗಿವೆ. ಶಾಲೆಗಳಲ್ಲಿ ಮಕ್ಕಳ ಮೇಲೆ ನಿಗಾವಣೆಯಿಲ್ಲದೆ ಸಮಸ್ಯೆಗಳಾಗುತ್ತವೆ ಎಂದು ನಾವು ಜೂನ್ 2020ರಿಂದಲೇ ಎಚ್ಚರಿಕೆ ನೀಡಿದ್ದೆ ವು. ಮಕ್ಕಳಿಗೆ ನೇರ ಶಿಕ್ಷಣವಷ್ಟೇ ನೀಡಬೇಕೆಂದೂ, ಮೊಬೈಲ್ ಸಾಧನಗಳ ಮೂಲಕ ಆನ್‌ಲೈನ್ ಪಾಠ ಮಾಡುವುದು ಹಲವು ತರಹದ ತೊಂದರೆಗಳನ್ನುಂಟು ಮಾಡಲಿವೆ ಎಂದೂ ಎಚ್ಚರಿಸಿದ್ದೆವು. ಅವನ್ನೆಲ್ಲ ಕಡೆಗಣಿಸಿ ಮಾಡಬಾರದ್ದನ್ನು ಮಾಡಿದ್ದರ ದುಷ್ಪರಿಣಾಮಗಳನ್ನೇ ಈಗ ಕಾಣುತ್ತಿದ್ದೇವೆ ಎಂದು ವಿಷಾದಿಸಿದ್ದಾರೆ.
ಏನಿದು ಪ್ರಕರಣ?
ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡುತ್ತಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲಿಸಿದಾಗ ಕಾಂಡೋಮ್, ಗರ್ಭಪಾತ ಗುಳಿಗೆ, ಮದ್ಯ ಮಿಶ್ರಿತ ನೀರು ಇತ್ಯಾದಿಗಳು ಪತ್ತೆಯಾಗಿತ್ತು. ಇದನ್ನು ಕಂಡು ಶಿಕ್ಷಕರೇ ಒಂದು ಕ್ಷಣ ದಂಗಾಗಿದ್ದಾರೆ.