Advertisement

Mangaluru ಪೊಲೀಸರ ಕೊಲೆಗೆ ಯತ್ನಿಸಿದ ಪ್ರಕರಣ: ಇಬ್ಬರಿಗೆ ಹತ್ತು ವರ್ಷ ಜೈಲು ಶಿಕ್ಷೆ ಪ್ರಕಟ

12:36 AM Sep 10, 2024 | Team Udayavani |

ಮಂಗಳೂರು: ಉಳ್ಳಾಲ ಪೊಲೀಸ್‌ ಠಾಣೆಯ ಪೊಲೀಸ್‌ ಸಿಬಂದಿಯ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಜೈಲು ಮತ್ತು ತಲಾ 16 ಸಾವಿರ ರೂ. ದಂಡ ವಿಧಿಸಿದೆ. ಪ್ರಕರಣದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

Advertisement

ಉಳ್ಳಾಲ ನಿವಾಸಿಗಳಾದ ಒಂದನೇ ಆರೋಪಿ ಮುಸ್ತಾಕ್‌ (32) ಮತ್ತು ನಾಲ್ಕನೇ ಆರೋಪಿ ಜಾಕೀರ್‌ (36) ಶಿಕ್ಷೆಗೊಳಗಾದವರು. ಎರಡನೇ ಆರೋಪಿ ಯಾಸೀನ್‌ ಮತ್ತು ಮೂರನೇ ಆರೋಪಿ ಅಶ್ರಫ್‌ ಸಮೋಸ (50) ತಲೆಮರೆಸಿಕೊಂಡಿದ್ದಾರೆ.

ಪ್ರಕರಣದ ವಿವರ
2015ರ ಡಿಸೆಂಬರ್‌ 17ರಂದು ರಾತ್ರಿ 11.15ರ ವೇಳೆ ಈ ನಾಲ್ವರು ಉಳ್ಳಾಲ ಗ್ರಾಮದ ಉಳ್ಳಾಲ ಸಯ್ಯದ್‌ ಮದನಿ ದರ್ಗಾದ ಮುಖ್ಯದ್ವಾರದ ಬಳಿ ಸಾರ್ವಜನಿಕ ಸ್ಥಳದಲ್ಲಿ ಬಾಟಲಿಗಳನ್ನು ಎಸೆದು ಗಲಾಟೆ ಮಾಡುತ್ತಿದ್ದ ಮಾಹಿತಿ ಹಿನ್ನೆಲೆಯಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಉಮೇಶ್‌ ಮತ್ತು ಕಾನ್‌ಸ್ಟೆಬಲ್‌ ರವೀಂದ್ರ ಅವರು ಪಿಸಿಆರ್‌ ವಾಹನದಲ್ಲಿ ಸ್ಥಳಕ್ಕೆ ತೆರಳಿದ್ದರು. ಗಲಾಟೆ ಬಗ್ಗೆ ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮಲ್ಲಿ ಒಬ್ಬರನ್ನು ಕೊಲೆ ಮಾಡಿದರೆ ಬುದ್ಧಿ ಬರುತ್ತದೆ ಎಂದು ಪೊಲೀಸರನ್ನು ಉದ್ದೇಶಿಸಿ ಹೇಳಿ, ಒಂದನೇ ಆರೋಪಿ ಮುಸ್ತಾಕ್‌ ತನ್ನ ಕೈಯಲ್ಲಿದ್ದ ಚಾಕುವಿನಿಂದ ರವೀಂದ್ರ ಅವರನ್ನು ಕೊಲ್ಲುವ ಉದ್ದೇಶದಿಂದ ಎದೆಗೆ ತಿವಿಯಲು ಬಂದಾಗ ಜತೆಗಿದ್ದ ಉಮೇಶ್‌ ತಡೆದಿದ್ದಾರೆ. ಈ ವೇಳೆ ಒಂದನೇ ಆರೋಪಿ ಮತ್ತು ಇತರರು ರವೀಂದ್ರ ಅವರ ಕೈಗಳನ್ನು ಹಿಡಿದು ಬಲವಾಗಿ ತಿರುಗಿಸಿದ್ದು, ಮುಸ್ತಾಕ್‌ ಚೂರಿಯಿಂದ ತಿವಿದಾಗ ರವೀಂದ್ರ ಅವರು ಕೈ ಅಡ್ಡ ಹಿಡಿದ ಪರಿಣಾಮ ಎಡಕೈಯಲ್ಲಿ ರಕ್ತಗಾಯ ಉಂಟಾಗಿತ್ತು. ಆರೋಪಿಗಳು ಉಮೇಶ್‌ ಅವರಿಗೂ ಹೊಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು.

ಉಳ್ಳಾಲ ಠಾಣೆಯ ಆಗಿನ ಪಿಎಸ್‌ಐ ಗುರಪ್ಪ ಕಾಂತಿ ಅವರು ಐಪಿಸಿ ಕಲಂ 504, 506, 353, 332, 207 ಮತ್ತು ಸಹ ಕಲಂ 34ರಡಿ ಅಪರಾಧ ಎಸಗಿದ್ದಾರೆ ಎಂದು ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್‌.ವಿ. ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿದ್ದಾರೆ. ಐಪಿಸಿ ಕಲಂ 504ರಡಿ 2 ವರ್ಷ ಕಾರಾಗೃಹವಾಸ ಮತ್ತು 2 ಸಾವಿರ ರೂ. ದಂಡ, 506 ರಡಿ 7ವರ್ಷ ಜೈಲು ಮತ್ತು 5 ಸಾವಿರ ರೂ. ದಂಡ, 353ರಡಿ 2 ವರ್ಷ ಜೈಲು 2 ಸಾವಿರ ರೂ. ದಂಡ, 332ರಡಿ 2 ವರ್ಷ ಜೈಲು 2 ಸಾವಿರ ರೂ. ದಂಡ, 307ರಡಿ 10 ವರ್ಷ ಜೈಲು ಮತ್ತು 5 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

Advertisement

ಪ್ರಕರಣದಲ್ಲಿ ಆರಂಭಿಕವಾಗಿ ಸರಕಾರಿ ಅಭಿಯೋಜಕರಾದ ಬಿ.ಶೇಖರ್‌ ಅವರು ಇಬ್ಬರು ಸಾಕ್ಷಿದಾರರ ವಿಚಾರಣೆ ನಡೆಸಿದ್ದರು. ಉಳಿದ ಸಾಕ್ಷಿದಾರರ ವಿಚಾರಣೆ ಮತ್ತು ವಾದ ಮಂಡನೆಯನ್ನು ಸರಕಾರಿ ಅಭಿಯೋಜನಕ ಚೌಧರಿ ಮೋತಿಲಾಲ್‌ ಅವರು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next