ಅರಂತೋಡು: ಆಸ್ತಿ ವಿಷಯಕ್ಕೆ ಸಂಬಂಧಿಸಿ ತಂದೆ ಮತ್ತು ಮಗಳ ನಡುವೆ ಜಗಳ ಉಂಟಾಗಿ ಸ್ವತಃ ಮಗಳೇ ತಂದೆಯ ಕೃಷಿ ತೋಟದ ಬಾಳೆ ಹಾಗೂ ಅಡಿಕೆ ಗಿಡಗಳನ್ನು ಕತ್ತರಿಸಿರುವ ಮತ್ತು ಕೃಷಿ ಯಂತ್ರಗಳನ್ನು ಹಾನಿಗೊಳಿಸಿರುವ ಘಟನೆ ಸಂಪಾಜೆ ಗ್ರಾಮದ ಗಡಿಕಲ್ಲಿನಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿ ತಂದೆ ಮತ್ತು ಮಗಳು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಪಾಜೆಯ ಗಡಿಕಲ್ಲಿನ ನಿವಾಸಿ ಇಬ್ರಾಹಿಂ ಹಾಗೂ ಅವರ ಮಗಳು ಆಯಿಶತುಲ್ ಪೌಮ್ಯ ಅವರು ಒಂದೇ ಕಡೆ ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದು ಕಳೆದ ಎರಡು ದಿನಗಳ ಮೊದಲು ಮಗಳು ಇಬ್ರಾಹಿಂ ಅವರ ಕೃಷಿ ತೋಟದಲ್ಲಿ ಬಳಸುವ ಸ್ಪ್ರಿಂಕ್ಲರ್ ಯಂತ್ರಗಳನ್ನು ಹಾಳು ಮಾಡಿದ್ದಲ್ಲದೆ ಬಾಳೆ ಮತ್ತು ಅಡಿಕೆ ಗಿಡಗಳನ್ನು ಕತ್ತರಿಸಿ ಹಾನಿ ಮಾಡಿದ್ದಲ್ಲದೇ ಕೊಟ್ಟಿಗೆಯಲ್ಲಿ ಶೇಖರಿಸಿಟ್ಟಿದ್ದ ಕಟ್ಟಿಗೆಗೆ ಬೆಂಕಿ ಕೊಟ್ಟಿದ್ದರು. ಈ ಬಗ್ಗೆ ಇಬ್ರಾಹಿಂ ಮಗಳ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಘಟನೆಗೆ ಸಂಬಂಧಿಸಿ ಮೇ 8ರಂದು ಆಯಿಶತುಲ್ ಪೌಮ್ಯ ಕೂಡ ಸುಳ್ಯ ಠಾಣೆಯಲ್ಲಿ ತಂದೆ ಮತ್ತು ತಾಯಿ ವಿರುದ್ಧ ದೂರು ನೀಡಿದ್ದಾರೆ. ನನ್ನ ಮನೆಯ ಪಕ್ಕದಲ್ಲಿಯೇ ಇರುವ ಹೆತ್ತವರು ಮೇ 7ರಂದು ಅಕ್ರಮವಾಗಿ ಮನೆಗೆ ಪ್ರವೇಶಿಸಿ ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಅಲ್ಲದೇ ಗೇಟಿಗೆ ಬೀಗ ಹಾಕಿ ಹೋಗಿದ್ದಾರೆ. ನನ್ನ ಹೆಸರಲ್ಲಿರುವ ಆಸ್ತಿಯನ್ನು ವಶಪಡಿಸಲು ಅವರು ತೊಂದರೆ ನೀಡುತ್ತಿದ್ದಾರೆ. ಹೀಗಾಗಿ ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖೀಸಿದ್ದಾರೆ.