ಮೈಸೂರು: ಕಾಂಪೌಂಡ್ ಹಾಗೂ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರನ್ನು ಹೊರತರಲು ಯತ್ನಿಸಿದ ಇಬ್ಬರು ಯುವಕರು ವಿದ್ಯುತ್ ಸಂಪರ್ಕ ಸಾಧಿಸಿ ದಾರುಣವಾಗಿ ಮೃತಪಟ್ಟ ಘಟನೆ ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿ ನಡೆದಿದೆ. ಯುವಕರ ಸಹಾಯಕ್ಕೆ ಬಂದ ಮೂವರು ಗಾಯಗೊಂಡಿದ್ದಾರೆ.
ಅಶೋಕಾ ಪುರಂ ನಿವಾಸಿಗಳಾದ ಕಿರಣ್ ಹಾಗೂ ರವಿಕುಮಾರ್ ಮೃತ ದುರ್ದೈವಿಗಳು. ಇವರ ನೆರವಿಗೆ ಬಂದ ರವಿ, ಸಂದೇಶ್, ಶಿವಕುಮಾರ್ ವಿದ್ಯುತ್ ಶಾಕ್ ನಿಂದ ಗಾಯಗೊಂಡು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ ತಡರಾತ್ರಿ ಘಟನೆ ನಡೆದಿದೆ. ಸಂಸದ ಶ್ರೀನಿವಾಸ್ ಪ್ರಸಾದ್ ರವರ ಸಂಬಂಧಿಕರಿಗೆ ಸೇರಿದ ಇನೋವಾ ಕಾರನ್ನು ಟ್ರಯಲ್ ನೋಡುವುದಾಗಿ ರವಿಕುಮಾರ್ ಪಡೆದಿದ್ದಾರೆ. ಮಾನಂದವಾಡಿ ರಸ್ತೆಯಲ್ಲಿ ರವಿಕುಮಾರ್, ಭಾಸ್ಕರ್, ರವಿ, ಸಂದೇಶ್ ಹಾಗೂ ಶಿವಕುಮಾರ್ ಆಶೋಕಾಪುರಂ ನತ್ತ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಕಾಂಪೌಂಡ್ ಗೆ ಢಿಕ್ಕಿ ಹೊಡೆದು ನಂತರ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ.
ಇದನ್ನೂ ಓದಿ:ಪ್ರವಾಸಿಗರೇ ಗಮನಿಸಿ..: ಉತ್ತರ ಕನ್ನಡ ಜಿಲ್ಲೆಯ ಜಲಪಾತಗಳ ವೀಕ್ಷಣೆಗೆ ನಿರ್ಬಂಧ
ಕಾರಿನಿಂದ ನಾಲ್ವರೂ ಹೊರಬಂದ ನಂತರ ವಿದ್ಯುತ್ ತಂತಿ ಸಂಪರ್ಕ ಪಡೆದಿದೆ. ಕಾಂಪೌಂಡ್ ಹಾಗೂ ಕಂಬದ ನಡುವೆ ಸಿಲುಕಿದ ಕಾರನ್ನ ಹೊರತರಲು ಯತ್ನಿಸಿದ್ದಾರೆ. ಈ ವೇಳೆ ಆಟೋದಲ್ಲಿ ಬರುತ್ತಿದ್ದ ಡ್ರೈವರ್ ಕಿರಣ್ ಕುಮಾರ್ ನೆರವಿಗೆ ಬಂದಿದ್ದಾರೆ. ಕಾರನ್ನು ಹೊರತರುವ ಯತ್ನದಲ್ಲಿದ್ದ ಇವರಿಗೆ ವಿದ್ಯುತ್ ಸಂಪರ್ಕ ಸಾಧಿಸಿದೆ. ಹೈವೋಲ್ಟೇಜ್ ತಂತಿ ಸಂಪರ್ಕ ಸಾಧಿಸಿದ ಪರಿಣಾಮ ರವಿಕುಮಾರ್ ಕುಸಿದು ಬಿದ್ದಿದ್ದಾರೆ. ನೆರವಿಗೆ ಬಂದ ಆಟೋಡ್ರೈವರ್ ಕಿರಣ್ ರವರೂ ಸಹ ಮೃತಪಟ್ಟಿದ್ದಾರೆ. ಇವರಿಬ್ಬರ ನೆರವಿಗೆ ಬಂದ ರವಿ, ಸಂದೇಶ್, ಶಿವಕುಮಾರ್ ಗೂ ಶಾಕ್ ಹೊಡೆದಿದೆ. ಐವರನ್ನೂ ಕೆ.ಆರ್.ಆಸ್ಪತ್ರೆಗೆ ಸಾಗಿಸಲಾಗಿದೆ. ರವಿಕುಮಾರ್ ಹಾಗೂ ಕಿರಣ್ ಮೃತಪಟ್ಟಿದ್ದಾರೆ.
ಮೂವರಿಗೆ ಗಾಯಗಳಾಗಿವೆ. ಭಾಸ್ಕರ್ ಅವಘಢದಿಂದ ತಪ್ಪಿಸಿಕೊಂಡಿದ್ದಾರೆ. ಕೆ.ಆರ್.ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ