ಚಿಕ್ಕೋಡಿ: ಕೃಷ್ಣಾ ನದಿಗೆ ನಿರ್ಮಾಣವಾಗುತ್ತಿರುವ ಚೆಂದೂರ ಟೇಕ್-ಟಾಕಳಿ ಮಾರ್ಗದ ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತು ಒಂದು ದಶಕ ಸಮೀಪಿಸಿದೆ. ಆದರೂ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಮನಸ್ಸು ಮಾಡುತ್ತಿಲ್ಲ, ಹೀಗಾಗಿ ಸರ್ಕಾರದ ಧೋರಣೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.
ನೆರೆಯ ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಚೆಂದೂರ ಟೇಕ್-ಟಾಕಳಿ ಮಾರ್ಗದ ಸೇತುವೆ ನಿರ್ಮಾಣ ಕಾಮಗಾರಿಗೆ ರಾಜ್ಯ ಸರ್ಕಾರ 18.17 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಕಳೆದ 2013ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್)ದಿಂದ ಮಂಜೂರಾಗಿದ್ದು, 2015ರಲ್ಲಿ ಕಾಮಗಾರಿ ಆರಂಭವಾಗಿದೆ. ಆದರೆ ಅಲ್ಲಿಂದ ಇಲ್ಲಿಯವರಿಗೆ ಸೇತುವೆ ಕಾಮಗಾರಿ ಶೇ 20ರಷ್ಟ್ರು ಮಾತ್ರ ಮುಗಿದಿದೆ ಉಳಿದ ಕಾಮಗಾರಿ ಬಾಕಿ ಉಳಿದುಕೊಂಡಿದೆ. ಸೇತುವೆ ಪೂರ್ಣಗೊಳಿಸಲು ಸರ್ಕಾರಕ್ಕೆ ಎಷ್ಟು ವರ್ಷ ಕಾಲಾವಕಾಶ ಬೇಕಾಗುತ್ತದೆ ಎನ್ನುವುದು ಸ್ಥಳೀಯ ರೈತರ ಪ್ರಶ್ನೆ.
ರಾಜ್ಯದ ಗಡಿ ಭಾಗದ ಜನರು ನೆರೆಯ ಮಹಾರಾಷ್ಟ್ರದ ಸುಕ್ಷೇತ್ರ ನರಸಿಂಹವಾಡಿ, ಖೇದರಾಪುರ ಹಾಗೂ ಮುಂತಾದ ಕಡೆಗಳಿಗೆ ಹೋಗಲು ಈ ಸೇತುವೆ ತುಂಬ ಅನುಕೂಲಕರವಾಗಲಿದೆ. ಅದರಂತೆ ಮಹಾರಾಷ್ಟ್ರದ ಜನರು ಸಹ ರಾಜ್ಯಕ್ಕೆ ಆಗಮಿಸಲು ಈ ಸೇತುವೆ ಉಪಯುಕ್ತವಾಗಲಿದೆ. ಈ ಸೇತುವೆ ಮಂಜೂರಾದ ಹೊತ್ತಿನಲ್ಲಿ ಎರಡು ರಾಜ್ಯದ ಗಡಿ ಭಾಗದ ಜನರು ಸಂತಸ ಪಟ್ಟಿದ್ದರು. ಆದರೆ ಸೇತುವೆ ಮಂಜೂರಾಗಿ ಒಂದು ದಶಕ ಸಮೀಪಿಸಿದರೂ ಕಾಮಗಾರಿ ಮಾತ್ರ ಪೂರ್ಣಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಉಭಯ ರಾಜ್ಯಗಳ ಸಂಪರ್ಕ ಕೊಂಡಿ: ನೆರೆಯ ಮಹಾರಾಷ್ಟ್ರ ಹಾಗೂ ರಾಜ್ಯ ಗಡಿ ಭಾಗದಲ್ಲಿ ಹತ್ತಾರು ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುವುದರಿಂದ ಗಡಿ ಭಾಗದ ರೈತರು ಬೆಳೆದ ಕಬ್ಬು ಕಳಿಸಲು ಅನುಕೂಲವಾಗುವ ಉದ್ದೇಶದಿಂದ ಚಿಕ್ಕೋಡಿ-ಸದಲಗಾ ಅಂದಿನ ಶಾಸಕ ಪ್ರಕಾಶ ಹುಕ್ಕೇರಿ ಅವರು ಈ ಸೇತುವೆ ಮಂಜೂರು ಮಾಡಿಸಿಕೊಂಡು ಬಂದಿದ್ದರು. ನಂತರದ ದಿನಗಳಲ್ಲಿ ಪ್ರಕಾಶ ಹುಕ್ಕೇರಿ ಅವರು ಸಚಿವರಾಗಿ, ಸಂಸದರಾಗಿ ಸೇವೆ ಸಲ್ಲಿಸಿದರೂ ಅವರ ಅವಧಿಯಲ್ಲಿ ಸೇತುವೆ ಕಾಮಗಾರಿ ಮುಕ್ತಿ ಕಂಡಿಲ್ಲ.
ಸೇತುವೆ ನಿರ್ಮಾಣಕ್ಕಿಲ್ಲ ಅಡ್ಡಿ: ಸೇತುವೆ ನಿರ್ಮಾಣಕ್ಕೆ ಆರಂಭದಲ್ಲಿ ಸ್ಥಳೀಯ ರೈತರು ವಿರೋಧ ವ್ಯಕ್ತಪಡಿಸಿದ್ದರು. ಸೇತುವೆ ನಿರ್ಮಾಣದಿಂದ ರಸ್ತೆಗೆ ಭೂಮಿ ಕೊಡಬೇಕಾಗುತ್ತದೆ. ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ರೈತರು ಬೇಡಿಕೆ ಇಟ್ಟಿದ್ದರು. ಹಿಂದಿನ ಜಿಲ್ಲಾಧಿಕಾರಿ ಎನ್.ಜಯರಾಮ್ ಅವರು ಸೇತುವೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಸೂಕ್ತ ಪರಿಹಾರ ಒದಗಿಸಿ ಶೀಘ್ರ ಸೇತುವೆ ಕಾಮಗಾರಿ ಮುಕ್ತಾಯಗೊಳಿಸಬೇಕೆಂದು ಕೆಆರ್‌ಡಿಸಿಎಲ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಸೇತುವೆ ಕಾಮಗಾರಿ ಮಾತ್ರ ಆರಂಭವಾಗದೇ ಇರುವುದು ವಿಪರ್ಯಾಸ.
ನೆರೆಯಲ್ಲಿ ಕೊಚ್ಚಿ ಹೋದ ಸೇತುವೆ ಸಲಕರಣೆ: ಅರ್ಧಕ್ಕೆ ನಿಂತು ಹೋದ ಸೇತುವೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸರ್ಕಾರ ಒತ್ತಡ ಹಾಕಿದಾಗ ಸಿಮೆಂಟ್, ಕಬ್ಬಿಣ ಮುಂತಾದ ಸಲಕರಣೆಗಳನ್ನು ತಂದು ನದಿ ಬದಿಯಲ್ಲಿ ಇಟ್ಟಿದ್ದರು. ಆದರೆ ಭೀಕರ ಪ್ರವಾಹಕ್ಕೆ ಸೇತುವೆ ಸಲಕರಣೆಗಳು ಕೊಚ್ಚಿಕೊಂಡು ಹೋಗಿದ್ದರಿಂದ ಕಾಮಗಾರಿ ಮುಂದುವರಿಸಲು ವಿಳಂಬವಾಗಿದೆ ಎನ್ನುತ್ತಾರೆ ಕೆಆರ್‌ಡಿಸಿಎಲ್ ಅಧಿಕಾರಿಗಳು.
ಚೆಂದೂರ ಟೇಕ್-ಟಾಕಳಿ ಸೇತುವೆ 2013ರಲ್ಲಿ ಮಂಜೂರಾಗಿದೆ. ಆದರೆ ಇನ್ನೂವರೆಗೂ ಸೇತುವೆ ಕಾಮಗಾರಿ ಮುಕ್ತಾಯವಾಗಿಲ್ಲ. ನದಿಯಲ್ಲಿ ನಾಲ್ಕು ಪಿಲ್ಲರ್ ನಿಲ್ಲಿಸಿ ಐದಾರು ವರ್ಷ ಕಳೆದಿವೆ. ಈಗಲಾದರೂ ಸರ್ಕಾರ ಗುಣಮಟ್ಟದ ಸೇತುವೆ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಕಲ್ಪಿಸಲು ಮುಂದಾಗಬೇಕು
. –ಮನೋಜ ಖೀಚಡೆ, ಚೆಂದೂರ ಗ್ರಾಮಸ್ಥರು.
-ಮಹಾದೇವ ಪೂಜೇರಿ