Advertisement

ನೆರೆಪೀಡಿತ‌ ಪ್ರದೇಶಗಳಿಗೆ ವರದಾನ ಸಹ್ಯಾದ್ರಿ ಕೆಂಪುಮುಖಿ

12:19 AM Jul 05, 2022 | Team Udayavani |

ಮಂಗಳೂರು: ಕರಾವಳಿಯ ನೆರೆ ಹಾಗೂ ತಗ್ಗು ಪ್ರದೇಶಗಳಿಗೆ ಹೆಚ್ಚು ಹೊಂದಾಣಿಕೆ ಆಗುವಂಥ ಹೊಸ ಸಂಶೋಧನೆ ಸಹ್ಯಾದ್ರಿ ಕೆಂಪುಮುಖಿ ಭತ್ತದ ತಳಿಗೆ ರೈತರಿಂದ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಪ್ರಾತ್ಯಕ್ಷಿಕೆ ಮತ್ತು ಪ್ರಾಯೋಗಿಕ ನೆಲೆಯಲ್ಲಿ ಸಹ್ಯಾದ್ರಿ ಕೆಂಪುಮುಖಿ ತಳಿಯನ್ನು ಬೆಳೆದಾಗ ಉತ್ತಮ ಫಲಿತಾಂಶ ಕಂಡು ಬಂದಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ ಪ್ರಾಯೋಗಿಕ ನೆಲೆಯಲ್ಲಿ ಬೆಳೆಯಲು 80 ಕ್ವಿಂಟಾಲ್‌ ಬೀಜವನ್ನು ಸುಮಾರು 300 ಮಂದಿ ರೈತರಿಗೆ ನೀಡಲಾಗಿತ್ತು. 2022-23ನೇ ಸಾಲಿಗೆ ಸುಮಾರು 500 ಎಕ್ರೆಯಷ್ಟು ಪ್ರದೇಶಗಳಿಗೆ ಅವಶ್ಯವಿರುವಷ್ಟು ಬೀಜವನ್ನು ವಿತರಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ ಸುಮಾರು 50 ಕ್ವಿಂಟಾಲ್‌ ಬೀಜವನ್ನು ಪ್ರಾಯೋಗಿಕ ನೆಲೆಯಲ್ಲಿ ಸುಮಾರು 200 ಮಂದಿ ರೈತರಿಗೆ ವಿತರಿಸಲಾಗಿತ್ತು. ಈ ವರ್ಷ ಸುಮಾರು 45 ಕ್ವಿಂಟಾಲ್‌ ಬೀಜವನ್ನು ಸುಮಾರು 180 ಮಂದಿ ರೈತರಿಗೆ ನೀಡಲಾಗಿದೆ. ಇದರ ಜತೆಗೆ ಸಹ್ಯಾದ್ರಿ ಭದ್ರ ತಳಿಯ ಸುಮಾರು 16 ಕ್ವಿಂಟಾಲ್‌ ಬೀಜವನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ರೈತರಿಗೆ ವಿತರಿಸಲಾಗಿದೆ.

ಪ್ರಾಯೋಗಿಕವಾಗಿ ಬೆಳೆದಿರುವ ರೈತರು ಹೇಳುವಂತೆ ಎಕ್ರೆಗೆ ಸುಮಾರು 22 ಕ್ವಿಂಟಾಲ್‌ ಇಳುವರಿ ಬಂದಿದೆ. ಬೈಹುಲ್ಲು ಕೂಡ ಉತ್ತಮವಾಗಿದೆ. ಎಂಒ-4ನಲ್ಲಿ ಎಕ್ರೆಗೆ 18 ಕ್ವಿಂಟಾಲ್‌ ಇಳುವರಿ ಬರುತ್ತದೆ.

ತಗ್ಗು ಪ್ರದೇಶಗಳಿಗೆ ಸೂಕ್ತ
ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಪ್ರಕಾರ ಕರಾವಳಿ ಪ್ರದೇಶದಲ್ಲಿ 300 ಹೆಕ್ಟೇರ್‌ಗಿಂತಲೂ ಅಧಿಕ ಭತ್ತ ಬೆಳೆಯುವ ಪ್ರದೇಶ ವರ್ಷಂಪ್ರತಿ ನೆರೆಹಾವಳಿಗೆ ತುತ್ತಾಗುತ್ತಿದೆ. ಪ್ರಸ್ತುತ ಕರಾವಳಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಸಾಮಾನ್ಯ ದಪ್ಪಗಾತ್ರದ ಎಂಒ-4 ತಳಿಯನ್ನು ರೈತರು ಹೆಚ್ಚು ಬೆಳೆಯುತ್ತಾರೆ. ಇವು ನೆಲಕ್ಕುರುಳುತ್ತವೆ ಹಾಗೂ ನೆರೆ ನೀರನ್ನು ಹೆಚ್ಚು ದಿನ ತಡೆದುಕೊಳ್ಳುವ ಶಕ್ತಿಯನ್ನು ಹೊಂದಿಲ್ಲ ಎಂಬ ಅಭಿಪ್ರಾಯವಿದೆ.

ಕೃಷಿ ವಿಜ್ಞಾನಿಗಳು ಹಾಗೂ ಪ್ರಾಯೋಗಿಕ ನೆಲೆಯಲ್ಲಿ ಸಹ್ಯಾದ್ರಿ ಕೆಂಪುಮುಖಿ ತಳಿಯನ್ನು ಬೆಳೆದಿರುವ ರೈತರ ಪ್ರಕಾರ ಇದು ನೆರೆ ಹಾಗೂ ತಗ್ಗು ಪ್ರದೇಶಗಳಿಗೆ ಹೊಂದಿಕೊಳ್ಳುವಂಥದ್ದು. ಈ ತಳಿಯು ನೆರೆ ನೀರಿನಲ್ಲಿದ್ದರೂ ಸುಮಾರು 8ರಿಂದ 12 ದಿನಗಳವರೆಗೆ ಯಾವುದೇ ಸಮಸ್ಯೆಯಿಲ್ಲದೆ ಬೆಳವಣಿಗೆ ಕಾಣುತ್ತದೆ. ಮಾಗಿದ ಪೈರು ಕೊಯಿಲಿಗೆ ವಿಳಂಬವಾದರೂ ಮಳೆಗಾಳಿಯಿಂದ ನೆಲಕ್ಕೆ ಒರಗುವುದಿಲ್ಲ.

Advertisement

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ನವೀನ್‌ ಕುಮಾರ್‌ ಬಿ.ಟಿ. ಅವರ ಪ್ರಕಾರ ಸಹ್ಯಾದ್ರಿ ಪಂಚಮುಖೀ ಕೆಂಪು ಭತ್ತದ ತಳಿಯು ಮಧ್ಯಮ ಗಾತ್ರದ ಪೈರನ್ನು ಹೊಂದಿದ್ದು ಕಾಂಡ ಗಟ್ಟಿಯಾಗಿದೆ. ಹೆಚ್ಚು ಇಳುವರಿ ಹಾಗೂ ಜೈವಿಕ ಮತ್ತು ಅಜೈವಿಕ ಒತ್ತಡಗಳನ್ನು ತಡೆಯಬಲ್ಲ ಸಾಮರ್ಥ್ಯ ಹೊಂದಿದೆ. ಕಣೆ ಕೀಟ, ಕಾಂಡಕೊರಕ, ಎಲೆ ಸುರಳಿ ಕೀಟಗಳನ್ನು ಮತ್ತು ಬೆಂಕಿರೋಗಗಳನ್ನು ತಡೆಯುವ ಸಾಮರ್ಥ್ಯವನ್ನೂ ಹೊಂದಿದೆ. ಕೆಂಪು ಬಣ್ಣದ ಮಧ್ಯಮ ಗಾತ್ರದ ಕಾಳು, ಮಧ್ಯಮ ಎತ್ತರ (ಸುಮಾರು ಮೂರು ಅಡಿ ಎತ್ತರ ) ನೆಲಕ್ಕೆ ಉರುಳದು. ಅಕ್ಕಿ ಊಟಕ್ಕೆ ರುಚಿಕರ ಆಗಿದ್ದು ಅಲ್ಪ ಪ್ರಮಾಣದ ಪರಿಮಳ, ಕನಿಷ್ಠ ಬೇಯಿಸುವ ಅವಧಿ ಹೊಂದಿದೆ. ಬಿತ್ತಿದ 130ರಿಂದ 135 ದಿನಗಳಲ್ಲಿ ಕಟಾವಿಗೆ ಬರುತ್ತದೆ.

ಸಹ್ಯಾದ್ರಿ ಕೆಂಪುಮುಖಿ ತಳಿ ಮಜಲು ಗದ್ದೆಗಳಿಗೆ ಸೂಕ್ತವಾಗುವ ನೂತನ ಸಹ್ಯಾದ್ರಿ ಕೆಂಪುಮುಖಿ ಭತ್ತದ ತಳಿಯ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿವೆ. ಬೀಜವನ್ನು ಈ ಬಾರಿಯ ಮುಂಗಾರಿನಲ್ಲಿ ಕೆಲವು ರೈತರಿಗೆ ಪಾತ್ಯಕ್ಷಿಕೆ ನೆಲೆಯಲ್ಲಿ ವಿತರಿಸಿದ್ದು, ಇದರ ಫಲಿತಾಂಶ ಆಧರಿಸಿ ಮುಂದಿನ ಹಂಗಾಮಿನಲ್ಲಿ ರೈತರಿಗೆ ಇದನ್ನು ಶಿಫಾರಸು ಮಾಡಲಾಗುವುದು ಎಂಬುದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಅಭಿಪ್ರಾಯ.

ಸಹ್ಯಾದ್ರಿ ಕೆಂಪುಮುಖಿ ನೆರೆಹಾವಳಿ ಇರುವ ಗದ್ದೆಗಳಿಗೆ ಸೂಕ್ತ. ನಾನು ಇದನ್ನು ಬೆಳೆಯುತ್ತಿದ್ದು ಇತರ ತಳಿಗಳಿಗೆ ಹೋಲಿಸಿದರೆ ರೋಗಬಾಧೆ ಕಡಿಮೆ; ಇಳುವರಿಯೂ ಅಧಿಕ. ಬಿತ್ತನೆ ಬೀಜಕ್ಕೆ ಹೆಚ್ಚಿನ
ಬೇಡಿಕೆ ಇದೆ. ಅನ್ನವೂ ರುಚಿಕರ.
– ದಯಾನಂದ ಕುಲಾಲ್‌ ಸೂರಿಂಜೆ, ರೈತ

ಸಹ್ಯಾದ್ರಿ ಕೆಂಪುಮುಖಿ ತಳಿಯು ಬಯಲು, ನೆರೆಪೀಡಿತ ಭತ್ತದ ಗದ್ದೆಗಳಿಗೆ ಸೂಕ್ತವಾಗಿದ್ದು, ಕರಾವಳಿಯ ಬಯಲು ಗದ್ದೆಗಳಲ್ಲಿ ಮತ್ತು ಮುಂಗಾರು ಬೆಳೆಯಾಗಿ ಬೆಳೆಯಲು ಶಿಫಾರಸು ಮಾಡಲಾಗಿದೆ. ರೈತರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ.
– ಡಾ| ರಮೇಶ್‌,
ಹಿರಿಯ ವಿಜ್ಞಾನಿ, ಕೆವಿಕೆ ಮುಖ್ಯಸ್ಥ

-ಕೇಶವ ಕುಂದರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next