ಬನಹಟ್ಟಿ : ಹುಟ್ಟು ಹಬ್ಬ ಅಂದರೆ ಯುವ ಜನತೆಗೆ ಖುಷಿಯೋ ಖುಷಿ. ಹೋಟೆಲ್, ಕ್ಲಬ್, ರೆಸಾರ್ಟ್, ಪಾರ್ಕ್ಗಳಲ್ಲಿ ಕೇಕ್ ಕತ್ತರಿಸಿ ಆಡಂಬರದ ಜನ್ಮ ದಿನ ಆಚರಿಸುವದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಸ್ಮಶಾನ ಭೂಮಿಯಲ್ಲಿ ಸಮಾಧಿಗಳ ಮಧ್ಯೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.
ಹೀಗೆ ವಿನೂತನ ರೀತಿಯಲ್ಲಿ ಜನ್ಮದಿನ ಆಚರಣೆ ಮಾಡಿಕೊಂಡವರು ಬಾಗಲಕೋಟೆ ಜಿಲ್ಲಾ ಬಿಜೆಪಿ ಪಕ್ಷದ ಉಪಾಧ್ಯಕ್ಷ ರಾಜೇಂದ್ರ ಅಂಬಲಿ ತಮ್ಮ ೪೯ನೇ ಹುಟ್ಟುಹಬ್ಬವನ್ನು ಬನಹಟ್ಟಿಯ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿಯ ಹಿಂದೂ ರುದ್ರಭೂಮಿಯಲ್ಲಿನ ಗೋರಿಗಳ ಮಧ್ಯೆ ತಮ್ಮ ಸ್ನೇಹಿತರೊಂದಿಗೆ ಕೇಕ್ ಕತ್ತರಿಸಿ ಸರಳವಾಗಿ ಆಚರಿಸಿಕೊಂಡರು.
ಇದೇ ವೇಳೆ ಸ್ಮಶಾನದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಪ್ರೇಮವನ್ನು ಮೆರೆದು, ಅಂತ್ಯಸಂಸ್ಕಾರಕ್ಕೆಂದು ಬರುವ ಜನತೆಗೆ ವಿಶ್ರಾಂತಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು 6 ಸಿಮೆಂಟ್ ಖುರ್ಚಿಗಳನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಖುಷಿಯ ಸಂದರ್ಭ ವಿನಾಕಾರಣ ಖರ್ಚು ಮಾಡದೆ ಸಮಾಜಕ್ಕೆ ಒಳಿತಾಗುವ ಹಾಗು ಜನೋಪಯೋಗಿ ವಸ್ತುಗಳನ್ನು ಒದಗಿಸುವದರೊಂದಿಗೆ ಪರೋಪಕಾರಿಯಾದರೆ ಜೀವನ ಸಾರ್ಥಕವೆಂದು ಅಂಬಲಿ ಹೇಳಿದರು.
ಈ ಮೂಲಕ ಮೌಢ್ಯತೆ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡಲು ಪ್ರಯತ್ನಿಸಿದ್ದಾರೆ. ವೈಚಾರಿಕ ಮನೋಭಾವನೆವುಳ್ಳ ರಾಜೇಂದ್ರ ಅಂಬಲಿ ಜನರಲ್ಲಿ ಮೌಢ್ಯತೆ ದೂರ ಮಾಡುವ ನಿಟ್ಟಿನಲ್ಲಿ ಒಂದಿಲ್ಲೊಂದು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.