ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿ ಐದು ವರ್ಷಗಳಿಂದ ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ಜಾಲಹಳ್ಳಿ ಸಂಚಾರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದು, ಬರೋಬ್ಬರಿ 10,400 ರೂ. ದಂಡ ತೆತ್ತಿದ್ದಾನೆ.
ಜಾಲಹಳ್ಳಿಯ ಎಂ.ಎಸ್.ಪಾಳ್ಯ ನಿವಾಸಿ ಮೊಹಮ್ಮದ್ ಶಬ್ಬೀರ್ ಸಿಕ್ಕಿಬಿದ್ದ ದ್ವಿಚಕ್ರ ವಾಹನ ಸವಾರ. ಹೆಲ್ಮೆಟ್ ಧರಿಸದೆ ವಾಹನ ಚಾಲನೆ, ಸಿಗ್ನಲ್ ಜಂಪ್, ಟ್ರಿಬಲ್ ರೈಡಿಂಗ್, ಚಾಲನೆ ವೇಳೆ ಮೊಬೈಲ್ ಬಳಕೆ, ಸೂಕ್ತ ದಾಖಲೆಗಳು ಇಲ್ಲದಿರುವುದು ಸೇರಿ ಐದು ವರ್ಷಗಳಿಂದ 104 ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ. ಆದರೆ, ಇದುವರೆಗೂ ಒಂದು ಪ್ರಕರಣದಲ್ಲೂ ದಂಡ ಕಟ್ಟಿಲ್ಲ.
ಎರಡು ತಿಂಗಳ ಹಿಂದೆ ಜಾಲಹಳ್ಳಿ ಸಂಚಾರ ಠಾಣೆ ಮುಂಭಾಗದಲ್ಲಿ ಪೊಲೀಸರು, ವಾಹನ ತಪಾಸಣೆ ನಡೆಸುವಾಗ ಶಬ್ಬೀರ್ ವಾಹನ ತಡೆದು ಪರಿಶೀಲನೆ ನಡೆಸಲಾಯಿತು. ಈ ವೇಳೆ ಆತನ ದ್ವಿಚಕ್ರ ವಾಹನ ನಂಬರ್ ದಾಖಲಿಸುತ್ತಿದ್ದಂತೆ ಪಿಡಿಎ ಯಂತ್ರದಲ್ಲಿ ಶಬ್ಬೀರ್‌ನ ಐದು ವರ್ಷದ ಸಂಚಾರ ನಿಯಮ ಉಲ್ಲಂಘನೆಗಳ ಪಟ್ಟಿಯೇ ತೆರೆದುಕೊಂಡಿದೆ.
ಇದನ್ನು ಕಂಡು ಅಚ್ಚರಿಗೊಂಡ ಸಂಚಾರ ಪೊಲೀಸರು, ಶಬ್ಬೀರ್‌ನ ವಾಹನ ಜಪ್ತಿ ಮಾಡಿದ್ದಾರೆ. ಬಳಿಕ “ನಿನ್ನ ಸಂಚಾರ ನಿಯಮ ಉಲ್ಲಂಘನೆಗಳು ಹಳೇ ದಂಡ ವ್ಯಾಪ್ತಿಗೆ ಬರುತ್ತದೆ. 104 ಪ್ರಕರಣಗಳಿಗೆ 10,400 ರೂ. ದಂಡ ಕಟ್ಟಬೇಕಾಗಿದೆ’ ಎಂದು ತಿಳಿಸಿದ್ದರು. ಆದರೆ, ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆತ್ತಿರುವ ಶಬ್ಬೀರ್, ಏಕಾಏಕಿ ಅಷ್ಟೊಂದು ದೊಡ್ಡ ಮೊತ್ತದ ಹಣ ಕಟ್ಟಲು ಸಾಧ್ಯವಿಲ್ಲ ಎಂದು ಕಾಲವಕಾಶ ಕೇಳಿದ್ದ.
ಹೀಗಾಗಿ ಆತನ ಹಿನ್ನೆಲೆ ತಿಳಿದು ವಾಹನ ಜಪ್ತಿ ಮಾಡಿ, ಎರಡು ತಿಂಗಳ ಗಡುವು ನೀಡಲಾಗಿತ್ತು. ದಂಡ ಕಟ್ಟದಿದ್ದರೆ ಏನೇಲ್ಲ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಹಾಗೂ ಹೊಸ ಪರಿಷ್ಕೃತ ದಂಡದ ಮೊತ್ತದ ಬಗ್ಗೆಯೂ ಶಬ್ಬೀರ್‌ಗೆ ಅರಿವು ಮೂಡಿಸಲಾಗಿತ್ತು. ಈ ಸಂಬಂಧ ಶಬ್ಬೀರ್ ಅ.12ರಂದು 10.400 ರೂ. ದಂಡ ಪಾವತಿಸಿ ವಾಹನ ವಾಪಸ್ ಪಡೆದಿರುವುದಾಗಿ ಸಂಚಾರ ಪೊಲೀಸರು ಹೇಳಿದರು.