Advertisement
ಮಧ್ವಯತಿಗಳಾದ ಶ್ರೀ ವ್ಯಾಸರಾಜರು ತಮ್ಮ ಕಾಲದಲ್ಲಿ ದೇಶಾದ್ಯಂತ ಜನರ ಒಳಿತಿಗಾಗಿ ಸುಮಾರು 732 ಹನುಮನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದರಂತೆ. ಅವರು ಹೀಗೆ ಸ್ಥಾಪಿಸಿದ ಮೊದಲ ಐವತ್ತು ಮೂರ್ತಿಗಳಲ್ಲಿ ಒಂದು ಕನಕಪುರ ಪಟ್ಟಣದಲ್ಲಿದೆ. ಸೋಪಾನ ಕಟ್ಟೆ ಹನುಮ ಅಥವಾ ಹೊಳೆ ಆಂಜನೇಯ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಹನುಮ, ಕನಕಪುರದ ಹೊರಭಾಗದ ಅರ್ಕಾವತಿ ನದಿ ತೀರದಲ್ಲಿ ನೆಲೆ ನಿಂತು ಭಕ್ತರ ಅಭೀಷ್ಟಗಳನ್ನು ನೆರವೇರಿಸುತ್ತಿದ್ದಾನೆ. ತಲತಲಾಂತರದಿಂದ ಪೂಜೆ ಮಾಡಿಕೊಂಡು ಬರುತ್ತಿರುವ ವೆಂಕಟೇಶ್ ಅವರ ವಂಶಸ್ಥರು ಶಿಥಿಲವಾಗಿದ್ದ ಈ ದೇವಸ್ಥಾನವನ್ನು 16 ವರ್ಷಗಳ ಹಿಂದೆ ನವೀಕರಣಗೊಳಿಸಿ, ಪ್ರತಿದಿನ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ.
ಸುಮಾರು ಏಳೂವರೆ ಅಡಿ ಎತ್ತರ ಇರುವ ಹನುಮನ ಮೂರ್ತಿಯನ್ನು ಗ್ರಾನೈಟ್ ಶಿಲೆಯಲ್ಲಿ ಕೆತ್ತಿರುವುದರಿಂದ, ಆ ಹೊಳಪು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಅತ್ಯಂತ ಸುಂದರವಾಗಿ ಕೆತ್ತಿರುವ ಈ ಮೂರ್ತಿಯಲ್ಲಿ ಆಚಾರತ್ರಯರಾದ ಹನುಮ, ಭೀಮ, ಮಧ್ವರ ಸಮಾಗಮವನ್ನು ಕಾಣಬಹುದು. ತಿದ್ದಿ ತೀಡಿದ ಕಣ್ಣು, ತಲೆಯ ಜುಟ್ಟಿನ ಗಂಟು, ಕಿವಿಯಲ್ಲಿ ಹಾಕಿರುವ ಒಲೆಯನ್ನು ಅತಿ ನಾಜೂಕಾಗಿ ಕೆತ್ತಲಾಗಿದೆ. ಕೈ ಹಾಗೂ ಕಾಲಿನ ಬೆರಳಿನಲ್ಲಿರುವ ಉಗುರುಗಳು ವಜ್ರದಂತೆ ಗಟ್ಟಿಯಾಗಿದ್ದು, ತುಂಬಾ ಹರಿತವಾಗಿರುವುದನ್ನು ಕಾಣಬಹುದು. ಕೈಯಲ್ಲಿ ಹಿಡಿದಿರುವ ಸೌಗಂಧಿಕಾ ಪುಷ್ಪ, ತಲೆಯ ಎರಡು ಬದಿಯಲ್ಲಿರುವ ಶಂಖ, ಚಕ್ರ, ಕೈಕಾಲಿನ ಬೆರಳುಗಳು, ಬಾಲದ ಗಂಟೆ, ಕಣ್ಣು ಹುಬ್ಬು ಎಲ್ಲವನ್ನೂ ಶಿಲ್ಪಿ ಬಹಳ ನಾಜೂಕಾಗಿ ಕೆತ್ತಿದ್ದಾನೆ. ಈ ಮೂರ್ತಿಯಲ್ಲಿ ಗಮನಿಸಿದಬೇಕಾದ ಇನ್ನೊಂದು ವಿಶೇಷ ಎಂದರೆ, ಹನುಮನಿಗೆ ಇಲ್ಲಿ ಯಜೊnàಪವೀತ ಇಲ್ಲದಿರುವುದು. ಉಧ್ವì ಫುಂಡ್ರ, ಬಾಲದಲ್ಲಿರುವ ಗಂಟೆ, ಕಪೋಲ ಕೇಶಗಳು, ತೋಳ ಬಂದಿ, ಮುಂಗೈ ಕಡಗಗಳು, ಸೊಂಟದ ಪಟ್ಟಿ, ಖಟಾರಿ, ರಾಮ ದಾಸ್ಯ ಸಂಕೇತದ ಕಾಲ್ಬಳೆ ಮೂರ್ತಿಯಲ್ಲಿ ಅತ್ಯಂತ ನಾಜೂಕಾಗಿ ಎದ್ದು ಕಾಣುತ್ತದೆ.
Related Articles
Advertisement
ಸಂತಾನ ಕರುಣಿಸುವ ಹನುಮಜಾಗ್ರತ ಕಾರಣಿಕ ಎಂದು ಜನಜನಿತವಾಗಿರುವ ಈ ದೈವದ ಬಳಿ, ಎರಡು ಹೆಣ್ಣುಮಕ್ಕಳಿದ್ದು ಪುತ್ರ ಸಂತಾನ ಬೇಕೆನ್ನುವವರು ಧನುರ್ಮಾಸದಲ್ಲಿ ಬ್ರಾಹ್ಮಿ ಮಹೂರ್ತದಲ್ಲಿ ಇಲ್ಲಿ ಬಂದು ಹರಕೆ ಮಾಡಿ ಸೇವೆ ಮಾಡಿದರೆ ಪುತ್ರ ಸಂತಾನವಾಗುತ್ತದೆ ಎಂಬ ಪ್ರತೀತಿ ಇದೆ. ಇಲ್ಲಿಗೆ ಬಂದು ಹರಕೆ ಮಾಡಿ ಪುತ್ರ ಸಂತಾನ ಪಡೆದ ಭಕ್ತರ ಅದೆಷ್ಟೋ ನಿದರ್ಶನಗಳಿದೆ. ಅಷ್ಟೇ ಅಲ್ಲದೇ ಯಾರಿಗಾದರೂ ನರ ಸಂಬಂಧಿ ಖಾಯಿಲೆಗಳಿದ್ದರೂ ಸಹ ಇಲ್ಲಿ ಬಂದು ಹನುಮಪ್ಪನ ಸೇವೆ ಮಾಡಿದರೆ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಮೊದಲು ಅರ್ಕಾವತಿ ನದಿಯಲ್ಲಿ ನೀರಿತ್ತು, ಆದರೆ ಈಗ ನೀರು ಕಲುಷಿತ ಗೊಂಡಿರುವುದರಿಂದ ಭಕ್ತಾದಿಗಳಿಗೆ ಅನುಕೂಲವಾಗಲೆಂದು ಸಮಿತಿಯವರೇ ಬೋರ್ ವೆಲ್ ಒಂದನ್ನು ಕೊರೆಸಿದ್ದಾರೆ. ಹನುಮ ಜಯಂತಿ ಹಾಗೂ ರಾಮನವಮಿ ಕಾರ್ಯಕ್ರಮಗಳು ಇಲ್ಲಿ ಬಹಳ ವಿಜೃಂಭಣೆಯಿಂದ ನೆರವೇರುತ್ತವೆ. ದೇವಸ್ಥಾನದ ಆವರಣದಲ್ಲಿರುವ ಬಿಲ್ವವೃಕ್ಷದ ಕೆಳಗೆ ಬಲಮುರಿ ವಿಶ್ವಂಭರ ಗಣಪತಿಯನ್ನು ಸ್ಥಾಪಿಸಲಾಗಿದೆ. ಮಾರ್ಗ: ಬೆಂಗಳೂರಿನಿಂದ ಕನಕಪುರ 45 ಕಿಲೋ ಮೀಟರ್ ಇದೆ. ಕನಕಪುರ ಪಟ್ಟಣದಲ್ಲಿ ಅರ್ಕಾವತಿ ಚಿತ್ರಮಂದಿರದ ಹಿಂಭಾಗದಲ್ಲಿ ಈ ದೇವಸ್ಥಾನವಿದೆ. -ಪ್ರಕಾಶ್ ಕೆ.ನಾಡಿಗ್