Advertisement

ತುಂಬೆ ಗ್ರಾ.ಪಂ.ನಿಂದ ಪ್ರತೀ ಮನೆಗೆ ಬಟ್ಟೆ ಚೀಲ ; ಸಿದ್ಧಗೊಳ್ಳಲಿವೆ 9 ಸಾವಿರ ಚೀಲಗಳು

10:51 AM Dec 27, 2022 | Team Udayavani |

ಬಂಟ್ವಾಳ: ಪ್ಲಾಸ್ಟಿಕ್‌ ಮುಕ್ತ ಗ್ರಾಮ ನಿರ್ಮಾಣ ದೃಷ್ಟಿಯಿಂದ ತುಂಬೆ ಗ್ರಾ.ಪಂ.ನಿಂದ ಪ್ರತೀ ಮನೆಗೂ ಬಟ್ಟೆಯ ಚೀಲ ನೀಡುವುದಕ್ಕೆ ಉದ್ದೇಶಿಸಲಾಗಿದ್ದು, ಮಹಿಳೆಯರ ಸ್ವಾವಲಂಬಿ ಬದುಕಿನ ದೃಷ್ಟಿಯಿಂದ ಈ ಬಟ್ಟೆ ಚೀಲಗಳನ್ನು ಗ್ರಾಮದ ಎನ್‌ಆರ್‌ಎಲ್‌ಎಂ ಸಂಜೀವಿನಿ ಗುಂಪಿನ ಮಹಿಳೆಯರೇ ಹೊಲಿಯುವುದು ವಿಶೇಷವಾಗಿದೆ.

Advertisement

ಕಳೆದ ಸುಮಾರು 15 ದಿನಗಳಿಂದ ಬಟ್ಟೆ ಚೀಲಗಳನ್ನು ಹೊಲಿಯುವ ಕಾರ್ಯ ಆರಂಭಗೊಂಡಿದ್ದು, ಸಣ್ಣ, ಮಧ್ಯಮ ಹಾಗೂ ದೊಡ್ಡ ಗಾತ್ರದ ಬಟ್ಟೆ ಚೀಲಗಳನ್ನು ಹೊಲಿಯಲಾಗುತ್ತಿದೆ. ಗ್ರಾಮದ ಪ್ರತೀ ಮನೆಗಳಿಗೂ ಈ ಮೂರು ಚೀಲಗಳನ್ನು ವಿತರಿಸಲಿದ್ದು, ಕನಿಷ್ಠ ಶುಲ್ಕ ವಿಧಿಸುವ ಉದ್ದೇಶವನ್ನು ಗ್ರಾ.ಪಂ. ಹೊಂದಿದೆ. ಡಿ. 31 ರಂದು ಗ್ರಾ.ಪಂ.ನಲ್ಲಿ ಚೀಲಗಳನ್ನು ಬಿಡುಗಡೆಗೊಳಿಸಿ ಬಳಿಕ ವಿತರಣೆಯ ಕಾರ್ಯ ನಡೆಯಲಿದೆ.

3 ಸಾವಿರಕ್ಕೂ ಅಧಿಕ ಮನೆಗಳಿಗೆ ಚೀಲ ಗ್ರಾಮಸ್ಥರು ತಮ್ಮ ದಿನಸಿ ಸಾಮಗ್ರಿ ಸೇರಿದಂತೆ ಇತರ ಸೊತ್ತುಗಳನ್ನು ತರಲು ಈ ಬಟ್ಟೆ ಚೀಲಗಳನ್ನೇ ಉಪಯೋಗಿಸಬೇಕು ಎಂಬ ಉದ್ದೇಶದಿಂದ ಗ್ರಾಮದಲ್ಲಿರುವ ಸುಮಾರು 3 ಸಾವಿರಕ್ಕೂ ಅಧಿಕ ಮನೆಗಳಿಗೆ ತಲಾ 3 ಚೀಲಗಳಂತೆ ಒಟ್ಟು ಸುಮಾರು 9 ಸಾವಿರ ಚೀಲಗಳನ್ನು ವಿತರಿಸುವ ಗುರಿ ಹೊಂದಿದ್ದಾರೆ.

ಒಂದು ಚೀಲಕ್ಕೆ 80 ರೂ. ವೆಚ್ಚ ಮಹಿಳೆಯರ ಸ್ವಾವಲಂಬಿ ಜೀವನದ ದೃಷ್ಟಿಯಿಂದ ಸ್ವೋದ್ಯೋಗ ಕೈಗೊಳ್ಳಲು ಪ್ರತೀ ಗ್ರಾ.ಪಂ.ನಲ್ಲೂ ಎನ್‌ಆರ್‌ಎಲ್‌ ಎಂ ಸಂಜೀವಿನಿ ಘಟಕ ಮಾಡಲಾಗುತ್ತಿದ್ದು, ಪ್ರಸ್ತುತ ತುಂಬೆಯಲ್ಲೂ ಇದೇ ಘಟಕದ ಮೂಲಕ ಚೀಲಗಳ ಹೊಲಿಯುವ ಕಾರ್ಯ ನಡೆಯುತ್ತಿದೆ. ಅವರಿಗೆ ವೇತನ, ಬಟ್ಟೆಗಳ ಖರೀದಿ, ಹೊಲಿಗೆ ಯಂತ್ರಗಳನ್ನು ಒದಗಿಸುವ ಕಾರ್ಯವನ್ನೂ ತುಂಬೆ ಗ್ರಾ.ಪಂ. ನಿರ್ವಹಿಸಿದೆ.

ಆದರೆ ಈ ಕಾರ್ಯಕ್ಕೆ ಗ್ರಾ.ಪಂ.ನ ಯಾವುದೇ ಅನುದಾನ ಬಳಸಿಕೊಳ್ಳಲು ಅವಕಾಶ ಇಲ್ಲದೇ ಇರುವುದರಿಂದ ಚೀಲದಲ್ಲಿ ಹೆಸರು ಹಾಕುವುದಕ್ಕಾಗಿ ಜಾಹೀರಾತು ಸಂಗ್ರಹಿಸಲಾಗಿದೆ. ಅದರ ಮೊತ್ತವೂ ಸಂಜೀವಿನಿಯ ಬ್ಯಾಂಕ್‌ ಖಾತೆಗೆ ಹೋಗುವುದರಿಂದ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲವಾಗಿದೆ.

Advertisement

ಮೂರು ಬಗೆಯ ಬಟ್ಟೆ ಚೀಲಗಳ ಬಟ್ಟೆಗೆ ತಲಾ 22 ರೂ., 18 ರೂ. ಹಾಗೂ 9 ರೂ. ವೆಚ್ಚ ತಗುಲಲಿದ್ದು, ಒಟ್ಟು ಮೂರು ಬಗೆಯ ಚೀಲಗಳು ಸೇರಿ 80 ರೂ. ವೆಚ್ಚವಾಗಲಿದೆ. ಇದನ್ನು ಉಚಿತವಾಗಿ ನೀಡಿದರೆ ಎಸೆಯುವ ಸಾಧ್ಯತೆ ಇರುವುದರಿಂದ ಕನಿಷ್ಠ ಶುಲ್ಕ ನಿಗದಿ ಮಾಡಲು ಗ್ರಾ.ಪಂ. ನಿರ್ಧರಿಸಿದೆ.

ಗ್ರಾ.ಪಂ.ನ ಬಟ್ಟೆ ಚೀಲ ವಿತರಣೆಯ ಈ ಕಾರ್ಯ ಪೂರ್ಣಗೊಂಡ ಬಳಿಕ ಸಂಜೀವಿನಿ ಘಟಕ ಮುಂದುವರಿಯಲಿದ್ದು, ಇದರ ಸಿಬಂದಿ ಮುಂದೆ ಬೇರೆ ಬೇರೆ ಕಡೆಯಿಂದ ಬಂದ ಬೇಡಿಕೆಯಂತೆ ಚೀಲಗಳನ್ನು ಹೊಲಿಯುವ ಕುರಿತು ಯೋಜನೆ ರೂಪಿಸಿದ್ದಾರೆ. ಉಳಿದ ಸಮಯದಲ್ಲಿ ಇತರೆ ಹೊಲಿಗೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಗ್ರಾ.ಪಂ. ಮೂಲಗಳು ತಿಳಿಸಿದೆ.

ಸಂಜೀವಿನಿ ಘಟಕದ ಮಹಿಳೆಯರಿಂದ ಚೀಲ ತಯಾರಿಕೆ

ಪ್ರಸ್ತುತ ಸಂಜೀವಿನಿ ಗುಂಪಿನ 6 ಮಹಿಳೆಯರು ಈ ಕಾರ್ಯದಲ್ಲಿ ತೊಡಗಿದ್ದು, ಮೂರು ಮಂದಿ ಹೊಲಿಗೆ ಕಾರ್ಯ ಹಾಗೂ ಮೂರು ಮಂದಿ ಅವರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಪ್ರಾರಂಭದ ಹಂತವಾಗಿರುವುದರಿಂದ ಹೊಲಿಗೆ ಕಾರ್ಯ ನಿಧಾನವಾಗಿ ನಡೆಯುತ್ತಿದ್ದು, ಈಗಾಗಲೇ ಮೂರು ಚೀಲಗಳು ಕೂಡ ತಲಾ 1 ಸಾವಿರದಂತೆ ಸಿದ್ಧಗೊಂಡಿದೆ.

ಪ್ರತೀ ಮನೆಗೆ ಬಟ್ಟೆ ಚೀಲ
ಪ್ಲಾಸ್ಟಿಕ್‌ ಮುಕ್ತ ಗ್ರಾಮ ಹಾಗೂ ಮಹಿಳೆಯರ ಸ್ವಾವಲಂಬಿ ಬದುಕಿನ ದೃಷ್ಟಿಯಿಂದ ಗ್ರಾ.ಪಂ. ಈ ಕಾರ್ಯಕ್ಕೆ ಮುಂದಾಗಿದ್ದು, ಮಹಿಳೆಯರಿಗೆ ವೇತನ ಸೇರಿದಂತೆ ಎಲ್ಲ ವೆಚ್ಚವನ್ನು ಗ್ರಾ.ಪಂ. ನೀಡುತ್ತದೆ. ಅದರ ಲಾಭಾಂಶವನ್ನು ಸಂಜೀವಿನಿ ಘಟಕಕ್ಕೆ ನೀಡಲಿದ್ದೇವೆ. ಪ್ರತೀ ಮನೆಗೂ ಬಟ್ಟೆ ಚೀಲ ತಲುಪಿಸುವ ಉದ್ದೇಶ ಹೊಂದಲಾಗಿದೆ.
-ಪ್ರವೀಣ್‌ ಬಿ. ತುಂಬೆ,
ಅಧ್ಯಕ್ಷರು, ಗ್ರಾ.ಪಂ. ತುಂಬೆ¸

ಕಿರಣ್ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next