Advertisement
ಅವರ ಜತೆಗಿನ ಒಡನಾಟವನ್ನು ನಾನೆಂದು ಮರೆಯಲಾರೆ. ಬಹಳ ಸಂದರ್ಭಗಳಲ್ಲಿ ಅವರೊಂದಿಗೆ ಕರ್ನಾಟಕದಲ್ಲಿ ಸುತ್ತಿದ್ದೇನೆ. ಅವರ ಬಹುತೇಕ ಭಾಷಣಗಳನ್ನು ಕನ್ನಡಕ್ಕೆ ಭಾಷಾಂತರಿಸುತ್ತಿದ್ದವನೇ ನಾನು. ವಿಪಕ್ಷದಲ್ಲಿದ್ದರೂ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ವಿರೋಧಿಸುವಾಗ ಗಟ್ಟಿಯಾಗಿ ವಿರೋಧಿಸುತ್ತಿದ್ದರು, ಹೊಗಳುವಾಗ ಮುಕ್ತಕಂಠದಿಂದ ಹೊಗಳುತ್ತಿದ್ದರು. ವಾಜಪೇಯಿ ವ್ಯಕ್ತಿತ್ವ, ಸರಳತೆ, ಪ್ರಾಮಾಣಿಕತೆ ಹೇಗಿತ್ತು ಎಂಬುದಕ್ಕೆ ನನ್ನದೇ ಒಂದಿಷ್ಟು ನಿದರ್ಶನಗಳನ್ನು ಕೊಡಬೇಕು ಎನ್ನಿಸುತ್ತದೆ.
ಅಟಲ್ ಅವರು 1966ರಲ್ಲಿ ಶಿವಮೊಗ್ಗಕ್ಕೆ ಬಂದಿದ್ದರು. ಜೋಗ್ ಫಾಲ್ಸ್‌ಗೆ ಹೋಗಬೇಕು ಎಂದು ಆಸೆಪಟ್ಟಿದ್ದರು. ಕಡಿದಾದ ರಸ್ತೆ, ಸರಿಯಾದ ವಾಹನ ವ್ಯವಸ್ಥೆ ಇರಲಿಲ್ಲ. ಆದರೂ ಸಾಹಸಪಟ್ಟು ಪೂರ್ತಿ ಕೆಳಗಿಳಿದು ಬಂಡೆಯ ಮೇಲೆ ಹೋಗಿ ಮಲಗಿ ಬಿಟ್ಟಿದ್ದರು. ನಮ್ಮ ಮನೆಯಲ್ಲೇ ವಾಸ್ತವ್ಯ:
ಅದು 1978ರ ಘಟನೆ. ಅವರಾಗ ಮೊರಾರ್ಜಿ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದರು. ಶಿವಮೊಗ್ಗದಲ್ಲಿ ಪತ್ರಕರ್ತರ ಸಮ್ಮೇಳನಕ್ಕೆ ಅವರನ್ನು ಆಹ್ವಾನಿಸಲಾಗಿತ್ತು. ನೀವೀಗ ಸಚಿವರಾಗಿದ್ದೀರಿ. ನಿಮಗೆ ಸರಕಾರಿ ವ್ಯವಸ್ಥೆಗಳು, ಶಿಷ್ಟಾಚಾರಗಳು ಇರುತ್ತವೆ. ಶಿವಮೊಗ್ಗದಲ್ಲಿ ಎಲ್ಲಿರುತ್ತೀರಿ ಎಂದು ಅವರನ್ನು ಕೇಳಿದೆ. “ಅರೆ… ಶಂಕರಮೂರ್ತಿ ಶಿವಮೊಗ್ಗದಲ್ಲಿ ನಿಮ್ಮದೊಂದು ದೊಡ್ಡ ಮನೆ ಇತ್ತಲಾ ಏನಾ ಯಿತದು’ ಎಂದು ಬೆನ್ನಿಗೊಂದು ಗುದ್ದು ಕೊಟ್ಟರು.
Related Articles
Advertisement
ಎಂತಹ ವ್ಯಕ್ತಿತ್ವ ನೋಡಿ!:ಇನ್ನೊಂದು ಘಟನೆ ಎಂದರೆ, 1983ರ ಚುನಾವಣೆ ಸಂದರ್ಭ. ಕರ್ನಾಟಕದ 18 ಕಡೆ ಅವರ ಭಾಷಣ ಇತ್ತು. ಆಗ ನನ್ನ ಅಂಬಾಸಿಡರ್ ಕಾರಿನಲ್ಲೇ ದಾವಣಗೆರೆಗೆ ಹೋದೆವು. ಪ್ರಚಾರ ಸಭೆಯಲ್ಲಿ ಅಭ್ಯರ್ಥಿಗಳಾದ ಹನುಮಂತಪ್ಪ , ರವೀಂದ್ರನಾಥ್ ಇಬ್ಬರೂ ಇಂದಿರಾ ಗಾಂಧಿ ವಿರುದ್ಧ ಮಾತು ಶುರು ಮಾಡುತ್ತಿದ್ದಂತೆ, ನಿಧಾನವಾಗಿ ಅವರ ಜುಬ್ಟಾ ಜಗ್ಗಿ ತಾವೇ ಮಾತಿಗಿಳಿದರು. ಅವರ ಮಾತು ಮುಗಿದ ಅನಂತರ ಅದೇ ಮೈಕ್ ಪಡೆದು ಕನ್ನಡದಲ್ಲಿ ತರ್ಜುಮೆ ಮಾಡಿ ಹೇಳುತ್ತಿದ್ದೆ. ಭಾಷಣ ಮುಗಿಸಿ ಕಾರು ಹತ್ತಿ ಹೊರಡುವಾಗ ಆ ಇಬ್ಬರೂ ಆಭ್ಯರ್ಥಿಗಳ ಹೆಗಲ ಮೇಲೂ ಕೈಯಿಟ್ಟು, ನಿಮಗೆ ಅವಮಾನ ಮಾಡಬೇಕೆಂದು ಮಾಡಿಲ್ಲ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ. ನೀವು ಅಭ್ಯರ್ಥಿಗಳು. ಕ್ಷೇತ್ರ, ಜನತೆ, ಇಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿ ಎಂದು ತಿದ್ದಿದ್ದರು.
ಅವರೆಷ್ಟು ಭಾವನಾಜೀವಿ, ಪ್ರಾಮಾಣಿಕ ವ್ಯಕ್ತಿತ್ವ ಎಂದರೆ… 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದ ಅನಂತರ ಸಂಸತ್‌ಗೆ ಚುನಾವಣೆ ನಡೆಯಿತು. ಸ್ವತಃ ವಾಜಪೇಯಿ ಅವರೂ ಸೋತಿದ್ದರು. ಆ ಸಂದರ್ಭದಲ್ಲಿ ಭದ್ರಾವತಿಯ ಲಕ್ಷ್ಮೀನಾರಾಯಣ ಎಂಬ ಕಾರ್ಯಕರ್ತ “ಅಟಲ್ ಜೀ ಅಂತಹವರನ್ನು ಸೋಲಿಸಿದ ದೇಶದಲ್ಲಿ ನಾನಿರಲು ಇಷ್ಟಪಡಲ್ಲ’ ಎಂದು ಚೀಟಿ ಬರೆದಿಟ್ಟು ನೇಣಿಗೆ ಶರಣಾಗಿಬಿಟ್ಟಿದ್ದ. ಇದನ್ನು ಅಟಲ್‌ಜೀಗೆ ತಿಳಿಸಿದ ಎರಡೇ ದಿನಕ್ಕೆ ಅವರು ಶಿವಮೊಗ್ಗಕ್ಕೆ ದೌಡಾಯಿಸಿದರು. ಸಣ್ಣ ಗುಡಿಸಲಲ್ಲಿ ವಾಸವಿದ್ದ ಲಕ್ಷ್ಮೀನಾರಾಯಣನ ಕುಟುಂಬ ಭೇಟಿ ಮಾಡಿ, ಸಾಂತ್ವನ ಹೇಳಿದರು. ಯಾರಿಗೂ ತಿಳಿಯದಂತೆ ನನ್ನ ಕೈಗೆ 25 ಸಾವಿರ ರೂ. ಕೊಟ್ಟು ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ಇಡಿಸಿದ್ದರು.