ಎರಡನೇ ಅಲೆ ಮೊದಲ ಅಲೆಗಿಂತ ವೇಗವಾಗಿ ಹರಡುತ್ತಿದೆ. ಇಂತಹ ಸ್ಥಿತಿಯಲ್ಲಿ ಸರಕಾರ ಬಹಳ ಕಠಿನ ಕ್ರಮಕ್ಕೆ ಮುಂದಾಗಲೇಬೇಕು. ಕೊರೊನಾ ಅಲೆಯನ್ನು ಮುರಿಯಬೇಕಾದರೆ ಕನಿಷ್ಠ 15 ದಿನಗಳ ಸಂಪೂರ್ಣ ಲಾಕ್‌ಡೌನ್ ಅನಿವಾರ್ಯ.
ಕೊರೊನಾ ಸಂಪೂರ್ಣ ಹೋಗಿಲ್ಲ ಎಂಬುದು ಗೊತ್ತಿದ್ದರೂ ಸರಕಾರ ಇದನ್ನು ಹಗುರವಾಗಿ ಪರಿಗಣಿಸಿತು. ಇದರ ಪರಿಣಾಮ ಈಗ 2ನೇ ಅಲೆಯ ರೂಪದಲ್ಲಿ ನಾವು ಅನುಭವಿಸ ಬೇಕಾಗಿದೆ. ಕೊರೊನಾ ಮಾರ್ಗಸೂಚಿಗಳು ಎಲ್ಲಿಯೂ ಪಾಲನೆ ಯಾಗುತ್ತಿಲ್ಲ. ಮಾಸ್ಕ್ ಧರಿಸುವುದು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಸ್ಯಾನಿ. ಟೈಸ್ ಮಾಡುವುದು ಎಲ್ಲಿಯೂ ಕಾಣುತ್ತಿಲ್ಲ. ಮೇಲಾಗಿ ಕೊರೊನಾ ಹರಡುತ್ತಿದ್ದರೂ ಸರಕಾರ ಯಾವುದೇ ಜಾತ್ರೆ, ಸಮಾರಂಭಗಳಿಗೆ ನಿರ್ಬಂಧನೆ ಹಾಕಲಿಲ್ಲ. ಇವತ್ತಿಗೂ ಅನೇಕ ಕಡೆ ಜಾತ್ರೆಗಳು ನಡೆಯುತ್ತಿವೆ. ಚುನಾ ವಣೆಗಳನ್ನು ಸಹ ಸರಕಾರ ಮತ್ತು ಚುನಾವಣ ಆಯೋಗ ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಹೀಗಾಗಿ ಈಗ ಯಥಾ ರಾಜಾ ತಥಾ ಪ್ರಜಾ ಪರಿಸ್ಥಿತಿ ಇದೆ.
ಕೊರೊನಾ ಕೇವಲ ಒಂದು ತಿಂಗಳು ಅಥವಾ ಆರು ತಿಂಗಳು ಬಂದು ಹೋಗುವ ರೋಗವಲ್ಲ. ಇದು ಬಹಳ ದೊಡ್ಡ ಸಾಂಕ್ರಾಮಿಕ ರೋಗ ಎಂಬುದು ಇಡೀ ಜಗತ್ತಿಗೆ ಅರಿವಾಗಿದೆ. ದೊಡ್ಡ ದೊಡ್ಡ ದೇಶಗಳು ಇದರಿಂದ ಪಡಬಾರದ ಕಷ್ಟ ಪಟ್ಟವು. ಅಪಾರ ಸಾವು, ನೋವಾದವು. ಎರಡನೇ ಅಲೆ ಬಂದಾಗ ಬಹಳ ಜಾಗೃತರಾದವು. ಇದನ್ನು ನೋಡಿಯೂ ನಮ್ಮವರು ಪಾಠ ಕಲಿಯಲಿಲ್ಲ.
ಮೊದಲ ಅಲೆ ಬಂದಾಗ ಎಲ್ಲ ಕಡೆ ವ್ಯಾಕ್ಸಿನ್ ಬೇಡಿಕೆ ವ್ಯಕ್ತವಾಯಿತು. ನಮ್ಮ ದೇಶದಲ್ಲಿ ಎರಡು ವ್ಯಾಕ್ಸಿನ್ ಬಂದಾಗ ಎಷ್ಟೋ ನೆಮ್ಮದಿ ಉಂಟಾಯಿತು. ಆದರೆ ಸರಕಾರ ಇಲ್ಲಿಯೂ ಎಡವಿತು. ನಮ್ಮಲ್ಲೇ ಸಾಕಷ್ಟು ಜನಸಂಖ್ಯೆ ಇರುವಾಗ ಬೇರೆ ದೇಶಗಳಿಗೆ ರಫ್ತು ಮಾಡಿತು. ಸರಕಾರದ ಒಂದು ತಪ್ಪಿನಿಂದ ನಮ್ಮಲ್ಲಿ ಎಲ್ಲ ಜನರಿಗೆ ವ್ಯಾಕ್ಸಿನ್ ಸಿಗದೇ ಈಗ ಸಾಯುವಂತಾಗಿದೆ. ಅದಕ್ಕೆ ಹೊಣೆ ಯಾರು? ಒಂದು ದೊಡ್ಡ ಸಾಂಕ್ರಾಮಿಕ ರೋಗ ಬಂದಾಗ ಅದನ್ನು ಸಮರ್ಥವಾಗಿ ನಿಭಾಯಿಸುವುದು ಸರಕಾರದ ದೊಡ್ಡ ಕರ್ತವ್ಯ. ಇದರಲ್ಲಿ ತಪ್ಪಾಗಿದೆ.
ನಾನು ವೈದ್ಯಳಾಗಿ ನೋಡಿದಾಗ ಎಲ್ಲವೂ ತಪ್ಪಾಗಿ ಕಾಣುತ್ತದೆ. ಎಲ್ಲಿಯೂ ಕೊರೊನಾ ನಿಯಮಾವಳಿಗಳ ಪಾಲನೆಯಾಗಿಲ್ಲ. ಅದೇ ರಾಜಕಾರಣಿಯಾಗಿ ನಾವು ಕಾರ್ಯಕ್ರಮಗಳಿಗೆ ಹೋಗಬೇಕು. ಜನರ ಜತೆ ಬೆರೆಯಬೇಕು. ಇದು ಅನಿವಾರ್ಯ. ಹೀಗಿರುವಾಗ ಸರಕಾರವೇ ಎಲ್ಲದಕ್ಕೂ ನಿರ್ಬಂಧ ಹಾಕಿ ಒಂದು ಕಠಿನ ನೀತಿ ಜಾರಿಗೆ ತರಬೇಕು. ಕಾಟಾಚಾರದ ಕ್ರಮ ಯಾವು ದಕ್ಕೂ ಪ್ರಯೋಜನ ಇಲ್ಲ. ಈಗ ಪ್ರತಿನಿತ್ಯ ಸಹಸ್ರಾರು ಪ್ರಕರಣಗಳು ವರದಿಯಾಗುತ್ತಿವೆ. ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಜಾರಿ ಮಾಡಿದ್ದರಿಂದ ಅಲ್ಲಿಂದ ಜನರು ಬರುತ್ತಿದ್ದಾರೆ. ಅವರನ್ನು ಹೇಗೆ ನಿಯಂತ್ರಣ ಮಾಡಬೇಕು. ಮನೆಯಲ್ಲೇ ಹೇಗೆ ಇಡಬೇಕು ಎಂಬುದರ ಬಗ್ಗೆ ಸರಕಾರ ಆಲೋಚನೆ ಮಾಡಬೇಕು. ಎರಡನೇ ಅಲೆಯ ಸರಪಳಿ ತುಂಡು ಮಾಡಬೇಕಾದರೆ 15 ದಿನಗಳ ಲಾಕ್‌ಡೌನ್ ಒಂದೇ ಪರಿಹಾರ. ಅದನ್ನು ಬಿಟ್ಟು ಜಟಕಾ ಶೋ ರೀತಿಯ ರಾತ್ರಿ ಕರ್ಫ್ಯೂನಿಂದ ಏನೂ ಪ್ರಯೋಜನ ಇಲ್ಲ.
ಖಾನಾಪುರ ಕ್ಷೇತ್ರದಲ್ಲಿ ಇದುವರೆಗೆ ಅಂತಹ ಪ್ರಕರಣ ಗಳು ವರದಿಯಾಗಿಲ್ಲ. ಆದರೂ ಸಹ ನಿರಂತರವಾಗಿ ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆದಿದೆ. ನಾವು ಕಡ್ಡಾಯವಾಗಿ ಮಾಸ್ಕ್ ಹಾಕಿದರೆ ಜನರು ನಮ್ಮನ್ನು ಅನುಮಾನದಿಂದ ನೋಡುತ್ತಾರೆ. ನಾವೇ ಲಾಕ್‌ಡೌನ್ ಬಗ್ಗೆ ಹೇಳಿದರೆ ಸರಕಾರ ಆದೇಶ ಮಾಡಿಲ್ಲ. ನಿಮ್ಮದೇನು ಎನ್ನುವ ರೀತಿಯಲ್ಲಿ ಪ್ರಶ್ನೆ ಮಾಡುತ್ತಾರೆ ಇದರಲ್ಲಿ ಜನರ ಜವಾಬ್ದಾರಿ ಬಹಳ ಇದೆ.
– ಡಾ| ಅಂಜಲಿ ನಿಂಬಾಳ್ಕರ್, ಶಾಸಕಿ, ಖಾನಾಪುರ