Advertisement

ಬೆಳಗಾವಿ: ಅತಿವೃಷ್ಟಿಯಿಂದ ಉಂಟಾಗಿದ್ದ ಬೆಳೆ ಹಾನಿಗೆ ಸಂಬಂಧಿಸಿ ಕೇಂದ್ರ ಸರಕಾರಕ್ಕೆ ತ್ವರಿತವಾಗಿ ಪ್ರಸ್ತಾವ ಸಲ್ಲಿಸಿ, ಒಂದೇ ತಿಂಗಳಲ್ಲಿ 14 ಲಕ್ಷ ರೈತರ ಖಾತೆಗಳಿಗೆ ಸರಕಾರ 926.43 ಕೋಟಿ ರೂ.ಪರಿಹಾರ ಜಮಾ ಮಾಡಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು.

Advertisement

ಅತಿವೃಷ್ಟಿ, ಬೆಳೆಹಾನಿ ಮೇಲೆ ನಡೆದ ಚರ್ಚೆಗೆ ವಿಧಾನಸಭೆಯಲ್ಲಿ ಮಂಗಳವಾರ ಅವರು ಉತ್ತರಿಸಿದರು. ಬಿಜೆಪಿ ಸರಕಾರದಿಂದ ನಯಾಪೈಸೆ ಪರಿಹಾರ ನೀಡಿಲ್ಲವೆಂದ ಪ್ರತಿಪಕ್ಷ ನಾಯಕರ ಹೇಳಿಕೆಗೆ, ನಾನೂ ಕೂಡ ಪೈಸೆ ನೀಡಿಲ್ಲ ಎಂದಿದ್ದೆ. ಯಾಕೆಂದರೆ, ನಾವು ಕೋಟ್ಯಂತರ ರೂ.ಗಳನ್ನು ಸಂಕಷ್ಟದಲ್ಲಿರುವ ರೈತರು, ಸಂತ್ರಸ್ತರಿಗೆ ಶರವೇಗದಲ್ಲಿ ನೀಡುವ ಮೂಲಕ ನೆರವಿಗೆ ಧಾವಿಸಿದ್ದೇವೆ ಎಂದರು.

ಅತಿವೃಷ್ಟಿಯಿಂದ 12.52 ಲಕ್ಷ ಹೆಕ್ಟೇರ್‌ ಜಮೀನಿನಲ್ಲಿ ಬೆಳೆ ಹಾನಿ ಸಂಭವಿಸಿದ್ದು, ತತ್‌ಕ್ಷಣ ಜಂಟಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಪರಿಹಾರ ನೀಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸಮೀಕ್ಷೆ ನಡೆಸಿ ಮೊದಲ ಬಾರಿ 841.57 ಕೋಟಿ ರೂ. ಮತ್ತು ಎರಡನೇ ಬಾರಿ 1,291 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಎರಡು ಬಾರಿಯೂ ಸಕಾಲಕ್ಕೆ ಕೇಂದ್ರ ತಂಡ ಆಗಮಿಸಿ, ವರದಿ ಸಲ್ಲಿಕೆ ಮಾಡಿತ್ತು. ಇದರ ಪರಿಣಾಮವಾಗಿ ಕೇವಲ ಒಂದೇ ತಿಂಗಳಲ್ಲಿ ನಮ್ಮ ಸರಕಾರ ರೈತರ ಖಾತೆಗಳಿಗೆ ಪರಿಹಾರ ನೀಡಿ ದಾಖಲೆ ಬರೆದಿದೆ ಎಂದರು.

ಇದನ್ನೂ ಓದಿ:40 ನಗರಗಳಲ್ಲಿ ಬರಲಿದೆ ವಿಶೇಷ ಹೈಬ್ರಿಡ್‌ ಶಾಲೆ; ದಕ್ಷಿಣ ಏಷ್ಯಾದಲ್ಲಿಯೇ ಇಂಥ ಪ್ರಯತ್ನ ಮೊದಲು

ಕಾಫಿ ಬೆಳೆಗೂ ಪರಿಹಾರ
ಕೊಡಗಿನಲ್ಲಿ ಹಾನಿಗೀಡಾದ ಕಾಫಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 18 ಸಾವಿರ ರೂ.ನಂತೆ ಒಟ್ಟು 38.80 ಕೋಟಿ ರೂ. ಪರಿಹಾರ ನೀಡಲಾಗಿದೆ. ಅತಿವೃಷ್ಟಿಯಿಂದ 62 ಜೀವ ಹಾನಿ ಸಂಭವಿಸಿದ್ದು, 945 ಜಾನುವಾರುಗಳು ಸಾವಿಗೀಡಾಗಿವೆ. 54,716 ಮನೆ, 3306 ಸೇತುವೆಗಳಿಗೆ, 995 ಸಣ್ಣ ನೀರಾವರಿ ಕೆರೆಗಳಿಗೆ ಹಾನಿ ಸಂಭವಿಸಿದೆ. ರಾಜ್ಯ ಸರಕಾರ ತತ್‌ಕ್ಷಣ ಸಂತ್ರಸ್ತರ ನೆರವಿಗೆ ಧಾವಿಸಿ ಪರಿಹಾರವನ್ನು ಪ್ರಾಮಾಣಿಕವಾಗಿ ಒದಗಿಸಿದೆ. ಕೇಂದ್ರ ಸರಕಾರ 15ನೇ ಹಣಕಾಸು 5270 ಕೋ. ರೂ. ಬಿಡುಗಡೆ ಮಾಡುತ್ತಿದೆ. ಹೆಚ್ಚಿನ ಪರಿಹಾರ ಕೋರಿ ಮುಖ್ಯಮಂತ್ರಿ ಅವರು ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎಂದರು.

Advertisement

23,716 ಮನೆ ಹಾನಿ
23,716 ಮನೆಗಳಿಗೆ ಹಾನಿಯಾಗಿದ್ದು, 332.87 ಕೋಟಿ ರೂ. ಪರಿಹಾರ ನೀಡಲಾಗಿದೆ. ಸಂಪೂರ್ಣ ಮನೆ ಹಾನಿಯಾಗಿದ್ದರೆ, ಎನ್‌ಡಿಆರ್‌ಎಫ್ನಿಂದ 95,100 ರೂ., ರಾಜ್ಯ ಸರಕಾರದಿಂದ 4 ಲಕ್ಷ 49 ಸಾವಿರ ರೂ. ಸೇರಿ 5 ಲಕ್ಷ ರೂ. ಕೊಡಲಾಗುತ್ತಿದೆ. ಪ್ರವಾಹದಲ್ಲಿ ಮನೆಗಳು ಮುಳುಗಿ ನಷ್ಟಕ್ಕೆ ಒಳಗಾದ ತುರ್ತು ಪರಿಹಾರವಾಗಿ 10 ಸಾವಿರ ರೂ. ನೆರವು ನೀಡಲಾಗಿದೆ. ತೀವ್ರ ಹಾನಿಗೀಡಾದ ಮನೆಗಳಿಗೆ 3 ಲಕ್ಷ ರೂ. ಹಾಗೂ ಭಾಗಶಃ ಹಾನಿಗೀಡಾದ ಮನೆಗಳಿಗೆ 50 ಸಾವಿರ ರೂ.ಪರಿಹಾರ ಕೊಡಲಾಗುತ್ತಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next