Advertisement

ರಾಜ್ಯಕ್ಕೆ 918ರ ಆಘಾತ

02:03 AM Jun 28, 2020 | Sriram |

ಬೆಂಗಳೂರು: ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನ 918 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಶನಿವಾರ ಕೋವಿಡ್ ಬರಸಿಡಿಲು ಎರಗಿದೆ.
ರಾಜಧಾನಿ ಬೆಂಗಳೂರಿನಲ್ಲೇ 500ಕ್ಕೂ ಹೆಚ್ಚು ಪ್ರಕರಣ ದೃಢಪಟ್ಟಿರುವುದು ಇನ್ನೊಂದು ಆಘಾತಕಾರಿ ವಿಚಾರ.

Advertisement

ಲಾಕ್‌ಡೌನ್‌ ಸಡಿಲವಾದ ಬಳಿಕ ಸೋಂಕುಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಚಿಕಿತ್ಸೆ ಫ‌ಲಕಾರಿಯಾಗದೆ 11 ಮಂದಿ ಮೃತಪಟ್ಟಿದ್ದಾರೆ. ಶನಿವಾರದ ಪ್ರಕರಣಗಳಲ್ಲಿ ಬೆಂಗಳೂರಿನದ್ದೇ ಸಿಂಹಪಾಲು. ಇಲ್ಲಿ 596 ಪ್ರಕರಣಗಳು ದೃಢಪಟ್ಟಿವೆ.

ಸೋಂಕು ತಗಲಿದ ಹಿನ್ನೆಲೆ ಮಾಹಿತಿ ಇಲ್ಲ
ಪ್ರತೀ ನಿತ್ಯ ಆರೋಗ್ಯ ಇಲಾಖೆ ನೀಡುವ ಕೋವಿಡ್ ವರದಿಯಲ್ಲಿ ಪ್ರತೀ ರೋಗಿಯ ಪ್ರಯಾಣ ಹಿನ್ನೆಲೆ (ಟ್ರ್ಯಾವೆಲ್‌ ಹಿಸ್ಟರಿ) ಅಥವಾ ಯಾರಿಂದ ಸೋಂಕು ತಗಲಿದೆ ಅಥವಾ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ ಎಂಬ ಮಾಹಿತಿ ನೀಡಲಾಗುತ್ತಿತ್ತು. ಆದರೆ ಶನಿವಾರದ ವರದಿಯಲ್ಲಿ ಈ ಮಾಹಿತಿಯೇ ಮಾಯವಾಗಿದೆ. ಪ್ರಕರಣ ದಿನೇ ದಿನೆ ಹೆಚ್ಚಾಗುತ್ತಿರುವುದರಿಂದ ಮೂಲಗಳನ್ನು ಪತ್ತೆ ಹಚ್ಚಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಸೋಂಕುಪೀಡಿತರಲ್ಲಿ ಹೊರ ರಾಜ್ಯ ಮತ್ತು ಹೊರ ದೇಶದಿಂದ ಬಂದವರು ಎಷ್ಟಿದ್ದಾರೆ ಮತ್ತು ಆಯಾ ರಾಜ್ಯ ಮತ್ತು ದೇಶದ ಹೆಸರನ್ನು ಉಲ್ಲೇಖೀಸಲಾಗುತ್ತಿತ್ತು. ಈಗ ರಾಜ್ಯದಲ್ಲಿ ಇರುವವರಲ್ಲಿಯೇ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಸೋಂಕಿನ ಮೂಲದ ಮಾಹಿತಿ ಬಹಿರಂಗಪಡಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಕೋಟಿ ಸನಿಹಕ್ಕೆ ಸೋಂಕು
ಹೊಸದಿಲ್ಲಿ: ಕೋವಿಡ್‌ ಸೋಂಕು ಈಗ ಜಗತ್ತಿನಾದ್ಯಂತ ವ್ಯಾಪಕ ಪ್ರಮಾಣದಲ್ಲಿ ವ್ಯಾಪಿಸಿದ್ದು, ಒಂದು ಕೋಟಿ ಪ್ರಕರಣಗಳ ಸನಿಹಕ್ಕೆ ಬಂದಿದೆ. ಶನಿವಾರ ರಾತ್ರಿ ವೇಳೆಗೆ ಜಾಗತಿಕವಾಗಿ ಪ್ರಕರಣಗಳ ಸಂಖ್ಯೆ 99.99 ಲಕ್ಷಕ್ಕೆ ತಲುಪಿತ್ತು. ತಡರಾತ್ರಿ ವೇಳೆಗೆ ಇದು ಒಂದು ಕೋಟಿ ದಾಟುವ ಸಾಧ್ಯತೆ ಇದೆ. ಸಾವಿನ ಸಂಖ್ಯೆಯೂ 5 ಲಕ್ಷದತ್ತ ಸಾಗಿದೆ. ಒಟ್ಟಾರೆ 54 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next