ಬೆಂಗಳೂರು : ಉಕ್ರೇನ್ ನಲ್ಲಿ ಸಾವಿರಾರು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿರುವ ವಿಚಾರದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ನೀಡಿದ ಹೇಳಿಕೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ವಿದೇಶದಲ್ಲಿ ಮೆಡಿಸಿನ್ ಅಧ್ಯಯನ ಮಾಡುತ್ತಿರುವ 90% ವಿದ್ಯಾರ್ಥಿಗಳು ಭಾರತದಲ್ಲಿ ಅರ್ಹತಾ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದವರು ಎಂದು ಸಚಿವ ಜೋಶಿ ಹೇಳಿಕೆ ನೀಡಿದ್ದರು.
ಹೇಳಿಕೆ ವಿರುದ್ಧ ಕಾಂಗ್ರೆಸ್ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಲವರು ಸಚಿವರೇ ನಿಮ್ಮ ಶಿಕ್ಷಣ ಎಷ್ಟು, ನೀವು ಸಚಿವರಲ್ಲವೇ ಎಂದು ಸಾಮಾಜಿಕ ತಾಣಗಳಲ್ಲಿ ಪ್ರಶ್ನಿಸಿದ್ದಾರೆ. ಸಚಿವರು ತತ್ ಕ್ಷಣ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಸೇರಿ ವಿಪಕ್ಷಗಳು ಆಗ್ರಹಿಸಿವೆ.
ಈ ಸಮಯದಲ್ಲಿ ವಿದ್ಯಾರ್ಥಿಗಳ ವಿರುದ್ಧ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸಬೇಕು. ಭಾರತೀಯ ವಿದ್ಯಾರ್ಥಿಯೊಬ್ಬ ವೈದ್ಯಕೀಯ ಅಧ್ಯಯನಕ್ಕಾಗಿ ವಿದೇಶಕ್ಕೆ ಏಕೆ ಹೋಗುತ್ತಾನೆ ಎಂಬುದರ ಹಿಂದಿನ ಸತ್ಯಗಳನ್ನು ದಯವಿಟ್ಟು ಅರಿತುಕೊಳ್ಳಿ ಎಂದು ಕಿಡಿ ಕಾರಿದ್ದಾರೆ.
ಉಕ್ರೇನ್ ನಲ್ಲಿ ರಷ್ಯಾ ಶೆಲ್ ದಾಳಿಗೆ ಸಾವನ್ನಪ್ಪಿದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ತಂದೆ ಶೇಖರಗೌಡ ಅವರ ಮಾತನ್ನು ಉಲ್ಲೇಖಿಸಿ ಹಲವು ಟ್ವೀಟ್ ಮಾಡಿದ್ದಾರೆ. ”ನನ್ನ ಮಗ 97 % ಅಂಕ ಪಡೆದಿದ್ದ,ಆದರೂ ಇಲ್ಲಿ ಸೀಟ್ ಸಿಗಲಿಲ್ಲ” ಎಂದು ಅವರು ಪುತ್ರಶೋಕದಲ್ಲಿ ಹೇಳಿಕೆ ನೀಡಿದ್ದರು.
ಸಚಿವರ ಹೇಳಿಕೆ ಶಿಕ್ಷಣ ರಂಗದಲ್ಲಿನ ಅನೇಕ ವಿಚಾರಗಳಿಗೆ ಹೊಸ ಚರ್ಚೆ ಹುಟ್ಟು ಹಾಕಲು ಕಾರಣವಾಗಿದ್ದು, ಸಾಮಾಜಿಕ ತಾಣಗಳಲ್ಲಿ ಈಗಾಗಲೇ ಚರ್ಚೆ ಆರಂಭವಾಗಿದ್ದು, ವ್ಯಾಪಕ ಟೀಕೆಗಳ ಪ್ರವಾಹ ಹರಿದು ಬರುತ್ತಿದೆ.