ಜೈಪುರ: ಆಟ ಆಡುತ್ತಿದ್ದ ವೇಳೆ ಬೋರ್ ವೆಲ್ ಗೆ ಬಿದ್ದ ಬಾಲಕನೊಬ್ಬನನ್ನು ನಿರಂತರ ಕಾರ್ಯಾಚರಣೆಯನ್ನು ನಡೆಸಿ ರಕ್ಷಣೆ ಮಾಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಬಾಲಕನನ್ನು 4ನೇ ತರಗತಿ ವಿದ್ಯಾರ್ಥಿ ಲಕ್ಕಿ(9) ಎಂದು ಗುರುತಿಸಲಾಗಿದೆ.
ಶಾಲಾ ರಜೆಯಲ್ಲಿ ಭೋಜ್‌ಪುರ ಗ್ರಾಮದಲ್ಲಿರುವ ತನ್ನ ಸಂಬಂಧಿಕರೊಬ್ಬರ ಮನೆಗೆ ಬಂದಿದ್ದ ಲಕ್ಕಿ ಶನಿವಾರ (ಮೇ.20 ರಂದು) ಬೆಳಗ್ಗೆ ಮನೆಯ ಬಳಿ ಆಡಲು ಹೋಗಿದ್ದ ವೇಳೆ 200 ಆಳದ ಬೋರ್ ವೆಲ್ ಬಿದ್ದಿದ್ದಾನೆ. ಕೂಡಲೇ ರಕ್ಷಣಾ ತಂಡಗಳಾದ ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದೆ.
100 ಅಡಿ ಆಳದಲ್ಲಿ ಸಿಲುಕ್ಕಿದ್ದ ಲಕ್ಕಿಗೆ ಹಗ್ಗದ ಮೂಲಕ ನೀರು ಹಾಗೂ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಿ, ಅಲ್ಲೇ ಪಕ್ಕದಲ್ಲಿ ಮತ್ತೊಂದು ಹೊಂಡವನ್ನು ಅಗೆದು ಕೆಲ ಗಂಟೆಗಳ ಪ್ರಯತ್ನದ ನಂತರ ಬಾಲಕನನ್ನು ಬೋರ್‌ವೆಲ್‌ನಿಂದ ಸುರಕ್ಷಿತವಾಗಿ ಹೊರತೆಗೆಯಲಾಗಿದೆ ಎಂದು ವರದಿ ತಿಳಿಸಿದೆ.