Advertisement

ಕುಡಿವ ನೀರಿಗಾಗಿ 9 ಸಾವಿರ ಕೋಟಿ ಅನುದಾನ: ಭೈರತಿ ಬಸವರಾಜ

04:51 PM Jan 14, 2023 | Team Udayavani |

ಹುಬ್ಬಳ್ಳಿ: ರಾಜ್ಯದಲ್ಲಿ ನೀರು ಒದಗಿಸುವ ಕಾರ್ಯಕ್ಕಾಗಿಯೇ 9 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದರು.

Advertisement

ಶುಕ್ರವಾರ ನಡೆದ ಅಣ್ಣಿಗೇರಿ ಪಟ್ಟಣಕ್ಕೆ ನಿರಂತರ ಕುಡಿಯುವ ನೀರು ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಅವರ ಮಹತ್ವಾಕಾಂಕ್ಷೆ ಯೋಜನೆಯಡಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ನೀಡುವುದು ನಮ್ಮ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಅಮೃತ್‌-2 ಯೋಜನೆಯಡಿ 9 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಜ್ಯಕ್ಕೆ ನೀರು ಒದಗಿಸುವ ಯೋಜನೆಗೆ ಒಪ್ಪಿಗೆ ಸಿಕ್ಕಿದ್ದು, ನೀರಿನ ಬವಣೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ನೀರು ಪೂರೈಕೆಗೆ ಪೈಪ್‌ಲೈನ್‌ ಅಳವಡಿಕೆಗೆ ಸಚಿವ ಭೈರತಿ ಬಸವರಾಜ 54 ಸಾವಿರ ಕೋಟಿ ರೂ. ಮಂಜೂರು ಮಾಡಿದ್ದಾರೆ.

ಡಿಪಿಆರ್‌ಗೆ ಬೇಗ ಅನುಮೋದನೆ ಪಡೆಯುವಲ್ಲಿ ಕಾಂಗ್ರೆಸ್‌ ವಿಳಂಬ ಮಾಡಿತು. ನಾವು ಕಟ್ಟಿದ ಕಾಲುವೆಗೆ ಗೋವಾ ಕಾಂಗ್ರೆಸ್‌ ಕೋರ್ಟ್‌ನಲ್ಲಿ ತಡೆ ತಂದಿತು. ಕುಡಿವ ನೀರಿನ ವಿಷಯವನ್ನು ನ್ಯಾಯಮಂಡಳಿಗೆ ಒಯ್ದಿದ್ದು ಯುಪಿಎ ಸರಕಾರ. ಅರಣ್ಯ ಇಲಾಖೆ ಅನುಮೋದನೆ ಕೂಡ ಸಿಗಲಿದೆ. ಚುನಾವಣೆ ಘೋಷಣೆಗೆ ಮುಂಚೆ ಯೋಜನೆಯ ಕಾಮಗಾರಿಗೆ ಭೂಮಿಪೂಜೆ ಮಾಡುತ್ತೇವೆ. ಈ ಕೆಲಸ ಬಿಜೆಪಿ ಅವಧಿಯಲ್ಲಿ ಆಗಬೇಕು. ಉಳಿದವರು ಮಾಡಲ್ಲ ಸಾಧ್ಯವಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಕೆರೆ ನಿರ್ಮಾಣದ ಪ್ರಸ್ತಾವಕ್ಕೆ ಅಂದು ಸಿಎಂ ಆಗಿದ್ದ ಜಗದೀಶ ಶೆಟ್ಟರ ತಕ್ಷಣ ಅನುಮೋದನೆ ನೀಡಿ ಪಟ್ಟಣಕ್ಕೆ ದೊಡ್ಡ ಕೊಡುಗೆ ನೀಡಿದರು. ಸಂಕ್ರಾಂತಿಯೊಳಗೆ ನಿಮ್ಮ ಮನೆಗೆ ನೀರು ಬರಲಿದೆ. ನೀರು ಪೂರೈಕೆಗೆ ಪೈಪ್‌ ಲೈನ್‌ ಅಳವಡಿಕೆ ನಡೆಯುತ್ತಿದ್ದು, 24×7 ನೀರು ಸಿಗಲಿದೆ. ಅದಕ್ಕಾಗಿ ಹಣ ಮಂಜೂರಾಗಿದೆ.

Advertisement

ನವಲಗುಂದಕ್ಕೆ ನಿರಂತರ ನೀರು ಕೊಡಲು 48 ಕೋಟಿ ರೂ. ಅನುದಾನವನ್ನು ಈಗಾಗಲೇ ಸಚಿವ ಭೈರತಿ ಬಸವರಾಜ ಕೊಟ್ಟಿದ್ದಾರೆ. ಪಟ್ಟಣದಲ್ಲಿ ಕ್ರೀಡಾ ಪಾರ್ಕ್‌ಗಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ 5 ಕೋಟಿ ರೂ. ನೀಡಿದ್ದಾರೆ. ಕ್ಷೇತ್ರದ 71 ಹಳ್ಳಿಗಳಿಗೆ ಜಲಧಾರೆ ಯೋಜನೆಯಡಿ ನೀರು ಒದಗಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.

ಅಣ್ಣಿಗೇರಿ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಎಸ್‌. ನಿಡವಣಿ ಪ್ರಾಸ್ತಾವಿಕ ಮಾತನಾಡಿದರು. ಕೆರೆಗೆ ಭೂಮಿ ನೀಡಿದ ರೈತರನ್ನು ಸನ್ಮಾನಿಸಲಾಯಿತು. ಇಮಾಮಸಾಬ ವಲ್ಲೆಪ್ಪನವರ ಮತ್ತು ಸಂಗಡಿಗರು ಡೊಳ್ಳಿನ ಪದಗಳನ್ನು ಹಾಡಿದರು.

ಬಿಜೆಪಿ ರೈತ ಮೋರ್ಚಾದ ಷಣ್ಮುಖ ಗುರಿಕಾರ ಮಾತನಾಡಿದರು. ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮೀಜಿ, ಅಟ್ನೂರಿನ ಅಭಿನವ ಪಂಚಾಕ್ಷರ ಸ್ವಾಮೀಜಿ, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಡಾ| ಎ.ಸಿ. ವಾಲಿ ಮಹಾರಾಜರು, ಅಣ್ಣಿಗೇರಿ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯರಾದ ಪ್ರದೀಪ ಶೆಟ್ಟರ, ಪ್ರೊ| ಎಸ್‌.ವಿ. ಸಂಕನೂರ, ಅಣ್ಣಿಗೇರಿ ಪುರಸಭೆ ಉಪಾಧ್ಯಕ್ಷೆ ಜಯಲಕ್ಷ್ಮೀ ಜಕರಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ
ಬಾಬಾಜಾನ ಮುಲ್ಲಾನವರ, ಭದ್ರಾಪುರ ಗ್ರಾಪಂ ಹಂಗಾಮಿ ಅಧ್ಯಕ್ಷ ವೀರಭದ್ರಪ್ಪ ಅಂಗಡಿ, ಅಣ್ಣಿಗೇರಿ ಪುರಸಭೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಗಳ ರೈತರು, ಸಾರ್ವಜನಿಕರು ಇದ್ದರು. ಭುವನೇಶ್ವರಿ ಮತ್ತು ಸಂಗಡಿಗರು ಪ್ರಾರ್ಥಿಸಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ನೀರು ಸೇರಿದಂತೆ ಸ್ಥಳೀಯ ಸಮಸ್ಯೆಗಳಿಗೆ ಮೊದಲ ಆದ್ಯತೆ ಮೇರೆಗೆ ಸ್ಪಂದಿಸಿದ್ದೇನೆ. ಕಳಸಾ-ಬಂಡೂರಿ ನಾಲಾ ಯೋಜನೆಗೆ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಈಗಾಗಲೇ ಕೇಂದ್ರದಲ್ಲಿ ಪ್ರಹ್ಲಾದ ಜೋಶಿ ಅವರ ಪರಿಶ್ರಮ ಸೇರಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸತತ ಪ್ರಯತ್ನದಿಂದ ಯೋಜನೆ ಒಂದು ಹಂತಕ್ಕೆ ಬಂದಿದ್ದು, ಅದಕ್ಕೆ ಸ್ಪಷ್ಟವಾದ ಸ್ವರೂಪ ನೀಡುತ್ತೇವೆ.
ಜಗದೀಶ ಶೆಟ್ಟರ, ಮಾಜಿ ಮುಖ್ಯಮಂತ್ರಿ

ನೀರು ಪೂರೈಕೆಗೆ ಇನ್ನೂ ನಳ ಹಾಕಿಲ್ಲ. ನನ್ನ ಮನೆ ಸೇರಿದಂತೆ ಹಲವು ಮನೆಗಳಿಗೆ ನೀರು ಬಂದಿಲ್ಲ. ಆ ನಿಟ್ಟಿನಲ್ಲಿ ಕಾಮಗಾರಿಯೇ ಇನ್ನು ನಡೆದಿಲ್ಲ. ವೇದಿಕೆಯಲ್ಲಿರುವ ಸಚಿವರು ಅಣ್ಣಿಗೇರಿ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಬೇಕು. ಈ ಕಾಮಗಾರಿಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ವಿನಯ ಕುಲಕರ್ಣಿ, ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಅವರ ಶ್ರಮವೂ ಇದೆ.
ಗಂಗಾ ಕರೆಟ್ಟನವರ, ಅಣ್ಣಿಗೇರಿ
ಪುರಸಭೆ ಅಧ್ಯಕ್ಷೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next