ನವದೆಹಲಿ: ತೆಲಂಗಾಣ , ಮೇಘಾಲಯ ಸೇರಿದಂತೆ 9 ರಾಜ್ಯಗಳು ಕೆಲವು ಅಪರಾಧಗಳ ತನಿಖೆಗಾಗಿ ಕೇಂದ್ರೀಯ ತನಿಖಾ ದಳಕ್ಕೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿವೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಬುಧವಾರ ಹೇಳಿದ್ದಾರೆ.
ಲೋಕಸಭೆ ಕಲಾಪದಲ್ಲಿ ಕೇಂದ್ರ ಸಚಿವರು ಈ ಕುರಿತು ಮಾಹಿತಿ ನೀಡಿದರು.
ಛತ್ತೀಸ್‌ಗಢ, ಜಾರ್ಖಂಡ್, ಕೇರಳ, ಮೇಘಾಲಯ, ಮಿಜೋರಾಂ, ಪಂಜಾಬ್, ರಾಜಸ್ಥಾನ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಕೆಲವು ಅಪರಾಧಗಳ ತನಿಖೆಗಾಗಿ ಕೇಂದ್ರೀಯ ತನಿಖಾ ದಳಕ್ಕೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ವಾಪಸ್ ಪಡೆದಿವೆ ಎಂದು ಹೇಳಿದರು.
ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ಡಿಎಸ್‌ಪಿಇ) ಕಾಯಿದೆ, 1946 ರ ಸೆಕ್ಷನ್ 6 ರ ಪ್ರಕಾರ, ಸಿಬಿಐ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ಆಯಾ ರಾಜ್ಯ ಸರ್ಕಾರಗಳಿಂದ ಒಪ್ಪಿಗೆ ಪಡೆಯಬೇಕು ಎಂದು ಲಿಖಿತ ಉತ್ತರದಲ್ಲಿ ತಿಳಿಸಿದರು.
ಡಿಎಸ್‌ಪಿಇ ಕಾಯಿದೆ, 1946 ರ ಸೆಕ್ಷನ್ 6 ರ ನಿಬಂಧನೆಗಳ ಪ್ರಕಾರ, ನಿರ್ದಿಷ್ಟ ವರ್ಗದ ವ್ಯಕ್ತಿಗಳ ವಿರುದ್ಧದ ನಿರ್ದಿಷ್ಟ ವರ್ಗದ ಅಪರಾಧಗಳ ತನಿಖೆಗಾಗಿ ರಾಜ್ಯ ಸರ್ಕಾರಗಳು ಸಿಬಿಐಗೆ ಸಾಮಾನ್ಯ ಒಪ್ಪಿಗೆಯನ್ನು ನೀಡಿವೆ, ಆ ನಿರ್ದಿಷ್ಟ ವಿಷಯಗಳನ್ನು ನೋಂದಾಯಿಸಲು ಮತ್ತು ತನಿಖೆ ಮಾಡಲು ಏಜೆನ್ಸಿಗೆ ಅನುವು ಮಾಡುತ್ತಿದೆ ಎಂದು ಹೇಳಿದರು.