Advertisement

9 ಗೋಶಾಲೆಗಳಿಗೆ ಅನುದಾನಕ್ಕೆ ಶಿಫಾರಸು: ದ.ಕ. ಜಿಲ್ಲಾ ಪ್ರಾಣಿದಯಾ ಸಂಘದ ಸಭೆ

12:46 AM May 24, 2022 | Team Udayavani |

ಮಂಗಳೂರು: ಪಿಂಜಾರ ಪೋಲ್‌ ಮತ್ತು ಇತರ ಗೋಶಾಲೆಗಳಿಗೆ ಬೆಂಬಲ ನೀಡುವ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಸಹಾಯಧನ ಕೋರಿ ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದ 9 ಗೋಶಾಲೆಗಳಿಗೆ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅಧ್ಯಕ್ಷತೆಯಲ್ಲಿ ಡಿಸಿ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಪ್ರಾಣಿದಯಾ ಸಂಘದ ಸಭೆಯಲ್ಲಿ ಅನುದಾನಕ್ಕೆ ಶಿಫಾರಸು ಮಾಡಲಾಯಿತು.

Advertisement

ಸರಕಾರಿ ಜಿಲ್ಲಾ ಗೋಶಾಲೆ ಸ್ಥಾಪನೆಗೆ ಕಡಬ ತಾಲೂಕಿನ ರಾಮಕುಂಜ ಗ್ರಾಮ ದಲ್ಲಿ ಸ್ಥಳ ಗುರುತಿಸಲಾಗಿದ್ದು, ಮೊದಲ ಹಂತದ ಕಾಮಗಾರಿಗೆ 36 ಲಕ್ಷ ರೂ.ಗಳಿಗೆ ಅನುಮೋದನೆ ನೀಡಲಾಗಿದ್ದು ಕೆಲಸ ಆರಂಭವಾಗಿದೆ. ಎರಡು ಬೋರ್‌ವೆಲ್‌ ಕೊರೆದಿದ್ದು ಉತ್ತಮ ನೀರು ದೊರಕಿದೆ. ಗೋಶಾಲೆ ಸುತ್ತ ಬೇಲಿ ನಿರ್ಮಾಣವಾಗುತ್ತಿದೆ. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗೋಶಾಲೆಗೆ ಕೊಟ್ಟಿಗೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದೆಂದು ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ| ಪ್ರಸನ್ನ ಕುಮಾರ್‌ ಮಾಹಿತಿ ನೀಡಿದರು.

ಎಸಿಪಿ ದರ್ಜೆ ಅಧಿಕಾರಿ ಜಿಲ್ಲೆಯಲ್ಲಿ ಪ್ರಾಣಿಗಳ ಹಿಂಸೆಯನ್ನು ತಡೆಗಟ್ಟಲು ಆ ಕುರಿತ ದೂರನ್ನು ಪೊಲೀಸ್‌ ಸಹಾಯವಾಣಿ 112ರಲ್ಲಿ ದಾಖಲಿಸಬೇಕು. ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಎಸಿಪಿ ಅಥವಾ ಅದಕ್ಕೂ ಮೇಲಿನ ಹುದ್ದೆಯ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸುವಂತೆ ಪೊಲೀಸ್‌ ಇಲಾಖೆಗೆ ಡಿಸಿ ಸೂಚಿಸಿದರು.

ಪೊಲೀಸ್‌ ಹಾಗೂ ಪಶುಪಾಲನ ಇಲಾಖೆಯ ಅಧಿಕಾರಿಗಳಿಗೆ ಪ್ರಾಣಿ ಹಿಂಸೆ ತಡೆ ಕಾಯಿದೆ ಬಗ್ಗೆ ಅರಿವು ಮೂಡಿಸಲು ಕೂಡಲೇ ಕಾರ್ಯಾಗಾರವನ್ನು ಏರ್ಪಡಿಸು ವಂತೆ ಸೂಚಿಸಿದ ಅವರು, ಮಹಾನಗರ ಪಾಲಿಕೆ ಅಧೀನದಲ್ಲಿರುವ ಕಸಾಯಿ ಖಾನೆಗೆ ಸಿಸಿ ಕೆಮರಾ ಅಳವಡಿಸುವಂತೆ ಹಾಗೂ ಕಸಾಯಿ ಖಾನೆಗೆ ಬರುವ ವಾಹನಗಳ ಸಂಖ್ಯೆಯನ್ನು ದಾಖಲೆ ಪುಸ್ತಕದಲ್ಲಿ ನಿರ್ವಹಿಸಲು ತಿಳಿಸಿದರು.

ಜಾನುವಾರುಗಳನ್ನು ಅನಧಿಕೃತವಾಗಿ ಸಾಗಾಟ ಮಾಡುವುದನ್ನು ತಡೆಗಟ್ಟಲು ಪೊಲೀಸ್‌ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅನಧಿಕೃತ ಸಾಗಾಟ ಪ್ರಕರಣಗಳನ್ನು ಕ್ರೋಡೀಕರಿಸಿ ಪ್ರತೀ ತಿಂಗಳು ವರದಿ ನೀಡುವಂತೆ ಪೊಲೀಸರಿಗೆ ಸೂಚಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಭಾಗವಹಿಸಿದ್ದರು.

Advertisement

ನಿಷೇಧಿತ ಏರ್‌ಗನ್‌ ಮಾರಿದರೆ ಕ್ರಮ
ನಿಷೇಧಿತ ಏರ್‌ಗನ್‌ಗಳನ್ನು ಪ್ರಾಣಿ-ಪಕ್ಷಿಗಳಿಗೆ ಹಿಂಸೆ ನೀಡುವುದಕ್ಕೆ ಬಳಸಲಾಗುತ್ತಿದ್ದು, ಅದನ್ನು ತಡೆಗಟ್ಟುವಂತೆ ಶಶಿಧರ ಶೆಟ್ಟಿ ಕೋರಿದರು. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ನಿಷೇಧಿತ ಏರ್‌ಗನ್‌ಗಳನ್ನು ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳುವಂತೆ ಪೊಲೀಸರಿಗೆ ಕಟುನಿಟ್ಟಿನ ಸೂಚನೆ ನೀಡಿದರು.

ಬೀಡಾಡಿ ದನಗಳ ರಕ್ಷಣೆಗೆ ಕ್ರಮ
ಪಣಂಬೂರು ವ್ಯಾಪ್ತಿಯಲ್ಲಿ ಬೀಡಾಡಿ ಜಾನುವಾರುಗಳ ರಕ್ಷಣೆ ಮತ್ತು ನಿರ್ವಹಣೆಗೆ ಸ್ಥಳ ಒದಗಿಸುವಂತೆ ಕೋರಿ ಎನ್‌ಎಂಪಿಎಗೆ ಪತ್ರ ಮುಖೇನ ಕೋರಲಾಗಿದೆ, ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಗೋಶಾಲೆ ತೆರೆದಲ್ಲಿ ನಿರ್ವಹಣೆ ಸುಲಭವಾಗುವುದರಿಂದ ಗೋಶಾಲೆ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಜಿಲ್ಲಾಡಳಿತದಿಂದ ನೀಡಲು ಕ್ರವ‌ ಕೈಗೊಳ್ಳಲಾಗಿರುತ್ತದೆ ಎಂದರು.

ಪ್ರಾಣಿ ಕಲ್ಯಾಣ ವಾರ್ಡನ್‌
ಪ್ರಾಣಿಗಳ ಮೇಲಿನ ಹಿಂಸೆ ಮತ್ತು ಕ್ರೌರ್ಯ ತಡೆಗಟ್ಟಲು ಅಗತ್ಯ ಕಾನೂನು ಸಲಹೆಗಳಿಗಾಗಿ ಸುಮಾ ಆರ್‌. ನಾಯಕ್‌ ಅವರನ್ನು ಪ್ರಾಣಿ ಕಲ್ಯಾಣ ವಾರ್ಡನ್‌ ಆಗಿ ನೇಮಕ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next