Advertisement

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

01:45 PM Apr 19, 2024 | Team Udayavani |

ಮಹಾನಗರ: ಸಾಹಸ ಪ್ರಿಯ ಯುವಕರು, ಕಾಲೇಜು ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಅಡ್ವೆಂಚರ್‌ ಬೈಕ್‌ನಲ್ಲಿ ಅಲ್ಲಲ್ಲಿ ಸುತ್ತಾಡುವುದು ಸಹಜ. ಆದರೆ ನಗರದ 64 ವರ್ಷ ವಯಸ್ಸಿನ ಹಿರಿಯರೊಬ್ಬರು ಯುವಕರಿಗೆ ಹುಚ್ಚು ಹಿಡಿಸುವ ಕೆಟಿಎಂ ಅಡ್ವೆಂಚರ್‌ ಬೈಕ್‌ ಏರಿ ಅಯೋಧ್ಯೆ ವರೆಗೆ ಪಯಣಿಸಿ ಬಂದ ವೃತ್ತಾಂತವಿದು.

Advertisement

ಎಳೆಯ ವಯಸ್ಸಿಂದಲೇ ನನಗೆ ದ್ವಿಚಕ್ರ ವಾಹನಗಳು ಇಷ್ಟ. ಬಾಡಿಗೆ ಸೈಕಲ್‌ ಹೊಡೆಯುವುದರಿಂದ ಹಿಡಿದು ಬಳಿಕ ಬೈಕ್‌ಗಳ ಕ್ರೇಜ್‌ ಇತ್ತು. ಆದರೂ ಹಲವು ರಾಜ್ಯಗಳನ್ನು ಬೈಕಲ್ಲಿ ಸುತ್ತುವ ಕನಸು ನನ್ನ ವೃತ್ತಿ ಜೀವನದಲ್ಲಿ ಸಾಕಾರಗೊಳ್ಳಲಿಲ್ಲ, ಈಗ
ನಿವೃತ್ತ ಬದುಕಿನಲ್ಲಿ ಆ ಖುಷಿಯನ್ನು ಕಂಡುಕೊಳ್ಳುತ್ತಿದ್ದೇನೆ ಎನ್ನುವ ಈ ಹಿರಿಯರ ಹೆಸರು ಜಗದೀಶ್‌ ಕದ್ರಿ. ಮ್ಯುಚ್ಯುವಲ್‌ ಫಂಡ್‌ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ ಅವರು ಈಗ ನಿವೃತ್ತರು.

ಕಳೆದ ಮಾರ್ಚ್‌ ತಿಂಗಳಲ್ಲಿ ಕೇವಲ 9 ದಿನದಲ್ಲಿ ಸುಮಾರು 4,800 ಕಿ.ಮೀ ಬೈಕಲ್ಲೇ ಕ್ರಮಿಸಿ ಯಶಸ್ವಿಯಾಗಿ ಅಯೋಧ್ಯೆ, ವಾರಾಣಸಿ ಭೇಟಿ ನೀಡಿ ಬಂದಿದ್ದಾರೆ(ಮಾರ್ಚ್‌ 11ರಿಂದ 19). ಸರಿಸುಮಾರು ದಿನಕ್ಕೆ 500 ಕಿ.ಮೀ ನಂತೆ ಕ್ರಮಿಸಿದ್ದಾರೆ. ಎಲ್ಲೂ ಯಾವುದೇ ಗಂಭೀರ ಎನ್ನುವ ತೊಂದರೆಯಾಗಿರಲಿಲ್ಲ,

ಅಮರಾವತಿಯಿಂದ ನಾಗಪುರಕ್ಕೆಹೋಗುವ ಎಕ್ಸ್‌ಪ್ರೆಸ್‌ವೇನಲ್ಲಿ ದ್ವಿಚಕ್ರ ವಾಹನಕ್ಕೆ ಅವಕಾಶವಿಲ್ಲ, ನಾನು ತಪ್ಪಿ ಅದರಲ್ಲಿ ಪ್ರಯಾಣಿಸುವುದಕ್ಕೆ ಹೋಗಿ ಅಧಿಕಾರಿಗಳಿಂದ ತಡೆಯಲ್ಪಟ್ಟೆ, ಆದರೆ ನನಗೆ ಅದರ ವಿಚಾರ ಗೊತ್ತಿರಲಿಲ್ಲ ಹಾಗೂ ಹಿರಿಯ ಎನ್ನುವ ಕಾರಣದಿಂದ ಯಾವುದೇ ಸಮಸ್ಯೆಯಾಗಲಿಲ್ಲ ಎನ್ನುತ್ತಾರೆ ಜಗದೀಶ್‌. ಜಗದೀಶ್‌ ಅವರ ಪತ್ನಿ ಕೆಲ ವರ್ಷ ಹಿಂದೆ ತೀರಿಕೊಂಡಿದ್ದಾರೆ.

ಓರ್ವ ಪುತ್ರಿಗೆ ವಿವಾಹವಾಗಿದ್ದು ಗುಜರಾತ್‌ನಲ್ಲಿ ನೆಲೆಸಿದ್ದಾರೆ. ಜಗದೀಶ್‌ ತಮ್ಮ ಸೋದರನ ಕುಟುಂಬದೊಂದಿಗೆ
ಮಂಗಳೂರಿನಲ್ಲಿ ವಾಸ್ತವ್ಯ. ಎಲ್ಲರೂ ಜಗದೀಶ್‌ ಅವರ ಈ ಸಾಹಸಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಎಚ್ಚರಿಕೆ, ವೇಗ, ಅದೃಷ್ಟ ದೂರ ಪಯಣಿಸುವಾಗ ಅಡ್ವೆಂಚರ್‌ ಬೈಕ್‌ಗಳು 120 ಕಿ.ಮೀ (ಪ್ರತಿಗಂಟೆಗೆ) ವೇಗದಲ್ಲಿ ಸವಾರಿ ಮಾಡಲು ನೆರವಾಗುತ್ತವೆ, ಆದರೆ ಅಷ್ಟು ವೇಗ ಇರುವಾಗ ಸಣ್ಣ ತಪ್ಪುಗಳೂ ಕೂಡಜೀವಕ್ಕೆ ಎರವಾಗಬಹುದು, ಅದಕ್ಕಾಗಿ ಉತ್ತಮ ಗುಣಮಟ್ಟದ ಜಾಕೆಟ್‌, ಹೆಲ್ಮೆಟ್‌
ಮತ್ತಿತರ ರಕ್ಷಣಾ ಪರಿಕರಗಳನ್ನು ಧರಿಸಿಯೇ ಜಗದೀಶ್‌ ಪ್ರಯಾಣಿಸಿದ್ದಾರೆ. ಅದೃಷ್ಟವಷಾತ್‌ ಅವರಿಗೆ ಯಾವುದೇ ಕೆಟ್ಟ ಅನುಭವವಾಗಿಲ್ಲ. ತಮಗೆ ಬೇಕಾದ ಕನಿಷ್ಠ ವಸ್ತುಗಳನ್ನು ಸಾಮಗ್ರಿಗಳನ್ನು ಬೈಕ್‌ ಹಿಂದಿನ ಡಬ್ಟಾದಲ್ಲಿ ತುಂಬಿ ಕ್ಷೇಮವಾಗಿ ಸಂಚರಿಸಿದ್ದಾರೆ.

Advertisement

9 ದಿನ ಹಲವು ರಾಜ್ಯ
ಮಂಗಳೂರಿನಿಂದ ಪ್ರಯಾಣ ಆರಂಭಿಸಿ, ವಿಜಯಪುರ, ಸೊಲ್ಲಾಪುರ ಮಾರ್ಗವಾಗಿ ನಾಗಪುರ, ವಾರಾಣಸಿ, ಗೋರಖ್‌ಪುರ್‌, ಅಯೋಧ್ಯಾ, ಪ್ರಯಾಗರಾಜ್‌ ಮಾರ್ಗವಾಗಿ ಹೈದರಾಬಾದ್‌ ಮೂಲಕ ಬಳ್ಳಾರಿ, ಶಿವಮೊಗ್ಗ, ಆಗುಂಬೆಯಾಗಿ 9ನೆ ದಿನ ಮಂಗಳೂರು ತಲಪಿದ್ದಾರೆ ಜಗದೀಶ್‌. 8 ರಾತ್ರಿಗಳನ್ನು ವಿವಿಧ ರಾಜ್ಯದ ವಿವಿಧ ಹೋಟೆಲ್‌ಗ‌ಳಲ್ಲಿ ವಿಶ್ರಾಂತಿಗೆ
ಬಳಸಿಕೊಂಡಿದ್ದಾರೆ. ದಾರಿಯುದ್ದಕ್ಕೂ ವಿವಿಧ ರಾಜ್ಯಗಳ ಚಿಕ್ಕ-ದೊಡ್ಡ ರೆಸ್ಟೋರೆಂಟ್‌ಗಳ ಆಹಾರ, ಸಣ್ಣ ಪುಟ್ಟ ವ್ಯಾಪಾರಿಗಳ ಕೈಯಡುಗೆ ಸವಿದಿದ್ದಾರೆ.

*ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next