ಹೊಸದಿಲ್ಲಿ/ಬೆಂಗಳೂರು: ಕರ್ನಾಟಕದಿಂದ ತಮಿಳುನಾಡಿಗೆ ನೀಡಬೇಕಿರುವ ಕಾವೇರಿ ನೀರಿನ ಜೂನ್ ತಿಂಗಳ ಕೋಟಾದಡಿ ಬಿಳಿಗುಂಡ್ಲುವಿನಲ್ಲಿರುವ ಕಾವೇರಿ ಜಲಾಶಯದಿಂದ ಮೆಟ್ಟೂರು ಅಣೆಕಟ್ಟಿಗೆ 9.19 ಟಿಎಂಸಿ ಅಡಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರ (ಸಿಡಬ್ಲ್ಯುಎಂಎ) ಆದೇಶಿಸಿದೆ. ಪ್ರಾಧಿಕಾರದ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಸರಕಾರ, ಜೂನ್‌ನಲ್ಲಿ ಮಳೆ ಬಂದರಷ್ಟೇ ನೀರು ಬಿಡುತ್ತೇವೆ. ಇಲ್ಲದಿದ್ದರೆ ಸಂಕಷ್ಟ ಸೂತ್ರ ಅನುಸರಿಸುತ್ತೇವೆ ಎಂದಿದೆ.
ಮಂಗಳವಾರ ಸಿಡಬ್ಲ್ಯುಎಂಎ ಅಧ್ಯಕ್ಷ ಎಸ್. ಮಸೂದ್ ಹುಸೇನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೀರು ಬಿಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಜೂನ್‌ನಲ್ಲಿ ವಾಡಿಕೆಯಂತೆ ಮಳೆಯಾಗಿ, ಕಾವೇರಿ ಜಲಾನಯನ ಪ್ರದೇಶಗಳಲ್ಲಿನ ಜಲಾಶಯಗಳ ಒಳಹರಿವು ಹೆಚ್ಚಾದರೆ ಮಾತ್ರವೇ ತಮಿಳುನಾಡಿಗೆ ನೀರು ಹರಿಸಬೇಕು ಎಂದು ಪ್ರಾಧಿಕಾರ ಹೇಳಿದೆ.
ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಸಭೆಯ ಬಳಿಕ ಮಾತನಾಡಿದ ಹುಸೇನ್, ಇದೊಂದು ಸರ್ವಾನುಮತದ ತೀರ್ಮಾನ. ಈ ಬಾರಿ ವಾಡಿಕೆಯಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಂತೆ ಸಾಮಾನ್ಯದಂತೆ ಮಳೆಯಾಗಿ ಕರ್ನಾಟಕದ ಜಲಾಶಯಗಳಲ್ಲಿ ಒಳಹರಿವು ಹೆಚ್ಚಾದರೆ, ತಮಿಳುನಾಡಿಗೆ ಜೂನ್ ಕೋಟಾದಡಿಯ 9.19 ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ಸಿಡಬ್ಲ್ಯೂಎಂಎ ಸೂಚಿಸಿದೆ. 15 ದಿನಗಳ ಹಿಂದೆ ನಡೆದ ಸಭೆಯಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಆಗ ಕರ್ನಾಟಕ ಸರಕಾರವು ಕೆಲವು ದಿನಗಳ ಕಾಲಾವಕಾಶವನ್ನು ಕೋರಿದ್ದರಿಂದ ಆದೇಶ ಜಾರಿಯನ್ನು ಮುಂದೂಡಲಾಗಿತ್ತು ಎಂದರು.
ಮಂಗಳವಾರ ನಡೆದ ಸಭೆಯಲ್ಲಿ ಕರ್ನಾಟಕ ಸರಕಾರದ ಮೇಕೆದಾಟು ಯೋಜನೆಯ ಬಗ್ಗೆ ಚರ್ಚಿಸಲಿಲ್ಲ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ತಮಿಳುನಾಡು ಸರಕಾರದ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಪ್ರಭಾಕರನ್ ತಿಳಿಸಿದ್ದಾರೆ. ಮೇಕೆದಾಟು ವಿಚಾರ ಸದ್ಯಕ್ಕೆ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವುದರಿಂದ ಈ ಕುರಿತಂತೆ ಸಭೆಯಲ್ಲಿ ಚರ್ಚಿಸಲಿಲ್ಲ. ತಮಿಳುನಾಡಿನ ಕುರುವೈ ಬೆಳೆಗಳಿಗಾಗಿ ನೀರು ಬೇಕೆಂದು ಪ್ರಾಧಿಕಾರವನ್ನು ಪ್ರಾರ್ಥಿಸಿದ್ದವು. ಅದಕ್ಕೆ ಪ್ರಾಧಿಕಾರ ಸ್ಪಂದಿಸಿದೆ ಎಂದಿದ್ದಾರೆ.