Advertisement

ಮೈಸೂರಿನ ಮಹೋನ್ನತ ಪರಂಪರೆ ವಿಸ್ತರಣೆ

10:08 AM Jun 20, 2022 | Team Udayavani |

ಮಂಗಳವಾರ, ಅಂದರೆ ಇದೇ 21ರಂದು ನಡೆಯಲಿರುವ 8ನೇ ವರ್ಷದ ವಿಶ್ವ ಯೋಗ ದಿನಾಚರಣೆಗೆ ಈ ಬಾರಿ ನಮ್ಮ ಹೆಮ್ಮೆಯ ಮೈಸೂರು ಸಾಕ್ಷಿಯಾಗುತ್ತಿದೆ. ಇಲ್ಲಿನ ಜಗದ್ವಿಖ್ಯಾತ ಅಂಬಾವಿಲಾಸ ಅರಮನೆಯಲ್ಲಿ ನಡೆಯಲಿರುವ ದೇಶದ ಅಗ್ರಗಣ್ಯ ಯೋಗ ಕಾರ್ಯಕ್ರಮಕ್ಕೆ ಸ್ವತಃ ನಮ್ಮ ಜನಪ್ರಿಯ ಪ್ರಧಾನಿಗಳಾದ ನರೇಂದ್ರ ಮೋದಿಯವರದೇ ನೇತೃತ್ವ!

Advertisement

ಇಲ್ಲಿ, ಅವರ ಜತೆಗೆ ಏನಿಲ್ಲವೆಂದರೂ 15 ಸಾವಿರ ಮಂದಿ ಯೋಗದ ಶಿಸ್ತು ಮತ್ತು ಚಳಕವನ್ನು ಪ್ರದರ್ಶಿಸಲಿದ್ದಾರೆ. ಒಟ್ಟಿನಲ್ಲಿ, ಪ್ರಧಾನಿಯವರು ತಮ್ಮ ಕಾರ್ಯಕ್ರಮಕ್ಕೆ ಮೈಸೂರನ್ನೇ ಆರಿಸಿಕೊಂಡಿರುವುದು ಕನ್ನಡಿಗರ ಪಾಲಿಗೊಂದು ಯೋಗವೆನ್ನುವುದು ದಿಟ.

ಯೋಗವು ನಮ್ಮ ಭಾರತದ ಪ್ರಾಚೀನ ವಿದ್ಯೆಗಳಲ್ಲಿ ಒಂದು. ಇದಕ್ಕೆ ಏನಿಲ್ಲವೆಂದರೂ ಋಗ್ವೇದ ಕಾಲದ ಇತಿಹಾಸವಿದೆ. ಕ್ರಿಸ್ತ ಪೂರ್ವ 2ನೇ ಶತಮಾನದ ಹೊತ್ತಿಗಾಗಲೇ ಪತಂಜಲಿ ಮಹರ್ಷಿಗಳು “ಯೋಗಸೂತ್ರಗಳನ್ನು ರಚಿಸಿದ್ದರು ಎಂದರೆ, ಯೋಗ ವಿಜ್ಞಾನದ ಆರಂಭದ ಕಾಲಘಟ್ಟವು ಇದಕ್ಕಿಂತ ಇನ್ನೂ ಒಂದು ಸಾವಿರ ವರ್ಷ ಹಿಂದಕ್ಕೆ ಹೋಗುವುದರಲ್ಲಿ ಅನುಮಾನವಿಲ್ಲ. ಪತಂಜಲಿಯ ನಂತರ ಬಂದ ವ್ಯಾಸರು ಮತ್ತು ವಾಚಸ್ಪತಿಗಳು ಯೋಗದ ಮೇಲೆ ಸ್ವೋಪಜ್ಞವಾದ ಭಾಷ್ಯಗಳನ್ನು ಬರೆದಿದ್ದಾರೆ. ಇವರಲ್ಲದೆ, ಇನ್ನೂ ಎಷ್ಟೋ ಪ್ರಾಜ್ಞರು ಯೋಗವನ್ನು ಕುರಿತು ಅನುಸಂಧಾನ ನಡೆಸಿದ್ದಾರೆ. ಆದರೆ, ಇವುಗಳ ಪೈಕಿ ಹೆಚ್ಚಿನವು ನಮಗಿನ್ನೂ ಸಿಕ್ಕಿಲ್ಲ ಎನ್ನುವುದು ಬೇಸರದ ಸಂಗತಿ.

ನಮ್ಮ ಮೈಸೂರಿಗೆ ಭಾರತದ ಚರಿತ್ರೆಯಲ್ಲಿ ನಿಜಕ್ಕೂ ಆಚಂದ್ರಾರ್ಕವಾದ ಒಂದು ಸ್ಥಾನವಿದೆ. 500 ವರ್ಷಗಳಿಗೂ ಹೆಚ್ಚು ಕಾಲ ಆಳ್ವಿಕೆ ನಡೆಸಿದ ಯದುವಂಶದ ಅರಸರು ನಡೆಸಿದ ಮಾದರಿ ಆಳ್ವಿಕೆಯು ಇಂದಿನ ಆಡಳಿತದಲ್ಲೂ ಸಾಧಿಸಬೇಕೆನ್ನುವ ಒಂದು ಆದರ್ಶವಾಗಿದೆ. ಕನ್ನಡದ ಖ್ಯಾತ ಕವಿ ಬಿ.ಎಂ.ಶ್ರೀಕಂಠಯ್ಯನವರು ತಮ್ಮದೊಂದು ಕವಿತೆಯಲ್ಲಿ “ಕನ್ನಡ ಕಣ್ಣದು ಮೈಸೂರು/ನಾಲುಮಡಿ ಕೃಷ್ಣನ ಮೈಸೂರು/ ಚಿನ್ನದ ನಾಡದು ಮೈಸೂರು/ ಗಂಧದ ಗುಡಿಯದು ಮೈಸೂರು/ ವೀಣೆಯ ಬೆಡಗದು ಮೈಸೂರು. ಎನ್ನುತ್ತಾರೆ.

ಇಂತಹ ಬಣ್ಣನೆಗೆ ಮೈಸೂರು ಅರ್ಹವೆನ್ನುವುದರಲ್ಲಿ ಸಂಶಯವಿಲ್ಲ. ಸಾಮಾನ್ಯವಾಗಿ, ಮೈಸೂರನ್ನು ಘನವಾದ ಪರಂಪರೆಯನ್ನು ನೆನಪಿಸಿಕೊಳ್ಳುವಾಗ ನಮ್ಮ ಪೂರ್ವಸೂರಿಗಳಾದ ಮೈಸೂರಿನ ರಾಜರು ಸಂಗೀತ-ಸಾಹಿತ್ಯಗಳಿಗೆ ಕೊಟ್ಟ ರಾಜಾಶ್ರಯವನ್ನು ಹೇಳುತ್ತೇವೆ. ಹಾಗೆಯೇ, ಮೈಸೂರಿನ ಅರಸರು ಬೆಳೆಸಿದ ಯೋಗ ಪರಂಪರೆಯನ್ನೂ ನಾವು ಇನ್ನು ಮುಂದಾದರೂ ಹೆಮ್ಮೆ-ಅಭಿಮಾನಗಳಿಂದ ಉಲ್ಲೇಖೀಸಬೇಕು. ಈ ಬಾರಿ ಮೋದಿಯವರು ಇಂತಹ ಸಾಂಸ್ಕೃತಿಕ ನಗರಿ ಯಲ್ಲಿ ಯೋಗ ದಿನವನ್ನು ಆಚರಿಸುತ್ತಿರುವುದರಿಂದ ನಮ್ಮ ಈ ಉಜ್ವಲ ಪರಂಪರೆ ಮರುಸೃಷ್ಟಿ ಯಾಗುತ್ತದೆಂಬ ಭರವಸೆ ನನ್ನದಾಗಿದೆ.

Advertisement

ಮೈಸೂರು ಸಂಸ್ಥಾನದಲ್ಲಿ ಯೋಗಕ್ಕೆ ಬುನಾದಿ ಹಾಕಿದ್ದು 70 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಮುಮ್ಮಡಿ ಶ್ರೀ ಕೃಷ್ಣರಾಜ ಒಡೆಯರ್‌ ಅವರು. ದಕ್ಷಿಣ ಭಾರತದ ದೇವಾನುದೇವತೆಗಳನ್ನು ಕುರಿತ ತಮ್ಮ “ಶ್ರೀತಣ್ತೀ ನಿಧಿ ಎನ್ನುವ ಬೃಹತ್‌ ಗ್ರಂಥದಲ್ಲಿ ಮುಮ್ಮಡಿಗಳು ಹಠಯೋಗ ಶಾಖೆಗೆ ಸಂಬಂಧಿಸಿದ 122 ಆಸನಗಳನ್ನು ಚಿತ್ರಸಹಿತ ವಿವರಿಸಿದ್ದಾರೆ. ಈ ಬುನಾದಿಯ ಮೇಲೆ, ಇಲ್ಲಿ ಯೋಗವನ್ನು ಮ್ಮ ರಾಜಾಶ್ರಯದೊಂದಿಗೆ ಸುಪುಷ್ಟವಾಗಿ ಬೆಳೆಸಿದ ಕೀರ್ತಿಯು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಸಲ್ಲುತ್ತದೆ. ಇವರ ಕಾಲದಲ್ಲಿ ಹೀಗೆ ಅರಮನೆಯ ಪ್ರೋತ್ಸಾಹದ ಮೂಲಕ ಯೋಗವನ್ನು ಬೆಳೆಸಿದ ಶ್ರೇಯಸ್ಸು ತಿರುಮಲೈ ಕೃಷ್ಣಮಾಚಾರ್ಯರದು. ಇವರ ನಂತರ, ಪಟ್ಟಾಭಿ ಜೋಯಿಸರು, ಬಿ.ಕೆ. ಎಸ್‌. ಅಯ್ಯಂಗಾರ್‌ ಮತ್ತು ಟಿ.ಕೆ.ವಿ. ದೇಶಿಕಾಚಾರ್‌ ಅವರು ಪ್ರಾತಃ ಸ್ಮರಣೀಯರಾಗಿದ್ದಾರೆ. ಇಂದಿಗೂ ಸಹ ಮೈಸೂರಿನಲ್ಲಿ ಏನಿಲ್ಲವೆಂದರೂ 200ಕ್ಕೂ ಹೆಚ್ಚು ಯೋಗಶಾಲೆಗಳಿದ್ದು, ಇವು ಮೂಲಸ್ವರೂಪಕ್ಕೆ ಬದ್ಧವಾಗಿ ಯೋಗವನ್ನು ಕಲಿಸಿ ಕೊಡುತ್ತಿವೆ. ಜೊತೆಗೆ, ಸಾವಿರಾರು ಸ್ಥಳೀಯರ ಜತೆಗೆ 10 ಸಾವಿರಕ್ಕೂ ಹೆಚ್ಚು ವಿದೇಶೀಯರು ಆರು ತಿಂಗಳ್ಳೋ, ಒಂದು ವರ್ಷವೋ ಇಲ್ಲಿ ವಾಸ್ತವ್ಯ ಹೂಡಿ, ಯೋಗ ವಿಜ್ಞಾನವನ್ನು ಶ್ರದ್ಧೆ-ಕುತೂಹಲಗಳಿಂದ ಅಭ್ಯಾಸ ಮಾಡುತ್ತಿದ್ದಾರೆ. ಇಂದು ಭಾರತದಾದ್ಯಂತ ಪ್ರಚಲಿತದಲ್ಲಿರುವ ಅಷ್ಟಾಂಗ ಯೋಗಕ್ಕೆ ಒಂದು ವೈಜ್ಞಾನಿಕ ಚೌಕಟ್ಟನ್ನು ಸೃಷ್ಟಿಸಿದ ಕೀರ್ತಿ ಮೈಸೂರಿನದು!

ಅಂದಂತೆ, ಮೇಲೆ ಹೆಸರಿಸಿದ ನಾಲ್ವರು ಯೋಗಾಚಾರ್ಯರುಗಳ ಪೈಕಿ, ಸಂಸ್ಕೃತದಲ್ಲಿದ್ದ ಯೋಗಸಂಬಂಧಿ ಗ್ರಂಥಗಳನ್ನು ಆಮೂಲಾಗ್ರವಾಗಿ ಶೋಧಿಸಿ, ಅವುಗಳ ಪಾಠವನ್ನು ಒಪ್ಪವಾಗಿ ಉಳಿಸಿದ ಹಿರಿಮೆ ಕೃಷ್ಣಮಾಚಾರ್ಯರದಾಗಿದೆ. ಇದಲ್ಲದೆ, ಸ್ವತಃ ಅವರೇ “ಯೋಗ ಮಕರಂದ ಮುಂತಾದ ನಾಲ್ಕು ಕೃತಿಗಳನ್ನು ಕೂಡ ಬರೆದಿದ್ದಾರೆ. ಅವರ ಸೋದರಳಿಯ ಬಿ.ಕೆ.ಎಸ್‌. ಅಯ್ಯಂಗಾರ್‌ ಅವರಂತೂ ಯೋಗವನ್ನು ಜಗತ್ತಿನ ಮೂಲೆಮೂಲೆಗೂ ಪಸರಿಸಿದ ಸಾಧಕರು. ಅವರಿಂದಾಗಿ 70ಕ್ಕೂ ಹೆಚ್ಚು ದೇಶಗಳಿಗೆ ಯೋಗದ ಪರಿಚಯವಾಗಿ, ಅದು ಅರಿವಿನ ಹೊಸ ದಿಗಂತವನ್ನೇ ತೆರೆಯಿತು. ಇವರ ಈ ಯೋಗವು “ಅಯ್ಯಂಗಾರ್‌ ಯೋಗ ಎಂದೇ ಜನಜನಿತವಾಗಿದೆ.

ಇವೆಲ್ಲವನ್ನೂ ಪರಿಗಣಿಸಿ ನೋಡಿದರೆ, ಯೋಗ ಪರಂಪರೆಯಲ್ಲಿ ಹೃಷಿಕೇಶಕ್ಕೆ ಇರುವಷ್ಟೇ ಮಹತ್ವದ ಸ್ಥಾನಮಾನಗಳು ಮೈಸೂರಿಗೂ ಇವೆ. ಇದನ್ನು ಮುಂಬರುವ ದಿನಗಳಲ್ಲಿ ನಾವು ವ್ಯವಸ್ಥಿತವಾಗಿ ಪ್ರಚುರಪಡಿಸಿದರೆ, ಅದರಿಂದ ಕರ್ನಾಟಕಕ್ಕೆ ಆಗುವ ಲಾಭವೇ ಹೆಚ್ಚು. ಇದರಂತೆಯೇ, ಯೋಗಿಗಳಾಗಿದ್ದ ಶ್ರೀ ಅರವಿಂದ ಘೋಷರ ದಿವ್ಯ ಪ್ರಭಾವಕ್ಕೆ ಒಳಗಾದ ನಮ್ಮ ಉತ್ತರ ಕರ್ನಾಟಕದ ಹಲಸಂಗಿಯಲ್ಲಿ ಯೋಗಕ್ಕೆ ಸಂಬಂಧಪಟ್ಟ ಅಧ್ಯಯನ ಕೇಂದ್ರವನ್ನು ತೆರೆಯಲು ನಮಗೊಂದು ಉಜ್ಜ್ವಲ ಅವಕಾಶವಿದೆ.

ಆಧುನಿಕ ಜೀವನವು ಸೃಷ್ಟಿಸುತ್ತಿರುವ ಚಿತ್ತವಿಕಾರಗಳು ಮತ್ತು ದೈಹಿಕ ಹಾಗೂ ಮಾನಸಿಕ ವ್ಯಾಧಿಗಳು, ಬಗೆಬಗೆಯ ಒತ್ತಡಗಳು, ತರಹೇವಾರಿ ಆತಂಕಗಳು, ಅನಾರೋಗ್ಯಕರ ಜೀವನಶೈಲಿ, ಮಕ್ಕಳಲ್ಲಿ ಕಂಡುಬರುವ ಏಕಾಗ್ರತೆಯ ಕೊರತೆ, ಪಾಶ್ಚಾತ್ಯೀಕರಣದ ದುಷ್ಪರಿಣಾಮ ಇತ್ಯಾದಿಗಳ ಬಗ್ಗೆ ವಿವರಿಸಿ ಹೇಳಬೇಕಾದ ಅಗತ್ಯವೇನೂ ಇಲ್ಲ. ಏಕೆಂದರೆ, ಈ ತಲೆಮಾರಿನ ಬಹುತೇಕ ಎಲ್ಲರೂ ಇವುಗಳ ಬಲಿಪಶುಗಳೇ ಆಗಿದ್ದಾರೆ!

ಹೀಗಾಗಿ ನಾವಿಂದು “ಯೋಗಕ್ಕೆ ಹಿಂದಿರುಗಿ! ಎನ್ನುವ ಕರೆಯನ್ನು ಕೊಡ ಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಏಕೆಂದರೆ, ಯೋಗವು ನಮ್ಮನ್ನು ಪ್ರಕೃತಿಯ ಮಡಿಲಿಗೆ ಕರೆದುಕೊಂಡು ಹೋಗುವುದರ ಜತೆಗೆ ಕರ್ಮಯೋಗ-ಜ್ಞಾನಯೋಗ-ಧ್ಯಾನಯೋಗಗಳ ಮೂಲಕ ಆಧ್ಯಾತ್ಮಿಕ ಎತ್ತರಕ್ಕೆ ಕೊಂಡೊಯ್ಯಲಿದೆ. ನಿಜ ಹೇಳಬೇಕೆಂದರೆ, ಬ್ರಹ್ಮ ಸಾಕ್ಷಾತ್ಕಾರವೇ ಯೋಗದ ಅಂತಿಮ ಗುರಿಯಲ್ಲವೇ? ಇದಕ್ಕೆ, ಯೋಗಾಸನಗಳು ಸೋಪಾನದ ಮೊದಲ ಮೆಟ್ಟಿಲಿದ್ದಂತೆ! ಈ ದಿಕ್ಸೂಚಿಯನ್ನು ಹಿಡಿದುಕೊಂಡು ನಾವು ಯೋಗಪ್ರಪಂಚದಲ್ಲಿ ಚಿತ್ತಶುದ್ಧಿಯೊಂದಿಗೆ ವಿಹರಿಸಬೇಕು! ಪ್ರಧಾನಿ ಮೋದಿಯವರ ಸಂಕಲ್ಪ ಬಲದಿಂದ ಜಾರಿಗೆ ಬರುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಯೋಗ ದಂತಹ ಅಚ್ಚ ಭಾರತೀಯ ಜ್ಞಾನಧಾರೆಗಳ ಸಮಗ್ರ ಕಲಿಕೆ ಸಾಧ್ಯ ವಾಗಲಿದೆ. ಇದು ನವಭಾರತ ನಿರ್ಮಾಣಕ್ಕೆ ಒಂದು ಭದ್ರವಾದ ಅಸ್ತಿಭಾರವಾಗಲಿದೆ.

ಕರ್ಕಾಟಕ ಸಂಕ್ರಮಣದ ದಿನವಾದ ಜೂನ್‌ 21ರಂದೇ ಯೋಗ ದಿನವನ್ನು ಆಚರಿಸುತ್ತಿರುವುದು ನೂರಕ್ಕೆ ನೂರರಷ್ಟು ಶಾಸ್ತ್ರಶುದ್ಧವಾಗಿದೆ. ಇದಕ್ಕೆ ಕಾರಣರಾದವರು ಮೋದಿ! 2014ರಲ್ಲಿ ಪ್ರಧಾನಿಯಾದ ಕೂಡಲೇ ವಿಶ್ವಸಂಸ್ಥೆಯ ಮಟ್ಟದಲ್ಲಿ ಇದನ್ನು ಮನದಟ್ಟು ಮಾಡಿ, ಮನುಕುಲಕ್ಕೆ ಒಂದು ಮೌಲಿಕ ಕೊಡುಗೆಯನ್ನು ಕೊಟ್ಟು, ಸತ್ಸಂಪ್ರದಾಯವು ಆರಂಭವಾಗಲು ಕಾರಣವಾದ ಈ ಕ್ರಮವು “ವಸುಧೈವ ಕುಟುಂಬಕಂ (ಇಡೀ ಜಗತ್ತೇ ಒಂದು ಕುಟುಂಬ) ಎನ್ನುವ ಉದಾತ್ತ ಭಾರತೀಯ ಮೌಲ್ಯವಿದೆ. ಮೋದಿಯವರ ಛಲದಿಂದಾಗಿ ಮತ್ತು ನಮ್ಮ ನೆಲದ ಸಂಸ್ಕೃತಿ-ಪರಂಪರೆಗಳ ಬಗ್ಗೆ ಅವರಲ್ಲಿರುವ ನೈಜ ವಾರಸುದಾರಿಕೆಯ ಪ್ರಜ್ಞೆಯಿಂದಾಗಿ ಇಂದು 170ಕ್ಕೂ ಹೆಚ್ಚು ದೇಶಗಳು “ಯೋಗ ದಿನವನ್ನು ಸಂಭ್ರಮದಿಂದ ಆಚರಿಸುತ್ತಿವೆ.

ಇದರಲ್ಲಿ ವಿಶ್ವ ಸಮುದಾಯದ ಐಕ್ಯತೆಗೊಂದು ತೋರುಗಂಬವಿದೆ; ವಿಶ್ವಶಾಂತಿಯ ಸಾಕಾರಕ್ಕೊಂದು ಜ್ಞಾನಮಂತ್ರವಿದೆ; ಭಾರತವನ್ನು ಜಾಗತಿಕ ಮಟ್ಟದಲ್ಲಿ ವಿರಾಜಮಾನಗೊಳಿಸುವ ಅಂತರಾಳದ ಹಂಬಲವಿದೆ! “ಯತ್ರ ಯೋಗೀಶ್ವರಃ ಕೃಷ್ಣೋ ಯತ್ರ ಪಾಥೋì ಧನುರ್ಧರಃ/ ತತ್ರ ಶ್ರೀರ್ವಿಜಯೋ ಭೂತಿಃ ಧ್ರುವಾನೀತಿರ್‌ ಮತಿರ್ಮಮ ಎಂದು ಭಗವದ್ಗೀತೆಯ ಕೊನೆಯಲ್ಲಿ ಹೇಳಿರುವಂತೆ ಈ ಯೋಗಯಜ್ಞದಲ್ಲಿ ಮೋದಿ ಮುಂದಿದ್ದಾರೆ; ಅವರ ಬೆನ್ನಿಗೆ 130 ಕೋಟಿ ದೇಶವಾಸಿಗಳ ಯೋಗದಾನದ ಬೆಂಬಲವಿದೆ!

-ಡಾ.ಕೆ. ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next