ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪೆನಿಯೊಂದರ ಪ್ರಮುಖರು 88.22 ಕೋ.ರೂ. ನಷ್ಟ ಉಂಟುಮಾಡಿದ್ದಾರೆ ಎಂದು ಖಾಸಗಿ ಬ್ಯಾಂಕ್‌ನ ವಿಜಿಲೆನ್ಸ್ ಆಫೀಸರ್ ಪಿ.ಎಸ್. ಪದ್ಮಾವತಿ ಅವರು ನಗರದ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಎಂ.ಜಿ.ರಸ್ತೆಯಲ್ಲಿರುವ ಬ್ಯಾಂಕ್‌ನ ಶಾಖೆಗೆ ಫುಡ್ ಆ್ಯಂಡ್ ಎಕ್ಸ್‌ಪೋರ್ಟ್ಸ್ ಕಂಪೆನಿಯೊಂದರ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀನಿವಾಸ ಭಟ್, ಡೈರೆಕ್ಟರ್‌ಗಳಾದ ವೀಣಾ ಎಸ್.ಭಟ್, ಯು.ಎನ್.ಜೆ. ನಂಬೂರಿ ಹಾಗೂ ಇತರರು 2015ರ ಅ.10ರಂದು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಕಂಪೆನಿಯ ದಾಖಲಾತಿ ಹಾಗೂ ಗ್ಯಾರಂಟಿಯನ್ನು ಬ್ಯಾಂಕಿಗೆ ನೀಡಿದ್ದು, ಲೋನ್ ಪೂರ್ವ ಪರಿಶೀಲನೆ ನಡೆಸಿ, ಅ.20ರಂದು 194.83 ಕೋಟಿ ರೂ. ಸಾಲ ಮಂಜೂರು ಮಾಡಲಾಗಿತ್ತು.
ಕಂಪೆನಿಯವರು ಪ್ರತೀ ವರ್ಷ ಸಾಲವನ್ನು ರಿನಿವಲ್ ಮಾಡಿಕೊಂಡು ಸಾಲ ಮರುಪಾವತಿಸಿಕೊಂಡು ಬಂದಿದ್ದಾರೆ. 2021ರ ಜುಲೈನಲ್ಲಿ ಅಡಿಟ್ ಮಾಡುವ ಸಮಯ ಕಂಪೆನಿಯವರು ಬ್ಯಾಂಕ್ ಹಾಗೂ ಸಂಬಂಧಿಸಿದ ಪ್ರಾಧಿಕಾರಕ್ಕೆ ತಿಳಿಸದೆ, ಅನುಮತಿ ಪಡೆಯದೆ ಆರೋಪಿಗಳ ವಶದಲ್ಲಿದ್ದ ಬ್ಯಾಂಕ್‌ಗೆ ಅಡಮಾನ ಇರಿಸಿದ್ದ ಸ್ಟಾಕನ್ನು ಬ್ಯಾಂಕ್‌ಗೆ ವಂಚಿಸಿ, ಅಕ್ರಮ ಲಾಭಗಳಿಸುವ ಉದ್ದೇಶದಿಂದ ನಾಶ ಮಾಡಿದ್ದಾರೆ. 2019ರ ಡಿ.1ರಿಂದ 2020 ಜ. 31ರ ನಡುವೆ ಈ ಕೃತ್ಯ ಎಸಗಿದ್ದು, ಇದರಿಂದ ಬ್ಯಾಂಕ್‌ಗೆ 88.22 ಕೋಟಿ ರೂ. ನಷ್ಟವಾಗಿದೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ.