ಧಾರವಾಡ: ಮನೋಹರ ಗ್ರಂಥಮಾಲೆಯ 87ನೇ ವರ್ಷಾಚರಣೆ ಅಂಗವಾಗಿ ನಗರದ ರಂಗಾಯಣದ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಸಮಾರಂಭದಲ್ಲಿ ಕೇರಳ ಕಾಂತಾಸಮ್ಮಿತ, ಸಾವಿನ ಸೆರಗಿನಲ್ಲಿ, ಉಮೇದುವಾರರು, ಓ ಹೆನ್ರಿ ಕಥೆಗಳು ಎಂಬ ನಾಲ್ಕು ಪುಸ್ತಕಗಳು ಬಿಡುಗಡೆಗೊಂಡವು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಆನಂದ ಝಂಜರವಾಡ ಮಾತನಾಡಿ, ಈಗಿನ ಬಹುತೇಕ ಕೃತಿಗಳ ಹಿಂದೆ ಸಾಂಸ್ಕೃತಿಕ ಒತ್ತಡ ಇದೆಯೇ ಹೊರತು ಸಂಸ್ಕೃತಿಯ ಒತ್ತಡ ಇಲ್ಲ. ಯೋಜಿತವಾಗಿ ಕೃತಿಗಳನ್ನು ಬರೆಯುತ್ತಿದ್ದಾರೆಯೇ ಹೊರತು ಸೃಜನಶೀಲವಾಗಿ ಬರೆಯುತ್ತಿಲ್ಲ. ಕನ್ನಡದಲ್ಲಿ ಸಾವಿರಾರು ಕೃತಿಗಳ ಪ್ರವಾಹದಲ್ಲಿ ಸೃಜನಶೀಲತೆ ಕೊಚ್ಚಿ ಹೋಗುತ್ತಿದೆ. ಸೃಜನಾತ್ಮಕ ಕೃತಿಗಳ ಅಗತ್ಯತೆ ನಮಗಿದೆ ಎಂದು ಹೇಳಿದರು.
ಅಂಕಣಕಾರ ಜೋಗಿ ಮಾತನಾಡಿ, ಬಹುತೇಕ ಪ್ರಕಾಶಕರು ಪ್ರತಿಭಾಪೂರ್ಣ ಸಲಹಾ ಸಮಿತಿಯಿಂದ ವಂಚಿತರಾಗಿದ್ದು, ಸರಿಯಾದ ಮಾರ್ಗದರ್ಶನವಿಲ್ಲದೇ ಕೃತಿಗಳನ್ನು ಮುದ್ರಿಸುತ್ತಿದ್ದಾರೆ. ಹೀಗಾಗಿ ಉತ್ತಮ ಕೃತಿಗಳ ಬದಲು ವಿಕೃತಿಗಳು ಬರುವಂತಾಗಿದೆ. ಈಗಿನ ಹಲವು ಪ್ರಕಾಶಕರು ಓದುವ ಹವ್ಯಾಸ ಬೆಳೆಸಿಕೊಳ್ಳುತ್ತಿಲ್ಲ. ಅವರಿಗೆ ಸರಿಯಾದ ಕೃತಿಗಳನ್ನು ಮುದ್ರಿಸಲು ಸಲಹೆ ಸಹ ನೀಡುವವರಿಲ್ಲ ಎಂದರು.
ಕೃತಿಗಳನ್ನು ಗ್ರಂಥಾಲಯಕ್ಕೆ ಕಳುಹಿಸುವ ಉದ್ದೇಶ ಮಾತ್ರ ಈಡೇರುತ್ತಿದ್ದು, ಉತ್ತಮ ಕೃತಿಗಳ ಕೊರತೆ ಸಾರಸ್ವತ ಲೋಕದಲ್ಲಿ ಎದ್ದು ಕಾಣುತ್ತಿದೆ. ಕೃತಿಗಳ ಕುರಿತು ಸರಿಯಾದ ಟೀಕೆ ಮಾಡುವವರೂ ಇಲ್ಲದಾಗಿದ್ದು, ಬರೀ ಪಂಥ ಬದ್ಧವಾಗಿ ವಿಮರ್ಶೆಗಳು ಬರುತ್ತಿವೆಯೇ ಹೊರತು ಕೃತಿ ಬದ್ಧವಾಗಿ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಮಲಾ ಹೆಮ್ಮಿಗೆ ಅವರ ಕೇರಳ ಕಾಂತಾಸಮ್ಮಿತ (ಮಲೆಯಾಳಂ ಕಥೆಗಳು), ನಿವೃತ್ತ ಪೊಲೀಸ ಅಧಿಕಾರಿ ಡಾ| ಡಿ.ವಿ. ಗುರುಪ್ರಸಾದ ಅವರ ಸಾವಿನ ಸೆರಗಲ್ಲಿ (ಕಥೆಗಳು), ಡಾ| ಲೋಹಿತ ನಾಯ್ಕರ ಅವರ ಉಮೇದುವಾರರು (ರಾಜಕೀಯ ಕಾದಂಬರಿ) ಹಾಗೂ ಡಾ| ಗುರುರಾಜ ಕರ್ಜಗಿ ಅವರ ಓ ಹೆನ್ಸಿ ಕಥೆಗಳು (ಕತೆಗಳು) ಕುರಿತು ಜೋಗಿ ಅವರು ವಿಶ್ಲೇಷಿಸಿದರು.
ಡಾ| ಡಿ.ವಿ. ಗುರುಪ್ರಸಾದ, ಕಮಲಾ ಹೆಮ್ಮಗೆ ಹಾಗೂ ಲೋಹಿತ ನಾಯ್ಕರ್ ಮಾತನಾಡಿದರು. ಡಾ| ರಮಾಕಾಂತ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಹ.ವೆಂ. ಕಾಖಂಡಕಿ ನಿರೂಪಿಸಿದರು. ಹಿರಿಯ ಸಾಹಿತಿಗಳಾದ ಹೇಮಾ ಪಟ್ಟಣಶೆಟ್ಟಿ, ಶ್ಯಾಮಸುಂದರ ಬಿದರಕುಂದಿ, ರಾಘವೇಂದ್ರ ಪಾಟೀಲ, ಮಲ್ಲಿಕಾರ್ಜುನ ಹಿರೇಮಠ, ಮಾಲತಿ ಪಟ್ಟಣಶೆಟ್ಟಿ ಇದ್ದರು.