ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಎದುರಾಗಿರುವ ಅನಿಶ್ಚಿತತೆ ಮಧ್ಯೆಯೇ ಸಮ್ಮೇಳನದ ಸಿದ್ಧತೆ ಕುರಿತು ಅ.12ರಂದು ಬೆಂಗಳೂರು ಹಾಗೂ ಅ.17ರಂದು ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಆಯೋಜಿಸಲಾಗಿದೆ. ಸಮ್ಮೇಳನ ನಡೆಯುತ್ತದೋ ಇಲ್ಲವೋ, ನಡೆದರೂ ಯಾವಾಗ ನಡೆಯುತ್ತದೆ ಎಂಬ ಗೊಂದಲಗಳಿಗೆ ಸ್ಪಷ್ಟತೆ ದೊರೆಯುವ ಸಾಧ್ಯತೆಯಿದೆ. ಹೀಗಾಗಿ, ಸಾಹಿತಿಗಳು ಹಾಗೂ ಸಾಹಿತ್ಯಾಭಿಮಾನಿಗಳು ಈ ಸಭೆಗಳನ್ನೇ ಎದುರು ನೋಡುವಂತಾಗಿದೆ.
ಹಾವೇರಿ ಜಿಲ್ಲೆಯಾಗಿ 25 ವಸಂತಗಳನ್ನು ಪೂರೈಸಿದರೂ ಜಿಲ್ಲೆಯಲ್ಲಿ ಒಮ್ಮೆಯೂ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಸೌಭಾಗ್ಯ ಒದಗಿ ಬರಲಿಲ್ಲ ಎಂಬ ಕೊರಗು ಇಲ್ಲಿನ ಸಾಹಿತಿಗಳು, ಸಾಹಿತ್ಯಾಸಕ್ತರನ್ನು ಕಾಡುತ್ತಿದೆ. ಅಲ್ಲದೇ, ಅವಕಾಶ ಸಿಕ್ಕಾಗಲೂ ಒಂದಿಲ್ಲೊಂದು ಅಡೆತಡೆಗಳು, ಗೊಂದಲಗಳು ಎದುರಾಗುತ್ತಿರುವುದರಿಂದ ಸಮ್ಮೇಳನದ ಬಗ್ಗೆ ಜಿಜ್ಞಾಸೆ ಮೂಡುವಂತಾಗಿದೆ. ಸಮ್ಮೇಳನ ಆಯೋಜನೆ ಸಂಬಂಧ ಕೆಲ ದಿನಗಳಿಂದ ಉಂಟಾಗಿದ್ದ ಸಣ್ಣ-ಪುಟ್ಟ ಗೊಂದಲಗಳು ಈಗ ನಿವಾರಣೆಯಾಗಿದ್ದರೂ, ಯಾವಾಗ ಸಮ್ಮೇಳನ ನಡೆಯಲಿದೆ ಎಂಬ ಅನಿಶ್ಚಿತತೆ ಮುಂದುವರೆದಿದೆ.
ವಿವಿಧ ಕಾರಣಕ್ಕೆ ಮುಂದೂಡಿಕೆ: 2015ರಲ್ಲೇ ಸಮ್ಮೇಳನ ಆಯೋಜಿಸುವ ಅವಕಾಶ ಜಿಲ್ಲೆಗೆ ಸಿಕ್ಕಿತ್ತು. ಆಗಲೂ ಸಮ್ಮೇಳನವನ್ನು ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ನಡೆಸಬೇಕು. ವಾಣಿಜ್ಯ ನಗರಿ ರಾಣಿಬೆನ್ನೂರಿನಲ್ಲಿ ನಡೆಸಬೇಕೆಂದು ಆಗ್ರಹಿಸಿ ನಡೆದ ಹೋರಾಟ, ಪ್ರತಿಭಟನೆಯ ಗೊಂದಲಗಳಿಂದಾಗಿ ಅವಕಾಶ ಕೈತಪ್ಪಿತ್ತು. ಜಿಲ್ಲೆಯ ಜನಪ್ರತಿನಿ ಧಿಗಳ ಒತ್ತಡಕ್ಕೆ ಮಣಿದ ಆಗಿನ ಕಸಾಪ ಅಧ್ಯಕ್ಷ ಮನು ಬಳಿಗಾರ ಅವರು 2020ರಲ್ಲಿ ಹಾವೇರಿ ನಗರದಲ್ಲೇ ಸಮ್ಮೇಳನ ನಡೆಸಲಾಗುವುದು ಎಂಬ ಘೋಷಣೆ ಮಾಡಿದ್ದರು. ಆದರೆ, 2020ರ ಕೊನೆಗೆ ಇಲ್ಲವೇ 2021ರ ಆರಂಭದಲ್ಲೇ ಸಮ್ಮೇಳನ ಆಯೋಜಿಸಬೇಕೆಂಬ ಚಿಂತನೆ ನಡೆಸುತ್ತಿದ್ದಾಗಲೇ ಕಾಣಿಸಿಕೊಂಡ ಕೊರೊನಾ ಸಮ್ಮೇಳನಕ್ಕೆ ಹಿನ್ನಡೆಯನ್ನುಂಟು ಮಾಡಿತು. ಬಳಿಕ ಕೊರೊನಾ ಕಡಿಮೆಯಾದರೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ಘೋಷಣೆಯಾಗಿ ಮತ್ತಷ್ಟು ವಿಳಂಬಕ್ಕೆ ಕಾರಣವಾಯಿತು.
ಸಿದ್ಧತೆಯ ಕೊರತೆ: ಹಿರಿಯ ಕವಿ ಡಾ|ದೊಡ್ಡರಂಗೇಗೌಡ ಅವರ ಸರ್ವಾಧ್ಯಕ್ಷತೆಯಲ್ಲಿ ಈ ಸಮ್ಮೇಳನವನ್ನು ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲು ಆರಂಭದಲ್ಲಿ ಮೊದಲು ದಿನಾಂಕ ನಿಗದಿಪಡಿಸಲಾಗಿತ್ತು. ಮತ್ತೆ ನವೆಂಬರ್ ತಿಂಗಳಿಗೆ ಮುಂದೂಡಲಾಯಿತು. ಆದರೂ, ಸಿದ್ಧತೆಗಳು ಆರಂಭಗೊಳ್ಳಲಿಲ್ಲ. ಸರಿಯಾಗಿ ಸಮಿತಿಗಳು ರಚನೆಯಾಗಲಿಲ್ಲ. ಒಂದೇ ಒಂದು ಸಭೆ ನಡೆಯಲಿಲ್ಲ. ಅನುದಾನವೂ ಬಿಡುಗಡೆಯಾಗಿಲ್ಲ. ಹೀಗಾಗಿ ಸಮ್ಮೇಳನದ ದಿನಾಂಕ ಹತ್ತಿರ ಬರುತ್ತಿದ್ದಂತೆ ಮತ್ತೂಮ್ಮೆ ಮುಂದೂಡುವುದು ಅನಿವಾರ್ಯ ಎಂಬ ವಾತಾವರಣ ನಿರ್ಮಾಣವಾಗಿದೆ.
ನಿಗದಿತ ದಿನಾಂಕಕ್ಕೆ ಸಮ್ಮೇಳನ ನಡೆಯಲಿದೆ ಎಂದು ಸರ್ಕಾರ ಹೇಳಿದರೆ, ಆ ದಿನಾಂಕಕ್ಕೆ ಸಮ್ಮೇಳನ ನಡೆಸುವುದು ಅಸಾಧ್ಯ ಎಂದು ಕಸಾಪ ಸ್ಪಷ್ಟಪಡಿಸಿದೆ. ಈ ಗೊಂದಲ ಬಗೆಹರಿಸಲು ಇತ್ತೀಚೆಗೆ ಬೆಂಗಳೂರಿನಲ್ಲಿ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ಕುಮಾರ್ ಅವರು ಕಸಾಪ ಅಧ್ಯಕ್ಷ ಡಾ|ಮಹೇಶ ಜೋಶಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಸಮ್ಮೇಳನದ ತಯಾರಿ ಸಂಬಂಧ ಅ.12ರಂದು ಬೆಂಗಳೂರಿನಲ್ಲಿ ಹಾಗೂ ಅ.17ರಂದು ಹಾವೇರಿ ಜಿಲ್ಲಾ ಧಿಕಾರಿಗಳ ಕಚೇರಿಯಲ್ಲಿ ಸಭೆ ನಿಗದಿಪಡಿಸಲಾಗಿದೆ. ಈ ಸಭೆಗಳಲ್ಲಾದರೂ ಸಮ್ಮೇಳನ ನಡೆಸಲು ನಿರ್ದಿಷ್ಟ ದಿನಾಂಕ ಘೋಷಿಸಿ ತಯಾರಿ ಆರಂಭಿಸಬೇಕು ಎಂಬುದು ಜಿಲ್ಲೆಯ ಸಾಹಿತಿಗಳು, ಸಾಹಿತ್ಯಾಸಕ್ತರ ಆಗ್ರಹವಾಗಿದೆ.
ಮೂಡದ ಒಮ್ಮತ
ಕಸಾಪಕ್ಕೆ ಜಿಲ್ಲೆಯವರೇ ಆಗಿರುವ ಡಾ|ಮಹೇಶ ಜೋಶಿ ಅಧ್ಯಕ್ಷರಾಗಿದ್ದಾರೆ. ಅಲ್ಲದೇ, ಜಿಲ್ಲೆಯವರೇ ಆದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಿದ್ದಾರೆ. ಹೀಗಾಗಿ, ಅದ್ಧೂರಿ ಸಮ್ಮೇಳನ ನಡೆಯುತ್ತದೆ ಎಂದು ಜನತೆ ಭಾವಿಸಿದ್ದರು. ಅದಕ್ಕೆ ತಕ್ಕಂತೆ ಬೊಮ್ಮಾಯಿ ಅವರೂ ಸಹ ಸಮ್ಮೇಳನ ನಡೆಸಲು ಬಜೆಟ್‌ನಲ್ಲೇ 20 ಕೋಟಿ ಅನುದಾನ ಮೀಸಲಿಟ್ಟಿದ್ದರು. ಆದರೂ, ಸಮ್ಮೇಳನ ದಿನಾಂಕದ ಬಗ್ಗೆ ಒಮ್ಮತ ಮೂಡದಿರುವುದು ಜನತೆಯ ಬೇಸರಕ್ಕೆ ಕಾರಣವಾಗಿದೆ
ಸಾಹಿತ್ಯ ಸಮ್ಮೇಳನ ಕುರಿತು ಚರ್ಚಿಸಲು ಅ.12ರಂದು ಬೆಂಗಳೂರಿನಲ್ಲಿ ಸಭೆ ನಿಗದಿಯಾಗಿದ್ದರೂ, ಅದು ಇನ್ನೂ ಅಧಿಕೃತವಾಗಿಲ್ಲ. ಅ.17ರಂದು ಹಾವೇರಿ ಜಿಲ್ಲಾಡಳಿತ ಭವನದಲ್ಲಿ ನಡೆಯುವ ಸಭೆ ಅಧಿಕೃತವಾಗಿ ನಿಗದಿಯಾಗಿದೆ. ಆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಕಸಾಪ ರಾಜ್ಯಾಧ್ಯಕ್ಷರು, ಜಿಲ್ಲೆಯ ಜನಪ್ರತಿನಿಧಿ ಗಳು, ಸಂಘ-ಸಂಸ್ಥೆಗಳ ಪ್ರತಿನಿ ಧಿಗಳು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ನಿಗದಿಯಾಗಿರುವ ದಿನಾಂಕಕ್ಕೆ ಸಮ್ಮೇಳನ ನಡೆಸಲು ಸಾಧ್ಯವಿಲ್ಲ. ನಮಗೆ ಇನ್ನೂ ಎರಡು ತಿಂಗಳು ಕಾಲಾವಕಾಶ ಬೇಕು. ಸಮ್ಮೇಳನ ನಡೆಸುವ ಜಾಗೆಯ ಕುರಿತು ಯಾವುದೇ ಗೊಂದಲವಿಲ್ಲ. –
ಎಚ್.ಬಿ. ಲಿಂಗಯ್ಯ, ಕಸಾಪ ಜಿಲ್ಲಾಧ್ಯಕ್ಷರು
– ವೀರೇಶ ಮಡ್ಲೂರ