Advertisement
ಕಲಬುರಗಿಯಲ್ಲಿ ಸಿಗುವ ಖಡಕ್ ಜೋಳದ ರೊಟ್ಟಿ, ಪುಂಡಿಪಲ್ಯೆ, ಎಣ್ಣೆಗಾಯಿ, ಗೋಧಿ ಹುಗ್ಗಿ ಊಟದ ಮಜಾನೇ ಬೇರೆ. ಬದನೆಕಾಯಿ ಜೋಳದ ರೊಟ್ಟಿ ಜತೆಗೆ ಸಜ್ಜೆ ರೊಟ್ಟಿ ಸಹ, ಅದರಲ್ಲೂ ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ. ಒಂದೊಂದು ಪ್ರದೇಶದಲ್ಲಿ ತನ್ನದೇ ಆದ ಆಹಾರ ಪದ್ಧತಿ ಇರುತ್ತದೆ. ಜನಸಾಮಾನ್ಯರ ಉಪಹಾರ ಸುಸಲಾ- ಮಿರ್ಚಿಯಾದರೆ, ಊಟಕ್ಕೆ ಜೋಳದ ರೊಟ್ಟಿಯೇ ಮುಖ್ಯ ಆಹಾರ. ಕಲಬುರಗಿ ಉದ್ದಕ್ಕೂ, ಬೆಳಿಗ್ಗೆ ಹೊತ್ತು ಚುರುಮುರಿ ಸುಸಲಾ- ಜವಿಗೋಧಿ ರವಾದ ಉಪ್ಪಿಟ್ಟು ಸೇವಿಸುವುದು ಸರ್ವೇ ಸಾಮಾನ್ಯ. ಒಮ್ಮೆ ರೊಟ್ಟಿ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ.
ಹೊಟೇಲ್‌ಗಳು, ಅದರಲ್ಲೂ ಚಿಕ್ಕ ಹೋಟೆಲ್‌ಗಳು ಚುರುಮುರಿ ಸುಸಲಾ- ಮಿರ್ಚಿ ಭಜಿಗಳಿಂದಾಗಿಯೇ ಬೆಳಗ್ಗೆ ಹೊತ್ತು ಗ್ರಾಹಕರಿಂದ ತುಂಬಿ ತುಳುಕುತ್ತಾ ಜನರನ್ನು ಆಕರ್ಷಿಸುತ್ತವೆ. ಬಿಳಿ ಜೋಳದ ರೊಟ್ಟಿಯೊಂದಿಗೆ ಶೇಂಗಾ ಹಿಂಡಿ, ಅಗಸಿ ಹಿಂಡಿ, ಕಾರೆಳ್ಳು ಹಿಂಡಿ, ಪುಂಡಿ ಪಲ್ಯ ಸೇರಿದಂತೆ ಎಲ್ಲಾ ತರಕಾರಿಗಳನ್ನು ಸೇರಿಸಿ ಮಾಡುವ ಮುದ್ದೆ ಪಲ್ಯೆ ಬಾಯಿಯಲ್ಲಿ ನೀರೂರುವಂತೆ ಮಾಡುತ್ತದೆ.
ಅದರಲ್ಲೂ ಖಡಕ್ ಜೋಳದ ರೊಟ್ಟಿ, ಹುಳಾನುಚ್ಚು, ಅಗಸಿ ಹಿಂಡಿ, ಕುಸುಬಿ ಎಣ್ಣಿಯೊಂದಿಗೆ ಉಳ್ಳಾಗಡ್ಡಿ ಸೇರಿಸಿಕೊಂಡು ತಿಂದರೆ ಅದು ಪಂಚ ಪರಮಾನ್ನಕ್ಕಿಂತಲೂ ಶ್ರೇಷ್ಠ ಎಂಬ ಮಾತನ್ನು ಯಾರೂ ಅಲ್ಲಗಳೆಯುವಂತಿಲ್ಲ. ಈ ಭಾಗದಲ್ಲಿ ಗೋಧಿ ರವೆಗೆ ಬೆಲ್ಲ ಸೇರಿಸಿ ಮಾಡುವ ಸಜ್ಜಕ, ಅದರಲ್ಲಿ ತುಪ್ಪ ಹಾಕಿ ಸವಿಯುವುದು ಸರ್ವೇ ಸಾಮಾನ್ಯ. ಇದು ಸರಳವಾಗಿ ಹಾಗೂ ಶೀಘ್ರವಾಗಿ ತಯಾರಾಗುವ ಆಹಾರ. ಯಾರಾದರೂ ನೆಂಟರು ಸಮಯವಲ್ಲದ ಸಮಯಕ್ಕೆ ಬಂದಾಗ ತುರ್ತಿನಲ್ಲಿ ಮಾಡಲು ಸಜ್ಜಕ ಒಂದು ಉತ್ತಮವಾದ ಆಯ್ಕೆ. ಸಜ್ಜಕವನ್ನು ಈಗಲೂ ದೊಡ್ಡ ದೊಡ್ಡ ಜಾತ್ರೆ ಹಾಗೂ ಖಾಂಡಗಳಲ್ಲೂ ಪ್ರಸಾದ ರೂಪದಲ್ಲಿ ಮಾಡಿ ಬಡಿಸಲಾಗುತ್ತದೆ.
Related Articles
ಬಡವರ ಮನೆಯ ಮದುವೆಗಳಲ್ಲಿ ಹಿಂದೆ ಸಜ್ಜಕವೇ ಸಿಹಿ ತಿಂಡಿಯಾಗಿತ್ತು. ಶ್ರೀಮಂತರ ಮದುವೆಗಳಲ್ಲಿ ಶೀರಾ ಸಿಹಿ ತಿಂಡಿಯಾಗಿರುತ್ತಿತ್ತು. ಜವೆ ಗೋಧಿಯಿಂದ ತಯಾರಾಗುವ ಗೋಧಿ ಹುಗ್ಗಿ ಸಹ ಈ ಭಾಗದ ಜನಪ್ರಿಯ ಖಾದ್ಯ. ಜವೆಗೋಧಿಯನ್ನು ಅದರ ಮೇಲಿನ ಹೊಟ್ಟು ಹೋಗುವಂತೆ ನೀರು ಹಚ್ಚಿ, ಚೆನ್ನಾಗಿ ಒಣಗಿಸಿ, ನಂತರ ಒನಕೆಯಿಂದ ಕುಟ್ಟಿ ಹುಗ್ಗಿ ಅಕ್ಕಿಯನ್ನು ಮಾಡಲಾಗುತ್ತದೆ. ಅದನ್ನು ಕುದಿಸಿ ಗೋದಿಯ ಹೊಟ್ಟೆಯೊಡೆದು ಕುದ್ದಮೇಲೆ ಅದಕ್ಕೆ ಬೆಲ್ಲ, ಯಾಲಕ್ಕಿ ಇತ್ಯಾದಿ ಸೇರಿಸಿ ತಯಾರಿಸಲಾಗುತ್ತದೆ. ಇದಲ್ಲದೆ, ಅಂಬಲಿ ಎಂಬ ಖಾದ್ಯವನ್ನೂ ಗ್ರಾಮೀಣ ಪ್ರದೇಶದಲ್ಲಿ ತಯಾರಿಸಲಾಗುತ್ತದೆ. ಇದು ಹೊಟ್ಟೆಗೆ ತಂಪು ನೀಡುತ್ತದೆ.
Advertisement
ಕಡಲೆಬೇಳೆಯಿಂದ ತಯಾರಿಸಲಾಗುವ ಹೋಳಿಗೆ ಈ ಭಾಗದಲ್ಲಿ ಹೆಚ್ಚು ಜನಪ್ರಿಯ. ಇದರೊಂದಿಗೆ ತೊಗರಿಬೇಳೆಯಿಂದಲೂ ಹೋಳಿಗೆ ಮಾಡಲಾಗುತ್ತದೆ. ಬಿಸಿ ಬಿಸಿ ಹೋಳಿಗೆ ಅದರ ಮೇಲೆ ತುಪ್ಪ, ಪಕ್ಕದಲ್ಲಿ ಬದನೆಕಾಯಿ ಪಲ್ಯೆ, ಸಂಡಿಗೆ, ಹಪ್ಪಳ, ಬಾಳಕದ ಮೆಣಸಿನಕಾಯಿ ಇದ್ದರೆ, ಒಬ್ಬೊಬ್ಬರೂ ನಾಲ್ಕೈದು ಹೋಳಿಗೆಯನ್ನು ಸವಿದೇ ಸವಿಯುತ್ತಾರೆ. ಶೇಂಗಾ, ಎಳ್ಳು ಮತ್ತು ಬೆಲ್ಲ ಸೇರಿಸಿ ಮಾಡುವ ಶೇಂಗಾ ಹೋಳಿಗೆ ಸಹ ಈ ಭಾಗದ ಇನ್ನೊಂದು ಜನಪ್ರಿಯ ಸಿಹಿತಿಂಡಿಯಾಗಿದೆ.