Advertisement

ರಾಜ್ಯ CID ಯಲ್ಲಿ 10 ವರ್ಷಗಳಲ್ಲಿ 846 ಪ್ರಕರಣಗಳ ತನಿಖೆ ಬಾಕಿ !

09:03 PM Jul 16, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ನಡೆಯುವ ಪ್ರಮುಖ ಅಪರಾಧ ಪ್ರಕರಣ ಬೇಧಿಸಲೆಂದೇ ಸ್ಥಾಪಿತಗೊಂಡಿರುವ ಸಿಐಡಿ ವಿಭಾಗದಲ್ಲಿ ಕಳೆದ 10 ವರ್ಷಗಳಲ್ಲಿ ಬರೋಬ್ಬರಿ 846 ಕೇಸ್‌ಗಳ ತನಿಖೆ ಬಾಕಿ ಉಳಿದುಕೊಂಡಿದೆ.

Advertisement

ವಿಧಾನಪರಿಷತ್ತಿನಲ್ಲಿ ಇತ್ತಿಚಿಗೆ ಜೆಡಿಎಸ್‌ನ ಟಿ.ಎ ಶರವಣ ಅವರ ಪ್ರಶ್ನೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಸದನದಲ್ಲಿ ನೀಡಿರುವ ಲಿಖೀತ ಉತ್ತರದಲ್ಲಿ ಈ ಮಾಹಿತಿ ಕೊಡಲಾಗಿದೆ. ಪ್ರಕರಣಗಳ ಬಾಕಿ ಹಾಗೂ ತನಿಖೆ ವಿಳಂಬ ಗತಿಯಲ್ಲಿ ಸಾಗುತ್ತಿರುವುದು ಆರೋಪಿಗಳಿಗೆ ವರವಾಗಿ ಪರಿಣಮಿಸಿದೆ.

ಪ್ರಮುಖ ಅಪರಾಧ ಪ್ರಕರಣಗಳನ್ನು ಬೇದಿಸಿ ಆರೋಪಿಗಳ ಕೃತ್ಯ ಬಯಲಿಗೆಳೆಯುವಲ್ಲಿ ಇತ್ತೀಚೆಗೆ ಸಿಐಡಿ ವೈಫ‌ಲ್ಯ ಕಂಡಿದೆ. 2014ರಲ್ಲಿ ಬಾಕಿ ಉಳಿದಿದ್ದ 8 ಪ್ರಕರಣಗಳು 2022ಕ್ಕೆ 262ಕ್ಕೆ ಏರಿಕೆಯಾಗಿರುವುದು ಹಾಗೂ ಒಟ್ಟಾರೆ ಸಿಐಡಿಯಲ್ಲಿ 846 ಪ್ರಕರಣಗಳ ತನಿಖೆ ಬಾಕಿ ಇರುವುದು ಮೇಲಿನ ಆರೋಪಗಳಿಗೆ ಪುಷ್ಠಿ ನೀಡುತ್ತವೆ. 486 ಆರ್ಥಿಕ ಅಪರಾಧ ಪ್ರಕರಣಗಳ ತನಿಖೆ ಬಾಕಿ ಉಳಿದಿವೆ. ಅಗತ್ಯ ಪ್ರಕರಣಗಳಲ್ಲಿ ಆಡಿಟ್‌ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ.

2014ರಲ್ಲಿ ಕೇವಲ 8 ಪ್ರಕರಣಗಳು ಬಾಕಿ ಉಳಿದಿತ್ತು. 2015ರಲ್ಲಿ ಇದರ ಪ್ರಮಾಣ 18ಕ್ಕೆ ಏರಿಕೆಯಾಗಿದೆ. 2016ರಲ್ಲಿ 28, 2017ರಲ್ಲಿ 31, 2018 ರಲ್ಲಿ 95, 2019 ರಲ್ಲಿ 86, 2020ರಲ್ಲಿ 77, 2021 ರಲ್ಲಿ 186, 2022ರಲ್ಲಿ 262 ಹಾಗೂ 2023ರಲ್ಲಿ 55 ಪ್ರಕರಣಗಳು ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಒಟ್ಟಾರೆ 846 ಪ್ರಕರಣಗಳ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕಾಗಿದೆ.

ಸಾಕ್ಷ್ಯಾಧಾರದ ಕೊರತೆಯಿಂದ ತನಿಖೆ ನಡೆಸಿ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆ ವಿಳಂಬವಾಗುತ್ತಿರುವುದಾಗಿ ಸಿಐಡಿ ಅಧಿಕಾರಿಗಳ ವಾದವಾಗಿದೆ. ಮತ್ತೂಂದೆಡೆ ಉತ್ಛ ನ್ಯಾಯಾಲಯಗಳಿಂದ ತಡೆಯಾಜ್ಞೆ ತರಲಾಗಿದೆ. ಅವುಗಳನ್ನು ಹೊರತುಪಡಿಸಿ ಉಳಿದ ಪ್ರಕರಣಗಳು ತನಿಖೆಯಲ್ಲಿರುವುದರಿಂದ ತನಿಖೆ ಪೂರ್ಣಗೊಂಡ ಬಳಿಕ ಲಭ್ಯ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅಂತಿಮ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದುಬ ಲಿಖೀತ ಉತ್ತರದಲ್ಲಿ ಮಾಹಿತಿ ನೀಡಲಾಗಿದೆ.

Advertisement

ತನಿಖೆ ವಿಳಂಬಕ್ಕೆ ಕಾರಣಗಳೇನು ?: ಪ್ರಕರಣಗಳಲ್ಲಿ ಆಳವಾದ ಮತ್ತು ನಿಖರವಾದ ನಡೆಸಬೇಕಾಗಿದ್ದು ದಾಖಲಾತಿಗಳ ಸಂಗ್ರಹ, ಆಡಿಟ್‌ಗೆ ಹಲವು ದಿನಗಳು ಬೇಕಾಗುತ್ತವೆ. ಹೊರ ರಾಜ್ಯಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಹಚ್ಚುವುದು ಸವಾಲಾಗಿದೆ. ಕೆಲವು ಪ್ರಕರಣಗಳಲ್ಲಿ ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಬಾಕಿ ಇರುವ ಪ್ರಕರಣಗಳಲ್ಲಿ, ಅಪರಾಧಕ್ಕೆ ಸಂಬಂಧಿಸಿದಂತೆ, ವೈದ್ಯಕೀಯ ದಾಖಲೆಗಳು ಮತ್ತು ನ್ಯಾಯಾಧೀಶರ ವಿಚಾರಣಾ ವರದಿಗಳು ಹಾಗೂ ಕೆಲವು ಪ್ರಕರಣಗಳಲ್ಲಿ ಆರೋಪಿಗಳು ಸರ್ಕಾರಿ ನೌಕರರಾಗಿದ್ದು, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ವಿಳಂಬವಾಗುತ್ತದೆ. ಇನ್ನು 2020-21 ರ ಅವಧಿಯಲ್ಲಿ ಸಾಂಕ್ರಾಮಿಕ ಹರಡಿದ್ದರಿಂದ ಸ್ವಲ್ಪ ಮಟ್ಟಿನ ವಿಳಂಬವಾಗಿದೆ. ಪ್ರಕರಣಗಳ ತನಿಖೆ ಶೀಘ್ರವಾಗಿ ಮುಂದುವರೆಸುವುದಾಗಿ ಗೃಹ ಇಲಾಖೆ ಹೇಳಿದೆ.

ವಿಳಂಬ ನೀತಿ ಆರೋಪಿಗಳಿಗೆ ವರ
ಸಿಐಡಿ ಅಧಿಕಾರಿಗಳ ವಿಳಂಬ ನೀತಿಯು ಆರೋಪಿಗಳಿಗೆ ವರವಾಗಿ ಪರಿಣಮಿಸಿದ್ದು, ಕೆಲ ಪ್ರಮುಖ ಪ್ರಕರಣಗಳ ಸಾಕ್ಷ್ಯ ನಾಶಪಡಿಸಲು ಮುಂದಾಗಿರುವ ಆರೋಪ ಕೇಳಿ ಬಂದಿದೆ. ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಕಾರಿಯಾಗಿದೆ. ಚಾರ್ಜ್‌ಶೀಟ್‌ನಲ್ಲಿ ಬಲವಾದ ಸಾಕ್ಷ್ಯ ಒದಗಿಸದಿದ್ದಲ್ಲಿ ಪ್ರಮುಖ ಪ್ರಕರಣಗಳೂ ಖುಲಾಸೆಗೊಳ್ಳುತ್ತವೆ. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಹಲವಾರು ಪ್ರಕರಣಗಳು ಕೋರ್ಟ್‌ನಲ್ಲಿ ಖುಲಾಸೆಗೊಂಡಿರುವ ಸಾಕಷ್ಟು ಉದಾಹರಣೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next