Advertisement

ಶೇ.82ರಷ್ಟು ಮಂದಿಗೆ ಲಸಿಕೆ ಪೂರ್ಣ; ಶೇ.18 ಗುರಿ ಮುಟ್ಟುವುದೇ ಸವಾಲು

08:35 PM Oct 15, 2021 | Team Udayavani |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಸಿಕೆ ಅಭಿಯಾನಕ್ಕೆ ಕೆಲವು ದಿನಗಳಿಂದ ತುಸು ಹಿನ್ನಡೆ ಉಂಟಾದರೂ ಜಿಲ್ಲೆಯ ಶೇ.82ರಷ್ಟು ಮಂದಿ ಈಗಾಗಲೇ ಮೊದಲನೇ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. ಆದರೆ ಇನ್ನುಳಿದ ಶೇ. 18ರಷ್ಟು ಗುರಿ ತಲುಪುವುದು ನಾನಾ ಕಾರಣಗಳಿಗೆ ಆರೋಗ್ಯ ಇಲಾಖೆಗೂ ಸವಾಲಾಗಿ ಪರಿಣಮಿಸಿದೆ.

Advertisement

ಜಿಲ್ಲೆಯಲ್ಲಿ ಸದ್ಯ ಲಸಿಕೆ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿದ್ದರೂ ಇನ್ನೂ 3.24 ಲಕ್ಷ ಮಂದಿ ಮೊದಲನೇ ಡೋಸ್‌ ಲಸಿಕೆ ಪಡೆಯಲು ಬಾಕಿ ಇದ್ದಾರೆ. ಅವರ ಮನವೊಲಿಕೆ ಕೆಲಸ ಆರೋಗ್ಯ ಇಲಾಖೆಯಿಂದ ನಡೆಯುತ್ತಿದ್ದರೂ ಕೆಲವೆಡೆ ಲಸಿಕೆ ಪಡೆದುಕೊಳ್ಳಲು ಮುಂದೆ ಬರುತ್ತಿಲ್ಲ. ಲಸಿಕೆ ಗುರಿ ತಲುಪುವುದು ಆರೋಗ್ಯ ಇಲಾಖೆಗೆ ಸವಾಲಾಗಿದ್ದು, ಇದೀಗ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಗ್ರಾಮೀಣ ಭಾಗದ ಕೆಲವು ಕಡೆಗಳಲ್ಲಿ ಕೋವಿಡ್‌, ಲಸಿಕೆಯ ಕುರಿತು ಅಪನಂಬಿಕೆ, ತಪ್ಪು ತಿಳಿವಳಿಕೆ, ಲಸಿಕೆ ಪಡೆಯಲು ಅಸಡ್ಡೆ ಸಹಿತ ವಿವಿಧ ಕಾರಣದಿಂದಾಗಿ ಕೆಲವು ಮಂದಿ ಇನ್ನೂ ಲಸಿಕೆ ಪಡೆದುಕೊಂಡಿಲ್ಲ. ಆರೋಗ್ಯ ಇಲಾಖೆಯಿಂದ ಅಂತಹವರಿಗೆ ಕರೆ ಮಾಡಿ ಮನವೊಲಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.

ವಯೋ ಸಹಜ ಕಾಯಿಲೆಯವರಿಗೆ, ಅಶಕ್ತ ಮನೆಗೆ ತೆರಳಿ ಲಸಿಕೆ ನೀಡಲಾಗುತ್ತಿದೆ. ಈಗಾಗಲೇ ಶೇ.96.94ರಷ್ಟು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಮೊದಲನೇ ಡೋಸ್‌, ಶೇ.68.96ರಷ್ಟು ಮಂದಿಗೆ 2ನೇ ಡೋಸ್‌, ಶೇ.100ರಷ್ಟು ಮಂದಿ ಮುಂಚೂಣಿ ಕಾರ್ಯ ಕರ್ತರಿಗೆ ಮೊದಲ ಡೋಸ್‌, ಶೇ.56.97ರಷ್ಟು ಮಂದಿಗೆ 2ನೇ ಡೋಸ್‌ ಲಸಿಕೆ ನೀಡಲಾಗಿದೆ. ಅದೇರೀತಿ, 18 ವರ್ಷದಿಂದ 44 ವರ್ಷ ದೊಳಗಿನ ಶೇ.71.22ರಷ್ಟು ಮಂದಿಗೆ ಮೊದಲ ಡೋಸ್‌, ಶೇ. 37.58ರಷ್ಟು ಮಂದಿಗೆ ಎರಡನೇ ಡೋಸ್‌, 45ರಿಂದ 60 ವರ್ಷದೊಳಗಿನ ಶೇ.97.89ರಷ್ಟು ಮಂದಿಗೆ ಮೊದಲ ಡೋಸ್‌, ಶೇ.60.19ರಷ್ಟು ಮಂದಿಗೆ 2ನೇ ಡೋಸ್‌ ಮತ್ತು 60 ವರ್ಷ ಮೇಲ್ಪಟ್ಟ ಶೇ.100ರಷ್ಟು ಮಂದಿಗೆ ಮೊದಲ ಡೋಸ್‌, ಶೇ.69.13ರಷ್ಟು ಮಂದಿಗೆ ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ.

ಇಂದಿನಿಂದ ಹೊಸ ನಿಯಮ: ಲಸಿಕೆ ಪಡೆದುಕೊಳ್ಳುವಂತೆ ಪ್ರೇರೇಪಿಸಲು ಅ. 16 ರಿಂದ ಮಂಗಳೂರು ನಗರದ ಮಾಲ್‌ ಸಹಿತ ಎಲ್ಲ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ಪಡೆಯಲು ಸಾರ್ವಜನಿಕರು ಲಸಿಕೆ ಸ್ವೀರಿಸಿದ ದಾಖಲೆ ಇಟ್ಟು ಕೊಳ್ಳುವುದು ಕಡ್ಡಾಯ ಎಂಬ ಸೂಚನೆಯನ್ನು ಪಾಲಿಕೆ ನೀಡಿದೆ. ನಗರದಲ್ಲಿ ಬೇಕಾಬಿಟ್ಟಿ ತಿರುಗಾಡುವುದನ್ನು ಗಂಭೀರ ವಾಗಿ ಪರಿಗಣಿಸಲಾಗುತ್ತದೆ ಎಂದು ಮನಪಾ ಆಯುಕ್ತ ಅಕ್ಷಯ್‌ ಶ್ರೀಧರ್‌ ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 470 ಹೊಸ ಪ್ರಕರಣ ಪತ್ತೆ | 368 ಸೋಂಕಿತರು ಗುಣಮುಖ 

ಶೇ. 100 ಲಸಿಕೆ ಗುರಿಗೆ ಸಹಕರಿಸೋಣ
ಇದು “ಉದಯವಾಣಿ-ಸುದಿನ’ ಕಳಕಳಿ
ಕೋವಿಡ್‌ ತಡೆಗಟ್ಟುವಲ್ಲಿ, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕೋವಿಡ್‌ ನಿರೋಧಕ ಲಸಿಕೆ ಪಡೆದುಕೊಳ್ಳುವ ಮೂಲಕ ಪ್ರತಿಯೊಬ್ಬರು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕೆಂಬುದು ಉದಯವಾಣಿ-ಸುದಿನ ಕಳಕಳಿಯಾಗಿದೆ. ಲಸಿಕೆ ಪಡೆದುಕೊಳ್ಳುವುದು ಕೊರೊನಾ ನಿಯಂತ್ರಿಸುವಲ್ಲಿ ಒಂದು ರೀತಿಯಲ್ಲಿ ಶ್ರೀರಕ್ಷೆಯಾಗಿದೆ. ಜಿಲ್ಲೆಗೆ ಈಗ ಲಸಿಕೆ ಪೂರೈಕೆ ಕೂಡ ಹೆಚ್ಚಿದೆ. ವೆನ್ಲಾಕ್ ಜಿಲ್ಲಾಸ್ಪತ್ರೆ, ಹತ್ತಿರದ ಪ್ರಾ.ಆ. ಕೇಂದ್ರ, ಸ.ಆ.ಕೇಂದ್ರ, ತಾ| ಆ. ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಅಶಕ್ತರು ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಲು ಸಾಧ್ಯವಿಲ್ಲದಾಗ ಹತ್ತಿರದ ಪ್ರಾ.ಆ. ಕೇಂದ್ರಕ್ಕೆ ಮಾಹಿತಿ ನೀಡಿದರೆ ಮನೆಗೆ ಬಂದು ಲಸಿಕೆ ನೀಡಲಾಗುತ್ತಿದೆ. ಎರಡನೇ ಡೋಸ್‌ ಪಡೆಯಲು ಮೊಬೈಲ್‌ಗೆ ಸಂದೇಶ ಬರದಿದ್ದರೂ ಕೊವಿಶೀಲ್ಡ್‌ ಲಸಿಕೆ ಪಡೆದು 84 ದಿನ, ಕೊವ್ಯಾಕ್ಸಿನ್‌ ಲಸಿಕೆ ಪಡೆದು 28 ದಿನ ಆದವರು 2ನೇ ಡೋಸ್‌ ಲಸಿಕೆ ಪಡೆಯಬಹುದು. ದ.ಕ. ಜಿಲ್ಲೆಯಲ್ಲಿ ಶೇ.100ರಷ್ಟು ಲಸಿಕೆ ಗುರಿ ತಲುಪುವುದಕ್ಕೆ ಪ್ರತಿಯೊಬ್ಬರು ಸಹಕರಿಸುವ ಮೂಲಕ ಜಿಲ್ಲಾಡಳಿತದ ಜತೆಗೆ ಕೈಜೋಡಿಸಬೇಕು ಎನ್ನುವುದು ಪತ್ರಿಕೆಯ ಕಳಕಳಿಯಾಗಿದೆ.

ಶಿಬಿರ ಆಯೋಜನೆ
ಸದ್ಯ ಮೊದಲ ಡೋಸ್‌ ಲಸಿಕೆ ಪಡೆದುಕೊಳ್ಳಲು ಕಡಿಮೆ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಇದೇ ಕಾರಣಕ್ಕೆ ಮೊದಲ ಡೋಸ್‌ ಲಸಿಕೆ ಪಡೆದುಕೊಳ್ಳಲು ಬಾಕಿ ಇರುವ ಎಲ್ಲರಿಗೂ ಕರೆ ಮಾಡಿ ಮಾಹಿತಿ ನೀಡಲಾಗುತ್ತಿದೆ. ಕೆಲವರಲ್ಲಿ ಲಸಿಕೆ ತೆಗೆದುಕೊಳ್ಳುವುದೇ ಇಲ್ಲ ಎಂಬ ಭಾವನೆ ಇದೆ. ಕೆಲವರು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳೋಣ ಎನ್ನುವವರು ಇದ್ದಾರೆ. ಇನ್ನು ಕೆಲವೊಬ್ಬರಿಗೆ ಅಲರ್ಜಿ ಸಹಿತ ಕೆಲವು ಕಾರಣದಿಂದಾಗಿ ಲಸಿಕೆ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಗ್ರಾಮೀಣ ಭಾಗದಲ್ಲಿ ಲಸಿಕೆ ಕೇಂದ್ರಗಳಿಗೆ ತೆರಳಲು ಸಾಧ್ಯವಿರದ ಕಡೆ ಹತ್ತಿರದ ಅಂಗನವಾಡಿ ಕೇಂದ್ರಗಳಲ್ಲಿ ಶಿಬಿರ ಆಯೋಜಿಸುತ್ತಿದ್ದೇವೆ.
-ಡಾ| ಕಿಶೋರ್‌ ಕುಮಾರ್‌, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next