Advertisement

ಆತಿಥೇಯ ಮಂಗಳೂರು ವಿವಿಗೆ ಸಮಗ್ರ ಪ್ರಶಸ್ತಿ

11:04 PM Jan 07, 2022 | Team Udayavani |

ಮೂಡುಬಿದಿರೆ: ಮಂಗಳೂರು ವಿವಿಯ ಆಶ್ರಯದಲ್ಲಿ ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ಸಹಯೋಗದೊಂದಿಗೆ, ಅಸೋಸಿ ಯೇಶನ್‌ ಆಫ್‌ ಇಂಡಿಯನ್‌ ಯುನಿವರ್ಸಿಟಿ ಸಹಭಾಗಿತ್ವದಲ್ಲಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆದ 81ನೇ ಅಖಿಲ ಭಾರತ ಅಂತರ್‌ ವಿ.ವಿ. ಪುರುಷರ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಆತಿಥೇಯ ಮಂಗಳೂರು ವಿವಿ ಸಮಗ್ರ ಪ್ರಶಸ್ತಿ ಗೆದ್ದಿದೆ. ಅದು 6 ಚಿನ್ನ, 6ಬೆಳ್ಳಿ ಹಾಗೂ 4 ಕಂಚಿನ ಪದಕಗಳ ಸಹಿತ 105 ಅಂಕ ಗಳಿಸಿತು. ಈ ಸಾಧಕರೆಲ್ಲರೂ ಅಳ್ವಾಸ್‌ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

Advertisement

42 ಅಂಕ ಗಳಿಸಿದ ಪಂಜಾಬ್‌ ಪಾಗ್ವಾರ್‌ನ ಪ್ರೊಫೆಷನಲ್‌ ವಿವಿ ರನ್ನರ್ ಅಪ್‌ ಪ್ರಶಸ್ತಿ ಪಡೆದಿದೆ. ರೋಹrಕ್‌ನ ಮಹರ್ಷಿ ದಯಾನಂದ ವಿವಿ (37 ಅಂಕ) ಮೂರನೇ ಸ್ಥಾನ ಗಳಿಸಿದೆ. ಪಂಜಾಬ್‌ನ ಪಟಿಯಾಲ ವಿವಿಯ ಅಕ್ಷ್ ದೀಪ್‌ ಸಿಂಗ್‌ ಶ್ರೇಷ್ಠ ಕ್ರೀಡಾಪಟುವಾಗಿ ಮೂಡಿಬಂದರು.

ಪ್ರಶಸ್ತಿ ಪ್ರದಾನ
ಶುಕ್ರವಾರ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್‌ ಮತ್ತು ಅದಾನಿ ಯಪಿಸಿಲ್‌ ಗ್ರೂಪ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್‌ ಆಳ್ವ ಅವರು ಜಂಟಿಯಾಗಿ ಪ್ರಶಸ್ತಿ ಪ್ರದಾನ ಮಾಡಿದರು.

“ಮುಂದಿನ ಒಲಿಂಪಿಕ್ಸ್‌ಗೆ ಸಹಕಾರಿಯಾಗು ವಂತೆ ಕ್ರೀಡಾಪಟುಗಳನ್ನು ಆಳ್ವಾಸ್‌ ಸಂಸ್ಥೆಯು ವ್ಯವಸ್ಥಿತ ರೀತಿಯಲ್ಲಿ ಸಜ್ಜುಗೊಳಿಸುತ್ತಿದೆ. ಈ ಕ್ರೀಡಾಕೂಟವು ಹಿಂದಿನ ಹಲವಾರು ರಾಷ್ಟ್ರೀಯ ದಾಖಲೆಗಳನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿರುವುದು ಗಮನಾರ್ಹ. ಸತತ 5 ವರ್ಷಗಳಿಂದ ಕ್ರೀಡೆಯನ್ನು ಮಂಗಳೂರು ವಿವಿ ಮತ್ತು ಆಳ್ವಾಸ್‌ ಶಿಕ್ಷಣ ಸಂಸ್ಥೆಯು ಜಂಟಿಯಾಗಿ ಆಯೋಜಿಸುತ್ತ ಬರುವ ಮೂಲಕ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ’ ಎಂದು ಉಮಾನಾಥ ಕೋಟ್ಯಾನ್‌ ಶ್ಲಾಘಿಸಿದರು.


ವೀಕ್ಷಕರ ಶ್ಲಾಘನೆ
ಕೂಟದ ವೀಕ್ಷಕರಾಗಿ ಆಗಮಿಸಿದ್ದ ಜೈನ್‌ ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ| ಯು.ವಿ. ಶಂಕರ್‌, ಅಮರಾವತಿ ವಿವಿ ನಿರ್ದೇಶಕ ಡಾ| ಅವಿನಾಶ್‌ ಕೂಟವನ್ನು ಮಾದರಿಯಾಗಿ ಆಯೋಜಿಸಲಾಗಿರುವುದಕ್ಕೆ ಮುಕ್ತ ಪ್ರಶಂಸೆ ವ್ಯಕ್ತಪಡಿಸಿದರು. ಆರೋಗ್ಯಪೂರ್ಣ ಆಹಾರ, ವಸತಿ ವ್ಯವಸ್ಥೆ ಎಲ್ಲವನ್ನೂ ಉಚಿತವಾಗಿ ಆಳ್ವಾಸ್‌ ಕಲ್ಪಿಸಿಕೊಟ್ಟಿದೆ. ಜತೆಗೆ ನಗದು ಪುರಸ್ಕಾರಗಳನ್ನೂ ನೀಡಿದೆ.

ಅದ್ಧೂರಿಯ ಉದ್ಘಾಟನ ಸಮಾರಂಭ, ಪದಕ ಪ್ರದಾನದ ಸೊಬಗು, ಸಾಂಸ್ಕೃತಿಕ ಕಲಾಪಗಳ ಮೆರುಗು..ಹೀಗೆ ಎಲ್ಲ ವಿಷಯಗಳಲ್ಲೂ ಒಂದು ರಾಷ್ಟ್ರೀಯ ಕೂಟವನ್ನು ಹೇಗೆ ನಡೆಸಿಕೊಡಬಹುದು ಎಂಬುದಕ್ಕೆ 5ನೇ ಬಾರಿ ಅಂತರ್‌ ವಿ.ವಿ. ಕ್ರೀಡಾಕೂಟ ಸಂಘಟಿಸಿರುವ ಆಳ್ವಾಸ್‌ ಮತ್ತು ಮಂಗಳೂರು ವಿ.ವಿ. ಸಾಕ್ಷಿಯಾಗಿದೆ ಎಂದರು.

Advertisement

ಮಹಿಳಾ ಕೂಟಕ್ಕೂ ಸಿದ್ಧ
ಒಡಿಶಾದಲ್ಲಿ ನಡೆಯಬೇಕಿದ್ದ, ಕೊರೊನಾ ಕಾರಣ ಮುಂದೂಡಲ್ಪಟ್ಟಿರುವ ಅಂತರ್‌ ವಿ.ವಿ. ಮಹಿಳಾ ಆ್ಯತ್ಲೆಟಿಕ್ಸ್‌ ಕೂಟ ನಡೆಸಲು ಮಂಗಳೂರು ವಿ.ವಿ. ಮತ್ತು ಆಳ್ವಾಸ್‌ ಉತ್ಸುಕ ವಾಗಿವೆ. ಇದನ್ನು ಸ್ವಾಗತಿಸಿದ ಡಾ| ಯು.ವಿ. ಶಂಕರ್‌ ಅವರು ಈ ಪ್ರಸ್ತಾವನೆಯನ್ನು ವಿ.ವಿ.ಗಳ ಸಂಘಟನೆಯಲ್ಲಿರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದರು.

ಮಂಗಳೂರು ವಿವಿ ಕುಲಸಚಿವ ಡಾ| ಕಿಶೋರ್‌ ಕುಮಾರ್‌ ಸಿ.ಕೆ. ಮಾತನಾಡಿ, ಆಳ್ವಾಸ್‌ನ ವ್ಯವಸ್ಥೆಗಳಿಂದ ಕೂಟ ಅತ್ಯಂತ ಯಶಸ್ವಿಯಾಗಿ ನಡೆದಿದೆ, ಮಂಗಳೂರು ವಿ.ವಿ. ರಾಷ್ಟ್ರದ ಕ್ರೀಡಾರಂಗದಲ್ಲಿ ಸಾಧನೆಯ ಪಟ್ಟಿಗೆ ಮಿಂಚಲು ಸಾಧ್ಯವಾಗಿದೆ ಎಂದರು.

ಪುರಸಭಾ ಅಧ್ಯಕ್ಷ ಪ್ರಸಾದ್‌ ಕುಮಾರ್‌, ಮಂಗಳೂರು ಎ.ಪಿ.ಎಂ.ಸಿ. ಅಧ್ಯಕ್ಷ ಕೃಷ್ಣರಾಜ್‌ ಹೆಗ್ಡೆ, ದ.ಕ. ಜಿಲ್ಲಾ ವಾರ್ತಾ ಧಿಕಾರಿ ರವಿರಾಜ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್‌ ಆಳ್ವ ಉಪಸ್ಥಿತರಿದ್ದರು.

ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಜೆರಾಲ್ಡ್‌ ಎಸ್‌. ಡಿ’ ಸೋಜ ವಂದಿಸಿದರು. ತಮಿಳುನಾಡಿನ ಎ.ಎಲ್‌. ಮುತ್ತು ಮತ್ತು ದಿಲ್ಲಿಯ ರೂಬಿ ಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

ಕೂಟದಲ್ಲಿ 8 ನೂತನ ದಾಖಲೆಗಳು
ಕೊನೆಯ ದಿನದ 400×100 ಮೀಟರ್‌ ರಿಲೆಯಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಆಳ್ವಾಸ್‌ನ ಕ್ರೀಡಾಪಟುಗಳಾದ ಶ್ರಿಜನ್‌ ಥಾಮಸ್‌, ತೀರ್ಥೇಶ್‌, ಅಭಿನ್‌ ದೇವಾಡಿಗ ಮತ್ತು ವಿಘ್ನೇಶ್ 40.74 ಸೆಕೆಂಡ್‌ಗಳಲ್ಲಿ ಕ್ರಮಿಸಿ ನೂತನ ಕೂಟ ದಾಖಲೆ ನಿರ್ಮಿಸಿದರು. ಕೂಟದಲ್ಲಿ ಒಟ್ಟು 8 ನೂತನ ದಾಖಲೆಗಳು ನಿರ್ಮಾಣಗೊಂಡವು.


ನಗದು ಪುರಸ್ಕಾರ
ಸಾಧಕ ಕ್ರೀಡಾಳುಗಳಿಗೆ ಆಳ್ವಾಸ್‌ ಭರ್ಜರಿ ನಗದು ಬಹುಮಾನ ನೀಡಿ ಗೌರವಿಸಿದೆ. ಸಮಗ್ರ ಚಾಂಪಿಯನ್‌ಶಿಪ್‌ ಪಡೆದ ತಂಡಕ್ಕೆ ಪ್ರಶಸ್ತಿ ಸಹಿತ 50,000 ರೂ., ರನ್ನರ್ ಅಪ್‌ತಂಡಕ್ಕೆ 30,000 ರೂ., ತೃತೀಯ ಸ್ಥಾನಿ ತಂಡಕ್ಕೆ 20,000 ರೂ., ಕೂಟ ದಾಖಲೆ ನಿರ್ಮಿಸಿದ ಕ್ರೀಡಾಪಟುಗಳಿಗೆ ತಲಾ 25,000 ರೂ.ದಂತೆ 2 ಲಕ್ಷ ರೂ. ಹಾಗೂ ಎಲ್ಲ ವಿಜೇತ ಕ್ರೀಡಾಪಟುಗಳಿಗೆ ಪ್ರಥಮ 25,000 ರೂ., ದ್ವಿತೀಯ 15,000 ರೂ. ಹಾಗೂ ತೃತೀಯ ಸ್ಥಾನಿಗೆ 10,000 ರೂ. ನಗದು ಪುರಸ್ಕಾರವನ್ನು ನೀಡುವ ಮೂಲಕ ಆಳ್ವಾಸ್‌ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಕ್ರೀಡಾಪಟುಗಳಿಗೆ ಆರ್ಥಿಕ ಪ್ರೋತ್ಸಾಹ ನೀಡಿದರು. ರಿಲೇಯಲ್ಲಿ ಕೂಟ ದಾಖಲೆ ಮಾಡಿದ ನಾಲ್ವರಿಗೂ ತಲಾ 25,000ದಂತೆ ಒಟ್ಟು ಒಂದು ಲಕ್ಷ ರೂ. ನಗದು ಪುರಸ್ಕಾರವನ್ನು ಸ್ಥಳದಲ್ಲೇ ಘೋಷಿಸಿದರು. ದೇಶದ 269 ವಿವಿಗಳ 3,600ಕ್ಕೂ ಅ ಧಿಕ ಕ್ರೀಡಾಪಟುಗಳು, ಸಾವಿರಕ್ಕೂ ಅಧಿಕ ಕ್ರೀಡಾಧಿಕಾರಿಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next