ಮೂಡುಬಿದಿರೆ: ಅಖಿಲ ಭಾರತ ವಿ.ವಿ.ಗಳ ಒಕ್ಕೂಟದ ಸಹಭಾಗಿತ್ವದಲ್ಲಿ ರಾಜೀವ ಗಾಂಧಿ ಆರೋಗ್ಯವಿ.ವಿ., ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಂಘಟಿಸಿರುವ 80ನೇ ರಾಷ್ಟ್ರೀಯ ಅಂತರ್ ವಿ.ವಿ. ಕ್ರೀಡಾಕೂಟಕ್ಕೆ ಗುರುವಾರ ಮಧ್ಯಾಹ್ನ ನಡೆದ ಸಾಂಸ್ಕೃತಿಕ ಮೆರವಣಿಗೆ ಮತ್ತಷ್ಟು ಮೆರಗು ನೀಡಿತು.
ಹನುಮಂತ ದೇಗುಲದ ಬಳಿಯಿಂದ ಹೊರಟ ಸಾಂಸ್ಕೃತಿಕ ಮೆರವಣಿಗೆಗೆ ಬಶೀರ್ ಅವರ ಗರ್ನಲ್ ಸಿಡಿತ ಭವ್ಯ ಆರಂಭ ನೀಡಿತು. ಮುಂದೆ ಮಂಡ್ಯದ ನಂದೀಧ್ವಜ, ಪೂಂಜಾಲಕಟ್ಟೆಯ ಶಂಖ ದಾಸರು, ಹರೀಶ್ ತಂಡದ ಕೊಂಬು ಕಹಳೆ, ಬ್ರಹ್ಮಾವರದ ಪನಾಮ ಫಾರ್ಮ್ಸ್ ನ ಸುಲ್ತಾನ್ ಹೋರಿ, ಕಾರ್ಕಳ ರಂಜಿತ್ ಅವರ ಘಟೋತ್ಕಜ, ಉಡುಪಿ ಕಿಶೋರ್‌ರವರ ಉದ್ದದ ಮನುಷ್ಯ, ಗೂಳಿ, ಕಟ್ಟಪ್ಪ, ಪಾಂಚ್ ಪಂಟರ್, ತೀನ್ ಪಂಟರ್, ಮಂಗಳೂರಿನ ಕೊರಗರ ಗಜಮೇಳ, ಆಳ್ವಾಸ್ ವರ್ಣಮಯ 80 ಕೊಡೆಗಳನ್ನು ಹಿಡಿದ ವರ್ಣರಂಜಿತ ದಿರಿಸಿನ ಹುಡುಗ ಹುಡುಗಿಯರು, 30 ತಟ್ಟಿರಾಯ, ಮೈಸೂರು ಮಂಜು ತಂಡದ ಪುರುಷರ ನಗಾರಿ, ಮಹಿಳೆಯರ ನಗಾರಿ, ಕೇರಳದ ಭಾರೀ ಕೋಳಿಗಳು, ಕಾರ್ಕಳದ ದಿವಾಕರ ಅವರ ಭಾರೀ ಗಾತ್ರದ ಕೋಳಿಗಳು ಎಲ್ಲರನ್ನು ಆಕರ್ಷಿಸಿದವು.
ಆಸ್ಟ್ರಿಚ್, ಚಿತ್ರದುರ್ಗದ ಮರಗಾಲು ತಂಡ, ಉಡುಪಿಯ ವಿಚಿತ್ರ ಮಾನವ, ಚಿತ್ರದುರ್ಗದ ಬ್ಯಾಂಡ್ ಸೆಟ್, ಬಳ್ಳಾರಿಯ ಅಶ್ವರಾಮ ತಂಡದ ಹಗಲು ವೇಷಗಳು, ಚಾಮರಾಜ ನಗರದ ಸೋಮನ ಕುಣಿತದವರು, ಆಳ್ವಾಸ್‌ನ ಮಣಿಪುರಿ ದೋಲ್ ಚಲೋಮ್ ತಂಡಗಳು, ಭುವನಜ್ಯೋತಿ ಶಾಲಾ ಬ್ಯಾಂಡ್ ಸೆಟ್, ಉಡುಪಿಯ ಸ್ಕೇಟಿಂಗ್ ತಂಡ, ಕೇರಳದ ತೆಯ್ಯಂ ತಂಡ, ಪ್ರಸಾದ್ ಮಿಜಾರ್ ಅವರ ತುಳು ನಾಡ ವಾದ್ಯತಂಡ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದವು. ಮೆರವಣಿಗೆಯಲ್ಲಿ ಆಳ್ವಾಸ್ ತಂಡಗಳ ಸೊಬಗು ಕಣ್ಮನ ಸೆಳೆಯಿತು.
ಶ್ರೀಲಂಕಾದ ಮುಖವಾಡಗಳು, ಯುವಕ ಯುವತಿಯರ ಡೊಳ್ಳು ಕುಣಿತ, ಎನ್‌ಸಿಸಿ, ಶಾಲಾ ಬ್ಯಾಂಡ್, ಸ್ಕೌಟ್ಸ್, ಗೈಡ್ಸ್, ರೋವರ್ ರೇಂಜರ್, ಕಾರ್ಟೂನ್ಸ್, ಪ್ರಾಣಿ ಪಕ್ಷಿಗಳು, ಕೊಡಗಿನ ವೀರ ಪುರುಷರು, ಮಹಿಳೆಯರು, ಮೈಸೂರು ಪೇಟಧಾರಿಗಳು, ಇಳಕಲ್ ಸೀರೆಯಲ್ಲಿ ಮಿಂಚಿದ ನಾರಿಯರು, ಗುಜರಾತ್ ನಾಗರಿಕರು, ರಾಜಸ್ತಾನ, ಪಂಜಾಬ್, ಕಾಶ್ಮೀರ, ಉತ್ತರ ಕರ್ನಾಟಕ, ಚೀನಾ, ಈಜಿಪ್ಟ್, ಮರಾಠಾ ಸೈನಿಕರು, ಬ್ರಿಟಿಷ್ ಯೋಧರು, ಸಾಮಾನ್ಯ ಸೈನಿಕರು, ಈಶಾನ್ಯ ಭಾರತೀಯರು, ಜೋಕರ್, ಬಾಹುಬಲಿ ಸೈನಿಕರು, 80 ಮಂದಿ ಸಾಂತಾಕ್ಲಾಸ್ ವೇಷಧಾರಿಗಳು, ಪತಾಕೆ ಲಾಂಛನದವರು, ತಿರುವಾದಿರ ತಂಡ, ಲಂಗ ದಾವಣಿಯ ಕೋಮಲೆಯರು 100 ಮಂದಿ , ಏಂಜೆಲ್ಸ್ 80 ಮಂದಿ, ಎಲ್ವ್ ಸ್ 80 ಮಂದಿ, ಕ್ರಿಬ್ ಟೀಮ್, ತ್ರಿವರ್ಣ ಧ್ವಜಧಾರಿಗಳು, ತೆಂಕು ಬಡಗು ಯಕ್ಷಗಾನ ವೇಷಗಳು, ಆಳ್ವಾಸ್ ಶೃಂಗಾರಿ ಮೇಳದವರು ಮೆರವಣಿಗೆಗೆ ಜೀವ ತುಂಬಿದರು.
ಹೊನ್ನಾವರ ಬ್ಯಾಂಡ್, ಪುರವಂತಿಕೆ, ಶಾರ್ದೂಲ, ಜಗ್ಗಳಿಕೆ ಮೇಳ, ದೊಡ್ಡ ಮೋಹಿನಿಯಾಟ್ಟಂ, ಉಡುಪಿಯ ಸಿಂಹರಾಜ, ಕೊಂಚಾಡಿ ಚೆಂಡೆ, ಕೇರಳದ ಅರ್ಧನಾರೀಶ್ವರ , ದೇವರಾಜು ಅವರ ವೀರಭದ್ರ ಕುಣಿತ, ರಮೇಶ್ ಕಲ್ಲಡ್ಕರವರ ಶಿಲ್ಪಾ ಗೊಂಬೆಗಳು, ಯಶೋಧರ ಬಂಗೇರರ ಬಿದಿರೆ ಆರ್ಟ್ಸ್ ತಂಡ, ಬಂಟ್ವಾಳದ ಸ್ನೇಹ ಡಾಲ್ಸ್, ಚಿಲಿಪಿಲಿ ಗೊಂಬೆ, ಮಂಗಳೂರಿನ ದೀಪಕ್ ಅವರ ಕಿಂಗ್ ಕಾಂಗ್, ಬೆಳ್ತಂಗಡಿಯ ಶೆಟ್ಟಿ ಆರ್ಟ್ಸ್ ಬೊಂಬೆಗಳು, ಕೇರಳದ ದೈವಗಳು, ಮಂಡ್ಯದ ಪೂಜಾ ಕುಣಿತ, ಕಾಟಿಪಳ್ಳದ ದಪ್ಪು, ಮಂದಾರ್ತಿಯ ಗುಮಟೆ ಕುಣಿತ, ಬೆದ್ರ ಫ್ರೆಂಡ್ಸ್‌ನ ಹುಲಿವೇಷ, ಹಾವೇರಿಯ ಬೆಂಡರ ಕುಣಿತ, ರಾಣೆಬೆನ್ನೂರು ಬ್ಯಾಂಡ್, ಕೇರಳದ ಚಿಟ್ಟೆ ವೇಷ, ಕಾಳಿ ವೇಷ, ದೇವರ ವೇಷ, ಪಂಜಾಬ್ ಬ್ಯಾಂಡ್, ಶಿವಮೊಗ್ಗದ ಡೊಳ್ಳು, ಕೇರಳದ ಪಂಚವಾದ್ಯ, ಅಶ್ವತ್ಥಪುರದ ನಾದಸ್ವರ, ಮಂಗಳೂರಿನ 20 ಮಂದಿ ಬೌನ್ಸರ್, ಟ್ರೋಫಿಗಳನ್ನು ಹೊತ್ತ ಪಲ್ಲಕ್ಕಿ, ಕೂಟದ ಲಾಂಛನ ಹೊತ್ತ ರಥ, ಆಂಬ್ಯುಲೆನ್ಸ್, ಸ್ವತ್ಛತಾ ಸಿಬಂದಿ, ಪೂರ್ಣಕುಂಭ ಹೊತ್ತ 80 ಮಂದಿ ಆಳ್ವಾಸ್ ಕನ್ನಿಕೆಯರು, ಬೆಳಗಾವಿ ಪೇಟ ತೊಟ್ಟ ಗಣ್ಯರು ಹಾಗು ಅತಿಥಿಗಳನ್ನು ಇದಿರ್ಗೊಳ್ಳುತ್ತ ಸ್ವರಾಜ್ಯಮೈದಾನಕ್ಕೆ ಬರಮಾಡಿಕೊಂಡರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ವಿವೇಕ ಆಳ್ವ ಸಹಿತ ಟ್ರಸ್ಟಿಗಳು , ಸಿಬಂದಿಗಳು ಸಮಗ್ರ ಉಸ್ತುವಾರಿ ನೋಡಿಕೊಂಡರು. ಈ ಎಲ್ಲಾ ತಂಡಗಳಲ್ಲಿ ಆಳ್ವಾಸ್ ವಿದ್ಯಾರ್ಥಿಗಳೇ 2000ಕ್ಕೂ ಅಧಿಕ ಇದ್ದರೆ ಇತರ ಕಲಾ ತಂಡಗಳಲ್ಲಿ ಸುಮಾರು 3000 ಮಂದಿ ಕಲಾವಿದರಿದ್ದು ಈ ಹಿಂದೆ ಮೆರವಣಿಗೆಗಿಂತ ಭವ್ಯವಾಗಿ ವೀಕ್ಷಕರ ಕಣ್ಮನ ಸೆಳೆದರು.