Advertisement

ಶೇ.20 ಭೂಮಿಯಲ್ಲಿ 800 ಕೋಟಿ ಜನರ ವಾಸ: ಪರಿಸರವಾದಿ, ನಟ ಸುರೇಶ ಹೆಬ್ಳೀಕರ್‌ ಅಭಿಮತ 

02:04 PM Jun 10, 2022 | Team Udayavani |

ಮುಂಡರಗಿ: ನಾವು ಬದುಕುತ್ತಿರುವ ಪರಿಸರ ಮಾಲಿನ್ಯದಿಂದ ಕಲುಷಿತವಾಗುತ್ತಿರುವುದು ಖೇದಕರ ಸಂಗತಿ. ಭೂಮಿಯಲ್ಲಿ ಶೇ.20 ರಷ್ಟು ಪರಿಸರವಿದ್ದು, ಶೇ.70 ರಷ್ಟು ಸಮುದ್ರವಿದೆ. ಶೇ.10 ರಷ್ಟು ಹಿಮಾವೃತವಾಗಿದೆ. ಕೇವಲ ಶೇ.20ರಷ್ಟಿರುವ ಪರಿಸರದ ಭೂಮಿಯಲ್ಲಿ 800 ಕೋಟಿ ಜನರು ಬದುಕುತ್ತಿದ್ದೇವೆ ಎಂದು ಪರಿಸರವಾದಿ, ನಟ ಸುರೇಶ ಹೆಬ್ಳೀಕರ್‌ ಹೇಳಿದರು.

Advertisement

ಪಟ್ಟಣದ ಕೆ.ಆರ್‌.ಬೆಲ್ಲದ ಮಹಾ ವಿದ್ಯಾಲಯದ ಸಭಾಭವನದಲ್ಲಿ ವಿಶ್ರಾಂತ ಪ್ರಾಚಾರ್ಯ ಸಿ.ಎಸ್‌.ಅರಸನಾಳ ಅವರ “ಹಸಿರು ಇಲ್ಲದಿರೆ ಉಸಿರು ನಿಲ್ಲುವುದು’ ಪರಿಸರ ಜಾಗೃತಿ ವಚನಗಳ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ದೇಶದ ಸಂಪ್ರದಾಯ, ಸಂಸ್ಕೃತಿ, ಇತಿಹಾಸದ ಕುರಿತು ಯೋಚನೆ ಮಾಡಿದಂತೆ ಪರಿಸರದ ಬಗ್ಗೆಯೂ ಯೋಚಿಸಬೇಕಿದೆ. ಪರಿಸರ ಎಂದರೆ, ಮಣ್ಣು, ಕಲ್ಲು, ಹುಲ್ಲು, ಕಂಟಿ, ಪಾತರಗಿತ್ತಿ, ಪಕ್ಷಿ, ಪ್ರಾಣಿ ಇವುಗಳು ಇದ್ದರೆ ಮಾತ್ರ ಊರುಗಳು ಅಂದವಾಗಿರುತ್ತವೆ. ಪಶ್ಚಿಮ ಘಟ್ಟದಲ್ಲಿ ಕಾಡು ಕಡಿದು ರಬ್ಬರ್‌, ಕಾಫಿ, ಚಹಾ ಬೆಳೆಯುತ್ತಿರುವುದು. ಹೀಗಾಗಿ, ದಕ್ಷಿಣ ಭಾರತದಲ್ಲಿ ಸಾವಿರಾರು ಎಕರೆ ಕಾಡು ಹಾಳಾಗಿದೆ. ಪಶ್ಚಿಮ ಘಟ್ಟದಲ್ಲಿ 65 ಮುಖ್ಯ ನದಿಗಳು ಹರಿಯುತ್ತವೆ. 9 ಸಾವಿರಕ್ಕಿಂತ ಹೆಚ್ಚಿನ ಕಾಡುಗಳಿವೆ ಎಂದರು.

ಕರ್ನಾಟಕದಲ್ಲಿನ ಎಲ್ಲ ಪಶ್ಚಿಮ ಘಟ್ಟಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಅವು ಉಳಿದರೆ ಮಾತ್ರ ಮನುಷ್ಯ ಉಳಿಯಲು ಸಾಧ್ಯ. ಕಾಡು ಇದ್ದರೆ ಮಾತ್ರ ಕೃಷಿ, ಹೈನುಗಾರಿಕೆ, ತೋಟಗಾರಿಕೆ, ಔಷಧ ಸಸ್ಯ ಎಲ್ಲವೂ ಸಿಗುತ್ತವೆ. ಮಳೆ-ಬೆಳೆ ಬರುತ್ತದೆ. ಪರಿಸರ ಪ್ರಜ್ಞೆಯನ್ನು ಸಿ.ಎಸ್‌.ಅರಸನಾಳ ಅವರ “ಹಸಿರು ಇಲ್ಲದಿರೆ ಉಸಿರು ನಿಲ್ಲುವುದು’ ಕೃತಿಯಲ್ಲಿ ವ್ಯಕ್ತವಾಗಿದೆ ಎಂದರು.

ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಪರಿಸರವೆಂದರೆ ಕೇವಲ ಗಿಡ, ಮರ, ಬಳ್ಳಿಗಳಲ್ಲ. ಸೃಷ್ಟಿಯೊಳಗೆ ಇರುವ ಎಲ್ಲವೂ ಪರಿಸರದಿಂದ ಬಂದಿರುವಂತಹವುಗಳಾಗಿವೆ. ನಾವೆಲ್ಲರೂ ಪ್ರಕೃತಿಯ ಮಕ್ಕಳೇ ಆಗಿದ್ದೇವೆ. ಈ ಜಗತ್ತಿನಲ್ಲಿ ಗಾಳಿಗೆ ಇರುವಷ್ಟು ಬೆಲೆ ಬೇರೆ ಯಾವುದಕ್ಕೂ ಇಲ್ಲ. ಇದರ ಮಹತ್ವವನ್ನು ಕೊರೊನಾ ಸಂದರ್ಭದಲ್ಲಿ ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ ಎಂದರು.

Advertisement

ಶ್ರೀ ನಾಡೋಜ ಡಾ|ಅನ್ನದಾನೀಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಿ.ಎಸ್‌.ಅರಸನಾಳ ಅವರು ಉತ್ತಮವಾದ ಪರಿಸರದ ವಚನಗಳ ಕೃತಿ ಹೊರತಂದಿದ್ದಾರೆ. ಗಿಡ-ಮರಗಳನ್ನು ಬೆಳೆಸುವುದರಿಂದ ನಾವು ಸಾಕಷ್ಟು ಪ್ರಾಣವಾಯು ಪಡೆದುಕೊಳ್ಳಬಹುದು. ಪರಿಸರದ ಮಹತ್ವ, ಪರಿಸರ ಬೆಳೆಸಿದರೆ ಅದರಿಂದಾಗುವ ಉಪಯೋಗ ಮತ್ತು ಮಹತ್ವದ ಕುರಿತು ಅರಸನಾಳ ಅವರು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ ಎಂದರು.

ಮಾಜಿ ಸಚಿವ ಎಸ್‌.ಎಸ್‌.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಎಲ್ಲ ಹಂತದ ಜನಪ್ರತಿನಿಧಿಗಳು ಮುಂದಾಗಬೇಕೆಂದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಕೃತಿ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ, ವೈ.ಎನ್‌.ಗೌಡರ್‌, ಕಸಾಪ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ, ಎ.ಬಿ.ಹಿರೇಮಠ, ಆಡಳಿತಾಧಿಕಾರಿ ಡಾ|ಬಿ.ಜಿ.ಜವಳಿ, ಸಿ.ಎಸ್‌. ಅರಸನಾಳ, ಭಾಗೀರಥಿ ಅರಸನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಿ.ಕೆ.ಗಣಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗೇಶ ಹುಬ್ಬಳ್ಳಿ ಸ್ವಾಗತಿಸಿ, ಡಾ|ನಿಂಗೂ ಸೊಲಗಿ, ಶಶಿಕಲಾ ಕುಕುನೂರು ನಿರೂಪಿಸಿ, ಮಂಜುನಾಥ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next