ಬೆಂಗಳೂರು: ವಾರದ ಒಳಗೆ ನಗರದ ವಿವಿಧ ಕಡೆಗಳಲ್ಲಿ ಎಂಟು ಹೊಸ ರೈಲು ಸೇವೆ ಆರಂಭಿಸಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದರು. ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ “ನೂತನ ರೈಲ್ವೆ, ನೂತನ ಕರ್ನಾಟಕ’ ರೈಲ್ವೆ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ರೈಲುಗಳ ಸೇವೆ ಆರಂಭಿಸಲು ನಿರ್ಧರಿಸಲಾಗಿದ್ದು, ಬಾಣಸವಾಡಿ-ಹೊಸೂರು, ಹೊಸೂರು-ಬಾಣಸವಾಡಿ ತಲಾ 2, ವೈಟ್‌ಫೀಲ್ಡ್-ಬೈಯ್ಯಪ್ಪನಹಳ್ಳಿ ನಡುವೆ ತಲಾ 1 ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ-ಬೈಯ್ಯಪ್ಪನಹಳ್ಳಿ ನಿಲ್ದಾಣಗಳ ನಡುವೆ ತಲಾ 1 ಸೇರಿದಂತೆ ಒಟ್ಟು ಎಂಟು ರೈಲುಗಳು ಸಂಚರಿಸಲಿವೆ ಎಂದು ಮಾಹಿತಿ ನೀಡಿದರು.
ಸಬ್ ಅರ್ಬನ್; 6 ತಿಂಗಳಲ್ಲಿ ಡಿಪಿಆರ್: ಬೆಂಗಳೂರು ಉಪನಗರ ರೈಲು ಯೋಜನೆ ಅನುಷ್ಠಾನ ಸಂಬಂಧ ಈಗಾಗಲೇ ಸಮೀಕ್ಷಾ ಕಾರ್ಯ ಆರಂಭವಾಗಿದ್ದು, ಆರು ತಿಂಗಳಲ್ಲಿ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಲಿದೆ ಎಂದು ತಿಳಿಸಿದರು. ನಮ್ಮ ಅವಧಿಯಲ್ಲಿ ನೈರುತ್ಯ ರೈಲ್ವೆ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಸಾಧಿಸಿದೆ. 2020ರ ವೇಳೆಗೆ ದೇಶದ ರೈಲ್ವೆಯ ಇಡೀ ಚಿತ್ರಣ ಬದಲಾಗಲಿದೆ.
ರೈಲ್ವೆ ಮೂಲಸೌಕರ್ಯ, ಸುರಕ್ಷತೆ, ಜೋಡಿ ಮಾರ್ಗ ನಿರ್ಮಾಣ, ರೈಲು ನಿಲ್ದಾಣಗಳ ಉನ್ನತೀಕರಣ ಸೇರಿದಂತೆ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಯುಪಿಎ ಸರ್ಕಾರದ ಹತ್ತು ವರ್ಷದ ಆಡಳಿತದಲ್ಲಿ ಸಾಧಿಸಿದ್ದನ್ನು ಕೇವಲ ಮೂರುವರೆ ವರ್ಷದಲ್ಲಿ ಸಾಧಿಸಿದ್ದೇವೆ ಎಂದರು.
ಸುಮಾರು 75 ಸಾವಿರ ಕೋಟಿ ವೆಚ್ಚದಲ್ಲಿ ಜಗತ್ತಿನ ಅತಿದೊಡ್ಡ ರೈಲ್ವೆ ಸಿಗ್ನಲಿಂಗ್ ಯೋಜನೆ ರೂಪಿಸಿದ್ದು, ಇಡೀ ರೈಲ್ವೆಯನ್ನು ಆಧುನೀಕರಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್, ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಗುಪ್ತಾ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಆರ್.ಕೆ. ಸಕ್ಸೇನಾ, ಶ್ರೀಧರ್‌ಮೂರ್ತಿ ಇತರರಿದ್ದರು.
ಕೇಂದ್ರದ ಹಸ್ತಕ್ಷೇಪವಿಲ್ಲ: ಸಚಿವ: ಮೈಸೂರು-ತಲಚೇರಿ ನಡುವೆ ಹೊಸ ಮಾರ್ಗ ನಿರ್ಮಾಣ ಯೋಜನೆಯು ಎರಡು ರಾಜ್ಯಗಳಿಗೆ ಸಂಬಂಧಿಸಿರುವುದರಿಂದ ಇದರಲ್ಲಿ ಕೇಂದ್ರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಚಿವ ಪಿಯೂಷ್ ಗೋಯಲ್ ಸ್ಪಷ್ಟಪಡಿಸಿದರು.
ಮೈಸೂರು-ತಲಚೇರಿ ನಡುವೆ ಹೊಸ ಮಾರ್ಗ ನಿರ್ಮಾಣಕ್ಕೆ ಕೇರಳ ಪ್ರಸ್ತಾವನೆ ಸಲ್ಲಿಸಿತ್ತು. ಈ ಯೋಜನೆಗೆ ಕೊಡಗು ಭಾಗದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಪರಿಸರ ಮತ್ತು ವನ್ಯಜೀವಿಗಳಿಗೆ ಮಾರಕವಾಗುವುದರಿಂದ ಕೈಬಿಡಬೇಕು ಎಂಬ ಒತ್ತಾಯ ಕೇಳಿಬಂದಿದೆ ಹಾಗಾಗಿ, ಈ ಯೋಜನೆ ಅನುಷ್ಠಾನಕ್ಕೆ ಕೇಂದ್ರಕ್ಕೆ ಆಸಕ್ತಿ ಇಲ್ಲ ಎಂದರು.