ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಪಟ್ಟಣದಲ್ಲಿ ಚಾಬೂ ಸಾಬ್ ಅವರ ಮನೆ ಇದೆ. ಇಲ್ಲಿ ಕಟ್ಟಡ ಕಟ್ಟಿ ಬಾಡಿಗೆ ಕೊಟ್ಟರೆ ಬಾಡಿಗೆ ಬರುತ್ತದೆ. ಇವರು ಹಾಗೆ ಮಾಡದೆ ಮನೆಯ ಸುತ್ತಮುತ್ತಲಿನ ಜಮೀನಿನಲ್ಲಿ ಅಡಿಕೆ ಬೆಳೆ ತೆಗೆಯುತ್ತಿದ್ದಾರೆ. ಇದರ ಜೊತೆ ಬಾಳೆ, ಕಾಳು ಮೆಣಸು, ಏಲಕ್ಕಿ, ನಿಂಬೆ, ಪೇರಲ, ಮಾವು ಹೀಗೆ ಬಗೆ ಬಗೆಯ ಕೃಷಿ ಎಲ್ಲರ ಗಮನ ಸೆಳೆಯುತ್ತಿದೆ.
ರಿಪ್ಪನ್‌ಪೇಟೆ -ತೀರ್ಥಹಳ್ಳಿ ಮಾರ್ಗದಲ್ಲಿ ಮುಖ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇವರ ಖುಷ್ಕಿ ಜಮೀನಿದೆ. ಮನೆ ಮುಂಭಾಗದ ಒಂದು ಎಕರೆಯಲ್ಲಿ ಅಡಿಕೆ ತೋಟ ನಿರ್ಮಿಸಿದ್ದಾರೆ. ಅದರಲ್ಲಿ 800 ಮರಗಳಿವೆ. ಹೊಸನಗರದ ಮಾಜಿ ಶಾಸಕರಾಗಿದ್ದ ಸ್ವಾಮಿರಾವ್ ಅವರ ಕೃಷಿಯಿಂದ ಪ್ರೇರಿತರಾಗಿ ಇವರು ಕೃಷಿ ಆರಂಭಿಸಿದರು. ನೀರಿನ ವ್ಯವಸ್ಥೆ ಇಲ್ಲದ ಕಾರಣ ತೆರೆದ ಬಾವಿಯಿಂದ ನೀರು ಸೇದಿ ಪ್ರತಿ ಅಡಿಕೆ, ತೆಂಗಿನ ಗಿಡಗಳಿಗೆ ಹಾಕುತ್ತಿದ್ದರು. ಗಿಡ ನೆಟ್ಟು 3 ನೇ ವರ್ಷ ಕೊಳವೆ ಬಾವಿ ತೆಗೆಸಿ ನೀರಿಗೆ ವ್ಯವಸ್ಥೆ ಮಾಡಿಕೊಂಡರು.
ಅಡಿಕೆ ಮರಗಳ ನಡುವೆ 800 ಗೊಬ್ಬರ ಗಿಡ ನೆಟ್ಟಿದ್ದಾರೆ. ಅವಕ್ಕೆ ಕಾಳು ಮೆಣಸಿನ ಬಳ್ಳಿ ಹಬ್ಬಿಸಿದ್ದಾರೆ. ಫಣಿಯೂರು, ಕರಿಮುಂಡ ತಳಿಯ ಮೆಣಸಿನ ಬಳ್ಳಿಗಳ ವಯಸ್ಸು 12 ವರ್ಷ. ಪ್ರತಿ ಬಳ್ಳಿಯಿಂದ ವರ್ಷಕ್ಕೆ ಸರಾಸರಿ 2 ರಿಂದ 2.5 ಕಿ.ಗ್ರಾಂ.ಕಾಳು ಮೆಣಸಿನಂತೆ, ವರ್ಷಕ್ಕೆ 18 ಕ್ವಿಂಟಾಲ್ ಫಸಲು ದೊರೆಯುತ್ತಿದೆ. ಇದರಿಂದ ವರ್ಷಕ್ಕೆ ಸರಾಸರಿ ರೂ.7 ಲಕ್ಷ ಆದಾಯ ದೊರೆಯುತ್ತಿದೆ. ಗೊಬ್ಬರ, ನೀರಾವರಿ ವ್ಯವಸ್ಥೆ, ಔಷಧ ಸಿಂಪಡಣೆ, ಕೂಲಿ ನಿರ್ವಹಣೆ ಇತ್ಯಾದಿ ಎಲ್ಲ ಲೆಕ್ಕ ಹಾಕಿದರೂ ಕಾಳು ಮೆಣಸಿನ ಕೃಷಿಯಿಂದ ವರ್ಷಕ್ಕೆ ಸರಾಸರಿ ಒಂದು ಲಕ್ಷ ರೂ.ಖರ್ಚು ಬರಬಹುದೆಂದು ಲೆಕ್ಕ ಹಾಕಿದರೂ ವರ್ಷಕ್ಕೆ 6 ಲಕ್ಷ ಲಾಭ.
ಅಡಿಕೆ ಮರಗಳಿಗೆ ಈಗ 15 ವರ್ಷದ ಪ್ರಾಯ. ಇದರಿಂದ ವಾರ್ಷಿಕ ಆದಾಯ ಸರಾಸರಿ 3 ಲಕ್ಷರೂ. ಖರ್ಚು ಸುಮಾರು 1.5 ಲಕ್ಷ ಲೆಕ್ಕ ಹಾಕಿದರೂ, 2.5 ಲಕ್ಷ ಲಾಭ. ಅಲ್ಲದೆ ಪ್ರತಿ ವರ್ಷ ಸುಮಾರು 2 ಸಾವಿರ ಅಡಿಕೆ ಸಸಿ ಮತ್ತು 2 ಸಾವಿರ ಕಾಳು ಮೆಣಸಿನ ಬಳ್ಳಿಗಳ ನರ್ಸರಿ ಗಿಡ ತಯಾರಿಸುತ್ತಾರೆ. ಅವುಗಳನ್ನು ಕಡಿಮೆ ದರದಲ್ಲಿ, ಬಡ ರೈತರಿಗೆ ಮಾರಾಟಮಾಡುತ್ತಾರೆ. ಅಡಿಕೆ ಮತ್ತು ಕಾಳು ಮೆಣಸಿಗೆ ಸಗಣಿ, ಕುರಿ ಗೊಬ್ಬರ ಮಾತ್ರ ಬಳಸುತ್ತಾರೆ. ಇವಲ್ಲದೆ 50 ಮಾವು, 20 ನಿಂಬು,50 ತೆಂಗು,100 ಬಾಳೆ ಗಿಡಗಳೂ ಇವರ ಕೃಷಿ ಜಮೀನಿನಲ್ಲಿ ಜಾಗ ಪಡೆದುಕೊಂಡಿವೆ. ಈ ಬಹುಬಗೆಯ ಕೃಷಿ ಪದ್ಧತಿಯಿಂದ ಜಾಬೂ ಸಾಬ್ ಕೇವಲ ಒಂದು ಎಕರೆಯಲ್ಲಿ ಕೃಷಿಮಾಡಿಯೂ ಸುಮಾರು ಲಕ್ಷ ರೂ. ಆದಾಯ ಪಡೆಯಬಹುದು ಎಂಬುದು ಎಲ್ಲರಿಗೂ ಸಾಧಿಸಿ ತೋರಿಸಿದ್ದಾರೆ.
– ಕೌಸ್ತುಭ ಹೆಗಡೆ ಆನಂದಪುರಂ