ಗರ್ಭಿಣಿಯನ್ನು ಹೆರಿಗೆಗಾಗಿ ಡೋಲಿ ಕಟ್ಟಿ 8 ಕಿ.ಮೀ. ದೂರ ಹೊತ್ತೂಯ್ದ ಘಟನೆ ಮಲೆ ಮಹದೇಶ್ವರ ಬೆಟ್ಟ ಸಮೀಪದ ದೊಡ್ಡಾಣೆ ಗ್ರಾಮದಲ್ಲಿ ಜರಗಿದೆ.ದೊಡ್ಡಾಣೆ ಗ್ರಾಮದ ಶಾಂತಲಾ ಎಂಬಾಕೆಗೆ ಬುಧವಾರ ತಡರಾತ್ರಿ 2 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಚಿಕಿತ್ಸೆಗಾಗಿ ದೂರದ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಬೇಕಾಗಿತ್ತು. ಈ ವೇಳೆ ದಟ್ಟಕಾನನದ ನಡುವೆ ಕಾಡುಪ್ರಾಣಿಗಳ ದಾಳಿ ಭಯದಿಂದ ಕುಟುಂಬಸ್ಥರು ಡೋಲಿ ಕಟ್ಟಿ ಬ್ಯಾಟರಿ ಬೆಳಕಿನಲ್ಲಿ ಹೊತ್ತು ತಂದಿದ್ದಾರೆ. ದೊಡ್ಡಾಣೆ ಗ್ರಾಮದಿಂದ ಹೊರಟವರು ಬೆಳಗ್ಗೆ 6ರ ಸುಮಾರಿಗೆ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿದ್ದಾರೆ.ಅರಣ್ಯ ಇಲಾಖೆಯಿಂದ ಕಾಡಂಚಿನ ಗ್ರಾಮಗಳ ಜನರ ಅನುಕೂಲಕ್ಕಾಗಿ ಜನ-ವನ ಹೆಸರಿನಡಿ ವಾಹನಗಳನ್ನು ಒದಗಿಸಲಾಗಿತ್ತು. ಆದರೆ, ದೊಡ್ಡಾಣೆ ಗ್ರಾಮದ ಶಾಂತಲಾಳಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಸಂಬಂಧಪಟ್ಟ ವಾಹನ ಚಾಲಕರು ಮತ್ತು ಅರಣ್ಯ ಇಲಾಖಾ ಅಧಿಕಾರಿಗಳಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಸಂದೇಶವಷ್ಟೇ ಲಭ್ಯವಾಗಿದೆ.