ಬೆಳಗಾವಿ: ಮುಂಬರುವ ವಿಧಾನಸಭಾ ಚುನಾವಣ ವೆಚ್ಚ ಭರಿಸಲು 300 ಕೋಟಿ ರೂ., ಮುಖ್ಯಮಂತ್ರಿ, ರಾಜ್ಯಪಾಲರು ಸಹಿತ ಗಣ್ಯರ ಹೆಲಿಕಾಪ್ಟರ್ ಹೆಚ್ಚುವರಿ ವೆಚ್ಚವಾಗಿ 6 ಕೋಟಿ ರೂ., ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳ ಮಾಲಕರಿಗೆ 30 ಕೋಟಿ ರೂ. ಪರಿಹಾರ ಸಹಿತ 8001.12 ಕೋಟಿ ರೂ. ಮೊತ್ತದ ಎರಡನೇ ಕಂತಿನ ಪೂರಕ ಅಂದಾಜುಗಳನ್ನು ಉಭಯ ಸದನಗಳಲ್ಲಿ ಸೋಮವಾರ ಮಂಡಿಸಲಾಯಿತು.
ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳ ಪರವಾಗಿ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಮಂಡಿಸಿದರು.
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ 55.42 ಕೋಟಿ ರೂ., ಸ್ಥಳೀಯ ಗೋ ತಳಿಗಳನ್ನು ಸಂರಕ್ಷಿಸಲು ಮತ್ತು ಅವುಗಳ ಸಂತತಿ ಹೆಚ್ಚಿಸಲು ಕೆಎಂಎಫ್ ಮೂಲಕ ಗೋ ತಳಿಗಳನ್ನು ರೈತರಿಗೆ ಹಂಚಿಕೆ ಮಾಡಲು 7 ಕೋಟಿ ರೂ., ಮೀನುಗಾರಿಕೆ ಇಲಾಖೆಯಿಂದ ನಾಡ ದೋಣಿಗಳಿಗೆ ಸೀಮೆಎಣ್ಣೆ ಸರಬರಾಜಿಗೆ 18.42 ಕೋಟಿ ರೂ. ಪೂರಕ ಅಂದಾಜಿನಲ್ಲಿ ಒದಗಿಸಲಾಗಿದೆ.
ಅತಿವೃಷ್ಟಿಗೆ 758.19 ಕೋಟಿ ರೂ.ಅತಿವೃಷ್ಟಿಯಿಂದ ಆದ ಬೆಳೆ ಹಾನಿಗೆ ರಾಜ್ಯ ಸರಕಾರದಿಂದ ಹೆಚ್ಚುವರಿ ಪರಿಹಾರ ನೀಡಲು 758.19 ಕೋಟಿ ರೂ. ಅನುದಾನ, ಜಲಧಾರೆ ಯೋಜನೆ ನಿರ್ವಹಣೆ ವೆಚ್ಚ ಮತ್ತು ವಿದ್ಯುತ್ ವೆಚ್ಚಗಳಿಗಾಗಿ 200 ಕೋಟಿ ರೂ., ಬಂಧನದಲ್ಲಿದ್ದ ಕೈದಿಗಳ ಸಾವಿಗೆ ಪರಿಹಾರ ನೀಡಲು 50 ಲಕ್ಷ ರೂ. ಒದಗಿಸಲಾಗಿದೆ.
ದಿ| ಪುನೀತ್ ರಾಜ್‌ಕುಮಾರ್ ಅವರ ಶಕ್ತಿಧಾಮ ಸಂಸ್ಥೆಗೆ 2.5 ಕೋಟಿ ರೂಪಾಯಿ, ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಕಾರ್ಯಕ್ರಮಕ್ಕೆ ವೆಚ್ಚವಾಗಿರುವ ಹೆಚ್ಚುವರಿ 5 ಕೋಟಿ ರೂಪಾಯಿ, ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ 4.99 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಒದಗಿಸಲು ಪೂರಕ ಅಂದಾಜಿನಲ್ಲಿ ಪ್ರಸ್ತಾಪಿಸಲಾಗಿದೆ.